ನಾಳೆ 65ನೇ ತ್ರೈಮಾಸಿಕ ಶಿವಾನುಭವ
ಮುಂಡರಗಿ: ಸ್ಥಳೀಯ ಜ. ತೋಂಟದಾರ್ಯ ಮಠದಲ್ಲಿ ಮೇ 21ರಂದು ಸಂಜೆ 7 ಗಂಟೆಗೆ ಜ. ತೋಂಟದ ಡಾ ಸಿದ್ದಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ 65ನೇ ತ್ರೈಮಾಸಿಕ ಶಿವಾನುಭ ಕಾರ್ಯಕ್ರಮ ಜರುಗಲಿದೆ. ಮನಗುಂಡಿಯ ಗುರುಬಸವ ಮಹಾಮನೆಯ ಬಸವಾನಂದ ಶ್ರೀಗಳು ಆಗಮಿಸಲಿದ್ದು, ಅಣ್ಣೀಗೇರಿ ಅಮೃತೇಶ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಡಾ ಎಚ್.ಬಿ. ಪೂಜಾರ 'ಬಸವ ಮತ್ತು ಬುದ್ಧ ದಾರ್ಶನಿಕ ವಿಚಾರಗಳು' ಕುರಿತು ಮಾತನಾಡುವರು. ಶಿರಹಟ್ಟಿ ಕ್ಷೇತ್ರದ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ಪುರಸಭೆಯ ಎಲ್ಲ ವಾರ್ಡುಗಳ 23 ಸದಸ್ಯರನ್ನು ಸನ್ಮಾನಿಸಲಾಗುವುದು. ಸ್ಥಳೀಯ ಕರ್ನಾಟಕ ಜನಪದ ಕಲಾತಂಡದವರಿಂದ ಸಂಗೀತ ಸೇವೆ, ಕೀರ್ತಿ ಪಾಟೀಲರಿಂದ ಧರ್ಮಗ್ರಂಥ ಪಠಣ ಹಾಗೂ ಶಶಿಕಲಾ ಕುಂಬಾರ ಅವರಿಂದ ವಚನ ಚಿಂತನೆ ಜರುಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತೋಂಟದಾರ್ಯ ಸೇವಾ ಸಮಿತಿಯ ಅಧ್ಯಕ್ಷ ಈಶಣ್ಣ ಬೆಟಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಸ್ತು ಸಂಗ್ರಹಾಲಯ ಸಪ್ತಾಹ ಆಚರಣೆ
ಗದಗ: ಮೇ 18ರಿಂದ 24ರ ವರೆಗೆ ವಸ್ತು ಸಂಗ್ರಹಾಲಯ ಸಪ್ತಾಹವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿರುವ ಐತಿಹಾಸಿಕ, ಪಾರಂಪರಿಕ ಮಹತ್ವದ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಪ್ರಾಚೀನ ಶಿಲಾ ಶಾಸನಗಳು, ವೀರಗಲ್ಲುಗಳು, ಸತೀಕಲ್ಲು, ಪ್ರಾಚೀನ ಮೂರ್ತಿ ಶಿಲ್ಪಗಳು, ತಾಳೆಗರಿ ಗ್ರಂಥಗಳು, ನಾಣ್ಯಗಳು, ಆಯುಧಗಳು, ಕಂಚಿನ ವಿಗ್ರಹಗಳು, ತಾಮ್ರಪಟ ಶಾಸನಗಳು, ಇತರೆ ಪ್ರಾಚೀನ ವಸ್ತುಗಳು ಕಂಡುಬಂದಲ್ಲಿ ಕ್ಯೂರೇಟರ್, ಸರ್ಕಾರಿ ವಸ್ತು ಸಂಗ್ರಹಾಲಯ, ನಗರಸಭೆ ಕಾಲೇಜು ಆವರಣ, ಗದಗ, ದೂ. 08372 250325 ಸಂಪರ್ಕಿಸಬಹುದು ಎಂದು ಗದಗ ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆ ಪಟ್ಟಿ ಪ್ರಕಟ
