ಗದಗ

ಎಟಿಎಂ ಬಂದ್: ಗ್ರಾಹಕರ ಪರದಾಟ

Published On :

ಕನ್ನಡಪ್ರಭ ವಾರ್ತೆ, ಗದಗ, ನ. 4
ದೀಪಾವಳಿ ಹಬ್ಬದ ಅಂಗವಾಗಿ ನ. 1ರಿಂದ 4ರ ವರೆಗೆ ಸತತವಾಗಿ ರಜೆಗಳು ಬಂದ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಬಹುತೇಕ ಎಟಿಎಂಗಳು ಬಂದ್ ಆಗಿವೆ. ಕೆಲವೆಡೆ ಹಣದ ಕೊರತೆಯಿಂದ ಎಟಿಎಂಗಳು ಸ್ಥಗಿತಗೊಂಡಿದ್ದರೆ ಮತ್ತೆ ಕೆಲವಡೆ ಸರ್ವರ್ ಸಮಸ್ಯೆಯಿಂದ ಕಾರ್ಯ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡುವಂತಾಯಿತು.
ಹಬ್ಬಗಳೆಂದರೆ ಹಲವು ರೀತಿಯ ಖರ್ಚು ಇದ್ದೇ ಇರುತ್ತದೆ. ಇಂದಿನ ಬದಲಾದ ದಿನಗಳಲ್ಲಿ ಎಲ್ಲರೂ ಬ್ಯಾಂಕ್‌ಗಳಲ್ಲಿಯೇ ಹಣ ಇಡುವವರ ಸಂಖ್ಯೆಯೇ ಹೆಚ್ಚು. ಹೀಗೆ ಇಟ್ಟ ಹಣವನ್ನು ದಿನನಿತ್ಯದ ಖರ್ಚು ಸೇರಿದಂತೆ ಹಬ್ಬ-ಹರಿದಿನಗಳಲ್ಲಿ ಬೇಕಾದ ಅಗತ್ಯ ಪ್ರಮಾಣದ ಹಣವನ್ನು ಪಡೆಯಲು ಸಾರ್ವಜನಿಕರು ಬ್ಯಾಂಕ್‌ಗಳಿಗೆ ತೆರಳಿ ಹಣ ಪಡೆಯುವುದು ತೀರಾ ವಿರಳ. ಹೆಚ್ಚಾಗಿ ಎಲ್ಲರೂ ಈ ಎಟಿಎಂಗಳ ಮೊರೆ ಹೋಗುವುದು ಸಾಮಾನ್ಯ.  
ಶುಕ್ರವಾರದಿಂದ ಸೋಮವಾರದ ವರೆಗೂ ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಕೆಲವು ಎಟಿಎಂಗಳಲ್ಲಿ ಹಣವಿಲ್ಲದೇ ಸ್ಥಗಿತಗೊಂಡಿವೆ. ಇನ್ನು ಕೆಲವು ಎಟಿಎಂಗಳು ಸರ್ವರ್ ಸಮಸ್ಯೆಯಿಂದಾಗಿ ಬಂದಾಗಿವೆ. ಇನ್ನು ಸಾರ್ವಜನಿಕರು ಹಣವನ್ನು ಪಡೆಯಲು ಎಟಿಎಂನಿಂದ ಎಟಿಎಂಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಲುಗಟ್ಟಿ ನಿಂತ ಜನತೆ: ಅವಳಿ ನಗರದ ಹಲವಾರು ಎಟಿಎಂಗಳು ಸ್ಥಗಿತಗೊಂಡಿದ್ದು, ಎಪಿಎಂಸಿ ಕಚೇರಿಯ ಬಳಿ ಇರುವ ಮುಖ್ಯ ಕಚೇರಿಯ ಎಟಿಎಂನಲ್ಲಿ ಮಾತ್ರ ಹಣಲಭ್ಯವಿದ್ದ ಹಿನ್ನೆಲೆಯಲ್ಲಿ ಜನತೆ 4-5 ಗಂಟೆ ಸರದಿಯಲ್ಲಿ ನಿಂತು ಎಟಿಎಂನಿಂದ ಹಣ ಪಡೆಯುವಂತಾಯಿತು. ಬಹುತೇಕ ಖಾಸಗಿ ಒಡೆತನದ ಬ್ಯಾಂಕ್‌ಗಳ ಎಟಿಎಂಗಳೂ ಭಾನುವಾರ ಮಧ್ಯಾಹ್ನವೇ ಹಣ ಕೊರತೆಯಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಿವಾರ್ಯವಾಗಿ ಖಾಸಗಿ ಲೇವಾದೇವಿದಾರರ ಬಳಿ ಹಣ ಪಡೆದು ಹಬ್ಬ ಮಾಡುವಂತಾಯಿತು.
