ಗದಗ

ಎಚ್.ಕೆ. ಪಾಟೀಲರಿಗೆ ಮಂತ್ರಿಗಿರಿ ಭಾಗ್ಯ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 18
ರಾಜ್ಯದಲ್ಲಿಯೇ ಮುತ್ಸದ್ದಿ ರಾಜಕಾರಣಿ ಎಂದೇ ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿಯೇ ಈ ಬಾರಿ ಅತಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಿರುವ ಎಚ್.ಕೆ. ಪಾಟೀಲರಿಗೆ ನಿರೀಕ್ಷೆಯಂತೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸಿದೆ. ಇದು ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.
ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಹಾಗೂ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿರುವ ಪಾಟೀಲರು ಸಚಿವರಾಗುತ್ತಾರೆ ಎನ್ನುವ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. ಅದರಂತೆಯೇ ಶನಿವಾರ ಅದು ಸಾಕಾರಗೊಂಡಿದೆ.  
ಎಲ್ಲ ರಂಗದಲ್ಲಿಯೂ ಜಾಣ್ಮೆ: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಎಚ್.ಕೆ. ಪಾಟೀಲರು ಕೆಲ ವರ್ಷಗಳ ಕಾಲ ಪತ್ರಿಕೊದ್ಯಮಿಯಾಗಿ, ವಿಶಾಲ ಕರ್ನಾಟಕ ಪತ್ರಿಕೆ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಜತೆಗೆ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿದ್ದಾಗ ಹಲವು ಪತ್ರಿಕೆಗಳಿಗೆ ಉತ್ತಮ ಲೇಖನಗಳನ್ನು ನೀಡುವ ಮೂಲಕ ಅವರಲ್ಲಿನ ಬರವಣಿಗೆಯ ತುಡಿತವನ್ನು ವ್ಯಕ್ತಪಡಿಸಿದ್ದಾರೆ. ಗದಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ (ವಿಂಡ್ ಮಿಲ್) ವಿದ್ಯುತ್ ಉತ್ಪಾದನೆಯ ಗಾಳಿಯಂತ್ರಗಳಿಗಾಗಿ ರೈತರು ಭೂಮಿ ಕಳೆದುಕೊಳ್ಳುವ ವೇಳೆಯಲ್ಲಿ ಅವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುಸ್ತಕ ಬರೆದು, ಹೋರಾಟ ಮಾಡಿದ್ದರು. ಪ್ರಾರಂಭದಲ್ಲಿ ಜವಳಿ ಖಾತೆಯ ರಾಜ್ಯ ಸಚಿವರಾಗಿ ಕೆಲಸ ಮಾಡಿದ ಎಚ್.ಕೆ. ಪಾಟೀಲ, ನಂತರದ ದಿನಗಳಲ್ಲಿ ಜಲ ಸಂಪನ್ಮೂಲ, ಕಾನೂನು ಮತ್ತು ಸಂಸದೀಯ, ಕೃಷಿ ಸಚಿವರಾಗಿ ಕೆಲಸ ಮಾಡಿದ ಅನುಭವದೊಂದಿಗೆ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿಯೂ ಮೇಲ್ಮನೆಯಲ್ಲಿ ಕೆಲಸ ಮಾಡಿದ ಅಪಾರ ಅನುಭವವನ್ನು ಹೊಂದಿದ್ದಾರೆ.
ಶುದ್ಧ ಕುಡಿಯುವ ನೀರಿನ ಹರಿಕಾರ: ಕಳೆದ ಚುನಾವಣೆಯಲ್ಲಿ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಬೇಕು ಎನ್ನುವ ಕನಸು ನುಚ್ಚು ನೂರಾದ ಬಳಿಕ ಸುಮ್ಮನೇ ಕೂಡದೆ ಸಾಮಾಜಿಕ ಕಳಕಳಿಯ ಪ್ರಜ್ಞೆಯೊಂದಿಗೆ ಮೊದಲಿಗೆ ಕ್ಷೇತ್ರದ ತುಂಬೆಲ್ಲ ಬಡವರಿಗೆ ಶುದ್ಧ ಕುಡಿವ ನೀರು ಸಿಗಬೇಕು ಎನ್ನುವ ಮಹಾದಾಸೆಯನ್ನು ಇಟ್ಟುಕೊಂಡು ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಿ, ಅದರಿಂದ ಜನರಿಗೆ ರು. 2ಕ್ಕೆ 20 ಲೀಟರ್ ಶುದ್ಧ ಕುಡಿಯುವ ನೀರನ್ನು  ಕೆ.ಎಚ್. ಪಾಟೀಲ ಪ್ರತಿಷ್ಠಾನದಿಂದ ಒದಗಿಸಲು ಶ್ರಮಿಸಿದರು. ಅದರ ಫಲವಾಗಿ ಈ ಬಾರಿ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ವಿಜಯಿಯಾಗಿ ಈಗ ಸಚಿವರಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದಾರೆ.
ಉಸ್ತುವಾರಿ ಸಚಿವರ ಯೋಗ: ಸದ್ಯ ಜಿಲ್ಲೆಯಿಂದ ಸಚಿವ ಸ್ಥಾನ ಪಡೆದಿರುವುದು ಎಚ್.ಕೆ. ಪಾಟೀಲ ಮಾತ್ರ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಅವರೇ ಕಾರ್ಯನಿರ್ವಹಿಸುವ ಸಾಧ್ಯತೆ ಹೆಚ್ಚಾಗಿದೆ. ಹಿಂದೆಯೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಹಕಾರಿ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪಾಟೀಲರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಸ್ಥಾನ ಲಭ್ಯವಾಗುವ ಸಂಭವವಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿಯೂ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಿದ್ದಾರೆನ್ನುವ ನಂಬಿಕೆ ಜನರಲ್ಲಿದೆ.

-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.