ಕಳೆಗಟ್ಟಿದ ಬೆಳಕಿನ ಹಬ್ಬ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ನ. 1
ತಾಲೂಕಿನಲ್ಲಿ ಬರದ ಛಾಯೆ ಆವರಿಸಿದ್ದರೂ ಹಿಂಗಾರು ಮಳೆ ತಕ್ಕಮಟ್ಟಿಗೆ ಕೈ ಹಿಡಿದಿದ್ದರಿಂದ ಬೆಳಕಿನ ಹಬ್ಬ ದೀಪಾವಳಿಗೆ ಕಳೆ ಬಂದಿದೆ.
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಪಟ್ಟಣದ ಮಾರುಕಟ್ಟೆಯಲ್ಲಿ ಶುಕ್ರವಾರ ಜನರು ಹಬ್ಬಕ್ಕೆ ಬೇಕಾಗುವ ವಸ್ತುಗಳನ್ನು ಜೋರಾಗಿ ಖರೀದಿಸುತ್ತಿರುವುದು ಕಂಡುಬಂದಿತು.
ದೀಪಾವಳಿ ಹಿಂದೂಗಳ ಪಾಲಿನ ದೊಡ್ಡ ಹಬ್ಬವಾಗಿರುವುದರಿಂದ ಮನೆ ಹಾಗೂ ಅಂಗಡಿಗಳನ್ನು ಸ್ವಚ್ಛಗೊಳಿಸಿ ಶೃಂಗರಿಸುತ್ತಿದ್ದಾರೆ. ಬಟ್ಟೆ, ಬಂಗಾರದ ಆಭರಣ, ಗೃಹ ಉಪಯೋಗಿ ವಸ್ತುಗಳು ಹೀಗೆ ಹಬ್ಬದ ರಂಗು ಹೆಚ್ಚಿಸುವ ವಸ್ತುಗಳ ಖರೀದಿಯಲ್ಲಿ ಜನತೆ ತೊಡಗಿರುವುದರಿಂದ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿರುವುದು ಕಂಡುಬರುತ್ತಿದೆ. ಬರದ ಛಾಯೆ ಹಾಗೂ ಬೆಲೆ ಏರಿಕೆ ಮಧ್ಯೆಯೂ ಜನತೆ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲು ಮುಂದಾಗಿದ್ದಾರೆ.
ದೇವಿಗೆ ಪೂಜೆ: ದೀಪಾವಳಿಯು ಶ್ರೀ ಮಹಾಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸುವ ಹಬ್ಬ. ಮನೆ, ಅಂಗಡಿ, ವ್ಯಾಪಾರದ ಸ್ಥಳ ಹಾಗೂ ಹಣದ ವಹಿವಾಟು ನಡೆಯುವ ಎಲ್ಲೆಡೆ ಪೂಜಾ ಸಮಾರಂಭಗಳು ಅದ್ಧೂರಿಯಿಂದ ನಡೆಯುತ್ತವೆ. ಅದಕ್ಕಾಗಿ ತಳಿರು ತೋರಣಗಳ ಅಲಂಕಾರ ಸಾಮಗ್ರಿ, ಹೂ- ಹಣ್ಣು, ತಿನಿಸುಗಳ ಖರೀದಿಯೂ ಚುರುಕಾಗಿದೆ. ಸಾಂಪ್ರದಾಯಿಕ ಹಣತೆಗಳ ಜತೆಗೆ ಬಗೆಬಗೆಯ ಚಿತ್ತಾರದ ಹಣತೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಡಜನ್ ಹಣತೆಗಳಿಗೆ ರು. 20 ರಿಂದ 25 ದರ ನಿಗದಿಪಡಿಸಲಾಗಿದೆ. ವಿವಿಧ ಬಗೆಯ ಆಕಾಶ ಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ರಂಗುರಂಗಿನ ಆಕಾಶಬುಟ್ಟಿಗಳ ಬೆಲೆ ಕೂಡ ಹೆಚ್ಚಿದೆ. ಗಾತ್ರಕ್ಕೆ ಅನುಗುಣವಾಗಿ ರು. 150 ರಿಂದ 250ರ ವರೆಗೂ ಬೆಲೆ ಇದೆ. ವಿದ್ಯುತ್ ಅಲಂಕಾರಿಕ ದೀಪ, ಪಟಾಕಿ, ಹೂವು ಹಾಗೂ ತರಕಾರಿ ವ್ಯಾಪಾರದ ಭರಾಟೆಯೂ ಜೋರಾಗಿದೆ. ಎಲ್ಲ ಬಗೆಯ ಸಿಡಿಮದ್ದುಗಳ ದರ ಕಳೆದ ವರ್ಷಕ್ಕಿಂತ ಹೆಚ್ಚಾಗಿವೆ. ಮೇಲಾಗಿ ಸ್ಫೋಟಕ ಸಾಮಗ್ರಿ ಆಗಿದ್ದರಿಂದ ತರಿಸಿಕೊಳ್ಳುವುದು ಕಷ್ಟಕರ. ಹತ್ತಾರು ಬಗೆಯ ಕಿರಿಕಿರಿ ಉಂಟಾಗುತ್ತದೆ. ಇದರಿಂದ ಬೆಲೆಯೂ ಹೆಚ್ಚಳವಾಗಿದೆ. ಆಕಾಶಕ್ಕೆ ನೆಗೆದು ಸಿಡಿದು ಚಿಮ್ಮುವ ಮಧ್ಯಮ ಗಾತ್ರದ ಬಾಣಗಳ ಬೆಲೆ, ನಕ್ಷತ್ರ ಕಡ್ಡಿ ಸೇರಿದಂತೆ ವಿವಿಧ ಸಿಡಿಮದ್ದುಗಳ ದರ ದುಬಾರಿಯಾಗಿದೆ. ದೀಪಾವಳಿ ನಮಗೆ ದೊಡ್ಡ ಹಂಗಾಮವಾಗಿತ್ತು. ಆದರೆ ಈ ಸಲ ಜನರ ಬಳಿ ದುಡ್ಡಿಲ್ಲ. ಮೇಲಾಗಿ ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಈ ಹಂಗಾಮ ಆಶಾದಾಯಕವಾಗಿರುವಂತೆ ಕಾಣುತ್ತಿಲ್ಲ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ. ಏನೇ ಆಗಲಿ ಮನ-ಮನೆಯ ಅಂಧಕಾರ ಅಳಿಸಲು ದೀಪಗಳನ್ನು ಬೆಳಗಲು ಹೊಸ ಹಣತೆ ಬೇಕೆ ಬೇಕು. ಕುಂಬಾರರು ಸಿದ್ದಪಡಿಸಿದ ಮಣ್ಣಿನ ಹಣತೆಗಳು ಈಗಲೂ ಆಕರ್ಷಕ ಮತ್ತು ಅವಶ್ಯಕ. ಜನ ತಮ್ಮ ಶಕ್ತಾನುಸಾರ ಹಣ ನೀಡಿ ಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದ್ದು, ಕತ್ತಲು ಬೆಳಕುಗಳ ಸಂಘರ್ಷ ನಿರಂತರ. ಆದರೆ, ಬೆಳಕಿನ ದಾರಿ ನಮ್ಮದಾಗಬೇಕು. ಕತ್ತಲು ಕಳೆದು ಬದುಕಿನಲ್ಲಿ ಬೆಳಕು ಮೂಡಬೇಕು ಎನ್ನುವುದು ದೀಪಾವಳಿ ಹಬ್ಬದ ಸಂದೇಶವಾಗಿದೆ.
ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