ತಪ್ಪದ ಗೋಳಾಟ: ಸತತ 4 ದಿನಗಳ ರಜೆ ಬಂದ ಹಿನ್ನಲೆಯಲ್ಲಿ ಅಧಿಕಾರಿಗಳಾಗಲಿ, ಜಿಲ್ಲಾಡಳಿತವಾಗಲಿ ಈ ಕುರಿತು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಲ್ಲಿ ಇಂತಹ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಸಾಲು-ಸಾಲು ರಜೆಗಳು ಬರುವ ಮೊದಲೇ ಗಮನಿಸಿ ಮಧ್ಯದಲ್ಲಿ ಒಂದು ದಿನವಾದರೂ ಸ್ಥಳೀಯ ಮಟ್ಟದ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವ ರೀತಿಯಲ್ಲಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಲ್ಲಿ ಈ ಸಮಸ್ಯೆ ತಲೆದೂರುತ್ತಿರಲಿಲ್ಲ. ಹಿರಿಯ (ಬ್ಯಾಂಕ್) ಅಧಿಕಾರಿಗಳು ಮುಂಜಾಗ್ರತೆ ವಹಿಸಿದ್ದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯಿಂದ ಮುಕ್ತಿ ಸಿಗುತ್ತಿತ್ತು.
ಇಂದು ಎಲ್ಲರೂ ಬ್ಯಾಂಕಿನತ್ತ: ಸತತ ರಜೆ ಹಾಗೂ ಮಧ್ಯದಲ್ಲಿಯೇ ಸ್ಥಗಿತಗೊಂಡಿರುವ ಎಟಿಎಂಗಳಿಂದ ಕಂಗಾಲಾಗಿರುವ ಜನತೆ ನ. 5ರ ಮಂಗಳವಾರ ಬ್ಯಾಂಕ್ ಪ್ರಾರಂಭವಾಗುತ್ತಿದ್ದಂತೆಯೇ ಹಣ ಪಡೆಯಲು ಧಾವಿಸುತ್ತಾರೆ. ಇದರಿಂದಾಗಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಜನಜಂಗುಳಿ ನಿರ್ಮಾಣವಾಗಲಿದ್ದು, ಹಣಕ್ಕಾಗಿ ಬೆಳಗ್ಗೆ 6 ಗಂಟೆಯಿಂದಲೇ ಸರದಿಯಲ್ಲಿ ನಿಲ್ಲಬೇಕಾದಂತಹ ಪರಿಸ್ಥಿತಿ ಸಾರ್ವಜನಿಕರಿಗೆ ಎದುರಾಗಿದೆ. ಕಳೆದ 4 ದಿನಗಳಿಂದ ಬ್ಯಾಂಕ್ ರಜೆ, ಅಲ್ಲದೆ, ಎಟಿಎಂಗಳೂ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದ್ದರು. ಇಂದು ಎಲ್ಲರೂ ಬ್ಯಾಂಕಿಗೆ ಮುಗಿಬೀಳುವುದು ಗ್ಯಾರಂಟಿ.