ಗದಗ: 2012-13ನೇ ಸಾಲಿನ ಪ್ರೌಢಶಾಲಾ ಸಹಶಿಕ್ಷಕರ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಬೆಳಗಾವಿಯ ಸಹ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಗದಗ ಜಿಲ್ಲೆಗೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೇ 22ರಂದು ಬೆಳಗ್ಗೆ 10 ಗಂಟೆಗೆ ಸರ್ಕಾರಿ ಶಿಕ್ಷಕರ ಮಹಾವಿದ್ಯಾಲಯ ಹಾಸ್ಟೆಲ್ ಕ್ಯಾಂಪಸ್ ವೃತ್ತ, ಕಾಕತಿವೇಸ್, ಬೆಳಗಾವಿ- ಇಲ್ಲಿ ಕೌನ್ಸೆಲಿಂಗ್ ಜರುಗಿಸಲಾಗುವುದು. ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜೀವ್ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಣ ಮತಕ್ಷೇತ್ರದ ಏಳ್ಗೆಗೆ ಶ್ರಮಿಸುವೆ: ಜಿ.ಎಸ್. ಪಾಟೀಲ್
ಗಜೇಂದ್ರಗಡ: ರೋಣ ಮತಕ್ಷೇತ್ರದ ಸರ್ವತೋಮುಖ ಏಳ್ಗೆಗೆ ಬದ್ಧನಾಗಿರುವುದಾಗಿ ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಅವರು ಭಾನುವಾರ ಸ್ಥಳೀಯ ಕಾಂಗ್ರೆಸ್ ಜನಸಂಪರ್ಕ ಕಾರ್ಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬರದ ಬವಣೆಗೆ ತುತ್ತಾಗುತ್ತಿರುವ ರೋಣ ಕ್ಷೇತ್ರದಲ್ಲಿ ಸಮೃದ್ಧ ಮಳೆ, ಬೆಳೆ ದೊರೆತು ಕ್ಷೇತ್ರದ ಜನತೆ ನೆಮ್ಮದಿಯಿಂದ ಜೀವನ ಸಾಗಿಸುವಂತೆ ವಾತಾವರಣ ನಿರ್ಮಿಸಲು ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ. ಅದೇ ರೀತಿ ಉತ್ತಮ ಮುಂಗಾರು ಮಳೆ ಸುರಿಯುವ ಲಕ್ಷಣ ಕಂಡು ಬಂದಿರುವದು ಸಂತಸ ತಂದಿದೆ. ರೈತರಿಗೆ ಕೃಷಿ ಕಾರ್ಯಕ್ಕೆ ಅವಶ್ಯವಿರುವ ವಸ್ತುಗಳನ್ನು ದೊರಕಿಸಿ ಕೊಡಲು ತೊಂದರೆ ಮಾಡುವಂತಹ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು. ರೋಣದ ಗೌಡ್ರ ಮನೆಗೆ ಆಗಮಿಸಿದ ಶ್ರೀ ಸಾಮಾನ್ಯರನ್ನು ಕಡೆಗಣಿಸಲಾಗುತ್ತದೆ ಎಂದು ವಿರೋಧ ಪಕ್ಷಗಳ ನಾಯಕರು ಅಪಪ್ರಚಾರ ನಡೆಸಿದ್ದಾರೆ. ಆದರೆ ಸಾರ್ವಜನಿಕ ಸೇವೆಗೆ ತಮ್ಮ ಸರ್ವಸ್ವವನ್ನು ಸಮರ್ಪಿಸಿಕೊಂಡು, ನಮ್ಮ ಕುಟುಂಬದ ಎಲ್ಲ ಸದಸ್ಯರು ಜನ ಸೇವೆಯೆ ಜನಾರ್ಧನ ಸೇವೆ ಎಂದು ಅರಿತು ಮನಪೂರ್ವಕ ಸೇವೆ ಮಾಡುತ್ತಿದ್ದೇವೆ. ಇದನ್ನರಿತ ಮತದಾರರು ಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಿಂದ ಅಭೂತಪೂರ್ವ ಗೆಲವು ನೀಡಿದ್ದು, ಮತದಾರರಿಗೆ ನಾನು ಚಿರಋಣಿಯಾಗಿರುವೆ ಎಂದರು. ಪಡಿತರ ಅವ್ಯವಸ್ಥೆ, ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಸೇರಿದಂತೆ ಜನರ ತೊಂದರೆ ನಿವಾರಣೆಗೆ ಪ್ರಥಮ ಆದ್ಯತೆ ನೀಡಲಾಗುವುದು. ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಶಾರವ್ವ ತಳವಾರ, ರವಿ ಗಡೇದವರ, ಶ್ರೀಧರ ಚುಂಚಾ, ಡಾ. ವೀರಣ್ಣ ಪಟ್ಟಣಶೆಟ್ಟರ್, ಸುರೇಶ ಹೊಸಮನಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

