ಆಸ್ಪತ್ರೆ ಅವ್ಯವಸ್ಥೆಯ ಆಗರ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮೇ 18
ಸುಣ್ಣ-ಬಣ್ಣ ಕಾಣದ ಗೋಡೆ, ಕೊಳಗೇರಿಯಂತಾಗಿರುವ ರೋಗಿಗಳ ವಾರ್ಡ್, ಅಲ್ಲಲ್ಲಿ ಬಿಸಾಡಿದ ರೋಗಿಗಳ ಚಿಂದಿ ಬಟ್ಟೆಗಳು, ಗೋಡೆಗಳ ಮೇಲೆ ತಂಬಾಕು, ಗುಟ್ಕಾ ತಿಂದು ಉಗುಳಿದ ಹೊಲಸು, ಗಬ್ಬೆದ್ದು ನಾರುತ್ತಿರುವ ಶೌಚಾಲಯ, ಕೊಳಕು ವಾಸನೆಯ ಗಾದಿ, ತಲೆದಿಂಬುಗಳು ಇದು ಶಿರಹಟ್ಟಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ. ರೋಗಿಗಳನ್ನು ವಾಸಿಮಾಡಬೇಕಾದ ಆಸ್ಪತ್ರೆಯೇ ಅವ್ಯವಸ್ಥೆಯಿಂದ ನರಳುತ್ತಿದೆ.
ಆಸ್ಪತ್ರೆಯಲ್ಲಿ ಒಟ್ಟು 11 ಜನ ವೈದ್ಯರಿರಬೇಕು. ಆದರೆ, ಕೇವಲ 4 ಜನರಿದ್ದಾರೆ. ಸಿಬ್ಬಂದಿಯ ಕೊರತೆ ಇದ್ದು, ಇದ್ದ ವೈದ್ಯರೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಂದು ರೋಗಿಗಳ ತಪಾಸಣೆ ಮಾಡುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ರಾತ್ರಿ ಸಮಯದಲ್ಲಿ ರೋಗಿಗಳ ನರಳಾಟ ಹೇಳತೀರದು. ಅನೇಕ ಬಾರಿ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಬಡ ರೋಗಿಗಳಿಗೆ ಸಮಸ್ಯೆ: ರಕ್ತ ಹಾಗೂ ಮೂತ್ರ ತಪಾಸಣೆಗೆ ಯಂತ್ರೋಪಕರಣಗಳು ಇಲ್ಲದಿರುವುದರಿಂದ ಬಡ ರೋಗಿಗಳ ಜೇಬಿಗೆ ಕತ್ತರಿ ಬೀಳುತ್ತಿದೆ. ರಕ್ತ ತಪಾಸಣೆಗೆ ಖಾಸಗಿ ಆಸ್ಪತ್ರೆಗೆ ಹೋಗುವುದು ಅನಿವಾರ್ಯವಾಗಿದೆ. ಸರ್ಕಾರ ಪ್ರತಿ ತಿಂಗಳು ಲಕ್ಷಾಂತರ ಹಣ ವ್ಯಯಿಸಿ ಗುಣಮಟ್ಟದ ಔಷಧಿಯನ್ನು ಆಸ್ಪತ್ರೆಗೆ ಪೂರೈಕೆ ಮಾಡುತ್ತಿದ್ದರೂ, ರೋಗಿಗಳಿಗೆ ಮಾತ್ರ ಯಾವುದೇ ಔಷಧಿ ನೀಡುವುದಿಲ್ಲ. ಎಲ್ಲರೂ ಹೊರಗಡೆಯಿಂದಲೇ ಖರೀದಿಸುವಂತಾಗಿದೆ.
ಆಸ್ಪತ್ರೆಗೆ ತಿಂಗಳಲ್ಲಿ 50-60 ಗರ್ಭಿಣಿಯರು ಹೆರಿಗೆಗೆ ದಾಖಲಾಗುತ್ತಾರೆ. ಆದರೆ ಹೆರಿಗೆ ಮಾಡಿಸಲು ಮಹಿಳಾ ವೈದ್ಯೆ ಇಲ್ಲದಿರುವುದು ತೀವ್ರ ತೊಂದರೆಯಾಗಿದೆ ಎಂದು ಗರ್ಭಿಣಿಯರು ಅಸಮಾಧಾನ ವ್ಯಕ್ತಪಡಿಸಿದರು. ಆಡಳಿತ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಹೆರಿಗೆ ಮಾಡಿಸುತ್ತಿದ್ದು, ಓರ್ವ ಗರ್ಭಿಣಿಗೆ ರು. 500 ರಿಂದ 1000 ನೀಡಿದರೆ ಮಾತ್ರ ಹೆರಿಗೆ ಮಾಡಿಸಲು ಮುಂದಾಗುತ್ತಾರೆ ಎಂಬ ಗಂಭೀರ ಆರೋಪ ಮಹಿಳೆಯರಿಂದ ಕೇಳಿ ಬರುತ್ತಿದೆ.
ಆಸ್ಪತ್ರೆಯ ದುರಸ್ತಿಗೆಂದು ಪ್ರತಿ ವರ್ಷವೂ ಬರುವ ಲಕ್ಷಾಂತರ ಅನುದಾನ ಯಾವುದಕ್ಕೆ ಬಳಕೆ ಆಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಆಸ್ಪತ್ರೆ ಮಾತ್ರ ಗಬ್ಬೆದ್ದು ನಾರುತ್ತಿದೆ. ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರು ಸಿಗುವುದಿಲ್ಲ. ಪಟ್ಟಣದ ಸಾರ್ವಜನಿಕರು ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಮತ್ತು ವೈದ್ಯರ ಕಾರ್ಯವೈಖರಿ ಬಗ್ಗೆ ಅನೇಕ ಬಾರಿ ಪ್ರತಿಭಟನೆ ಮಾಡಿ ಎಚ್ಚರಿಸಿದ್ದರೂ ಸುಧಾರಣೆ ಆಗಿಲ್ಲ. ಜಿಲ್ಲಾ ವೈದ್ಯಾಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುವ ಸಿಬ್ಬಂದಿ ಹಾಗೂ ವೈದ್ಯರ ಮೇಲೆ ನಿಗಾವಹಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವೈದ್ಯರ ಪ್ರತಿಕ್ರಿಯೆ: ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಈ ಎಲ್ಲ ಸಮಸ್ಯೆಗಳ ಕುರಿತು ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಇದ್ದಷ್ಟು ಸಿಬ್ಬಂದಿಯೇ ರೋಗಿಗಳ ತಪಾಸಣೆ ಮತ್ತು ಗರ್ಭಿಣಿಯರಿಗೆ ಹೆರಿಗೆ ಮಾಡಿಸುತ್ತಿದ್ದು, ಅವರೇ ಪ್ರೀತಿಯಿಂದ ಹಣ ಕೊಟ್ಟರೆ ಮಾತ್ರ ಪಡೆಯುತ್ತೇವೆ. ರೋಗಿಗಳಿಗೆ ಇಷ್ಟು ಹಣ ನೀಡಿ ಎಂದು ತೊಂದರೆ ಮಾಡಿಲ್ಲ ಎಂದು ಹೇಳುತ್ತಾರೆ.
-ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