ಹೆಚ್ಚಿನ ಕೌಂಟರ್ ಪ್ರಾರಂಭಿಸಲಿ: ಮಂಗಳವಾರ ಸತತ ರಜೆಗಳ ನಂತರ ಬ್ಯಾಂಕ್‌ಗಳು ಪ್ರಾರಂಭವಾಗುವುದರಿಂದ ಸಾಕಷ್ಟು ಪ್ರಮಾಣದ ಗ್ರಾಹಕರು ಬ್ಯಾಂಕಿಗೆ ಬರುವುದರಿಂದ ಬ್ಯಾಂಕ್‌ಗಳ ಕ್ಯಾಶ್ ಕೌಂಟರ್‌ದಲ್ಲಿ ಸಾಕಷ್ಟು ಜನದಟ್ಟಣೆ ಉಂಟಾಗಲಿದೆ. ಮಂಗಳವಾರವಾದರೂ ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಕ್ಯಾಶ್ ಕೌಂಟರ್‌ಗಳನ್ನು ಪ್ರಾರಂಭಿಸಿ ಗ್ರಾಹಕರಿಗೆ ಆಗುವ ಸಮಸ್ಯೆಯನ್ನು ಕಡಿಮೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದಕೊಳ್ಳಬೇಕಿದೆ.
ನಿವೃತ್ತರಿಗೆ ವೇತನವಿಲ್ಲ
ಪ್ರತಿತಿಂಗಳು 1 ರಿಂದ 5ನೇ ದಿನಾಂಕದ ವರೆಗೆ ಬ್ಯಾಂಕ್‌ಗಳ ಅಧಿಕಾರಿಗಳು ನಿವೃತ್ತರಿಗೆ, ಪಿಂಚಣಿದಾರರಿಗೆ, ನಿವೃತ್ತರ ಅವಲಂಬಿತರಿಗೆ ಪ್ರತ್ಯೇಕ ದಿನಗಳನ್ನು ಮೀಸಲಿಡುತ್ತಿದ್ದರು. ಪ್ರಸಕ್ತ ತಿಂಗಳಲ್ಲಿ ನ. 1 ರಿಂದ 4ರ ವರೆಗೆ ಸತತ ರಜೆಗಳು ಅವರು ಇಲ್ಲಿಯ ವರೆಗೂ ಹಣ ಪಡೆಯಲು ಸಾಧ್ಯವಾಗಿಲ್ಲ.  ಮಂಗಳವಾರ ಬ್ಯಾಂಕ್ ಆರಂಭವಾಗುತ್ತಿದ್ದಂತೆ ಗ್ರಾಹಕರು, ಪಿಂಚಣಿ, ವೇತನ ಎಂದು  ಬ್ಯಾಂಕಿನತ್ತ ಬರುವುದರಿಂದ ಈ ಸಮಸ್ಯೆ ಮುಂದುವರೆದರೂ ಆಶ್ಚರ್ಯ ಪಡಬೇಕಿಲ್ಲ.
ಪ್ರತ್ಯೇಕ ಕೌಂಟರ್
ಬ್ಯಾಂಕುಗಳಿಗೆ ಸತತ ರಜೆ ಬಂದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸಾಕಷ್ಟು ತೊಂದರೆಯಾಗಿದ್ದು, ಅದರಲ್ಲಿಯೂ ನಿವೃತ್ತಿ ವೇತನದಾರರಿಗೆ ಬಹಳ ಸಮಸ್ಯೆಯಾಗಿದೆ. ಮಂಗಳವಾರ ಬ್ಯಾಂಕ್‌ನ ಅಧಿಕಾರಿಗಳು ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ಕೌಂಟರ್‌ಗಳನ್ನು ತರೆಯಬೇಕು. ಇದರಿಂದ ಸಾರ್ವಜನಿಕರು, ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ. ಇಲ್ಲದಿದ್ದರೆ ಮತ್ತೆ ತೊಂದರೆಯಾಗಲಿದೆ.
- ಮಾನಪ್ಪ ತುಗ್ಗಲದೋಣಿ, ಸಿದ್ದಪ್ಪ ಮಾರನಬಸರಿ
ಜಿಲ್ಲಾ ನಿವೃತ್ತ ಸಂಘದ ಪದಾಧಿಕಾರಿಗಳು


-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.