ನೀರಾವರಿ ಗೋದಿಗೆ ಮಳೆ ಕಂಟಕ
ಕನ್ನಡಪ್ರಭ ವಾರ್ತೆ, ನರಗುಂದ, ನ. 5
ತಾಲೂಕಿನ ರೈತರಿಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಕಾಡುತ್ತಿವೆ. ಈಗಾಗಲೇ ಹಲವಾರು ರೀತಿಯಲ್ಲಿ ನಷ್ಟ ಅನುಭವಿಸಿದ್ದ ರೈತರು ಇತ್ತೀಚಿಗೆ ಸತತವಾಗಿ ಸುರಿದ ಮಳೆಯಿಂದಾ ಗೋದಿಗೆ ಸಾಕಷ್ಟು ಹಾನಿಯುಂಟಾಗಿದೆ. ಬಿತ್ತಿದ್ದ ಗೋದಿ ಮೊಳಕೆಯೊಡೆಯುವ ಮೊದಲೇ ನೆನೆದಿದೆ.
ತಪ್ಪದ ನಷ್ಟ: ಈಗಾಗಲೇ ಕಳಪೆ ಬೀಜ, ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆ ಕೊರತೆ, ಕಾಲುವೆಗೆ ನೀರು ಹರಿಯುತ್ತಿದ್ದರೂ ದೂರದಲ್ಲಿರುವ ರೈತರ ಹೊಲಗಳಿಗೆ ಸರಿಯಾಗಿ ನೀರು ಲಭ್ಯವಾಗದಿರುವುದು, ಮುಖ್ಯ ಕಾಲುವೆಗಳ ದುರಸ್ತಿಯಾಗದೇ ಇರುವುದರಿಂದ ಅಪಾರ ಪ್ರಮಾಣದ ನೀರು ಪೋಲು ಹೀಗೆ ರೈತರು ಅನೇಕ ಸಮಸ್ಯೆ ಎದುರಿಸಿದ್ದಾರೆ.
ಈ ಎಲ್ಲ ಸಮಸ್ಯೆಗಳ ಮಧ್ಯೆಯೇ ತಾಲೂಕಿನ ರೈತರು ಉತ್ತಮ ಬೆಳೆಯ ಆಶಾಕಿರಣದಲ್ಲಿದ್ದರು. ಹಿಂಗಾರು ಹಂಗಾಮಿನ ಪ್ರಮುಖ ಆಹಾರ ಧಾನ್ಯ ಹಾಗೂ ಜಾನುವಾರಿಗೆ ಹೊಟ್ಟನ್ನು ನೀಡುವ ನೀರಾವರಿ ಗೋದಿ ಬಿತ್ತನೆ ಮಾಡಿದ್ದರು. ಆದರೆ, ಬಿತ್ತನೆಯಾದ ತಕ್ಷಣವೇ ಸತತವಾಗಿ ಸುರಿದ ಮಳೆಯಿಂದ ಬೀಜ ಮೊಳಕೆಯೊಡೆಯದೆ ಇರುವುದರಿಂದ ರೈತರು ಅನಿವಾರ್ಯವಾಗಿ ಮತ್ತೊಮ್ಮೆ ಬಿತ್ತನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
10ರಿಂದ12 ಕ್ವಿಂಟಲ್ ಬೀಜ: ನೀರಾವರಿ ಗೋದಿ ಬಿತ್ತನೆ ಮಾಡುವುದು ರೈತರಿಗೆ ಹೆಚ್ಚಿನ ಆರ್ಥಿಕ ಹೊರೆಯನ್ನುಂಟು ಮಾಡುವ ವಿಷಯವಾಗಿದೆ. ಪ್ರತಿ ಎಕರೆ ಬಿತ್ತನೆಗೆ ರು. 10ರಿಂದ 12 ಕ್ವಿಂಟಲ್ ಗೋದಿ ಬೇಕಾಗುತ್ತದೆ. ಗೋದಿ ಬೆಳೆಯ ಮತ್ತೊಂದು ವಿಶೇಷವೆಂದರೆ ಬೀಜ ಮೊಳಕೆಯೊಡೆದು, ಭೂಮಿಯಿಂದ ಮೇಲೆ ಬರುವ ವರೆಗೂ ಮಳೆಯಾಗಬಾರದು. ಅದರಲ್ಲೂ ಹೆಚ್ಚಿನ ಮಳೆಯಾದರಂತೂ ಭೂಮಿಯಲ್ಲಿನ ಬೀಜ ಸಂಪೂರ್ಣ ನೆನೆದು(ಉಬ್ಬಿ) ಮೊಳಕೆಯೊಡೆಯುವುದಿಲ್ಲ. ಅನಿವಾರ್ಯವಾಗಿ ಮತ್ತೊಮ್ಮೆ ಬಿತ್ತನೆ ಮಾಡಬೇಕಾಗಿದೆ ಎನ್ನುತ್ತಾರೆ ರೈತರು.
ಉತ್ತಮ ಆಹಾರ: ನೀರಾವರಿ ಗೋದಿ ಬೆಳೆ ಕಟಾವಿನ ನಂತರ ಬರುವ ಹೊಟ್ಟು ಜಾನವಾರಿಗೆ ಮುಂಬರುವ ವರ್ಷಕ್ಕೆ ಆಗುವಷ್ಟು ಆಹಾರವನ್ನು ಒದಗಿಸುತ್ತದೆ. ಅದಕ್ಕಾಗಿ ರೈತರು ಎಷ್ಟೇ ಖರ್ಚಾದರೂ ಸರಿ ಜಾನುವಾರಿಗೆ ಬೇಕಾಗುವ ಗೋದಿ ಬಿತ್ತನೆ ಮಾಡುತ್ತಾರೆ. ಇದಕ್ಕಾಗಿಯೇ ರೈತರು ಹೊಟ್ಟಿನ ಬಣವಿಗಳನ್ನು ಒಟ್ಟಿಕೊಂಡು (ನಿರ್ಮಿಸಿಕೊಂಡು) ತಮ್ಮ ಆಹಾರದ ಜತೆ ಜಾನುವಾರಿಗೂ ವರ್ಷದ ಗಂಜಿಯನ್ನು ಜತನದಿಂದ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಆದರೆ, ಪ್ರಸಕ್ತ ಸಾಲಿನ ಪ್ರಾರಂಭದಲ್ಲಿಯೇ ಗೋದಿ ಬೆಳೆಗೆ ಮಳೆ ಕಂಟಕವಾಗಿ ಕಾಡಿದೆ ಎಂದರೆ ತಪ್ಪಾಗಲಾರದು.
ಮತ್ತೊಮ್ಮೆ ಬಿತ್ತನೆ ಮಾಡಬೇಕು
ನಾವೆಲ್ಲ ಪ್ರತಿ ವರ್ಷ ದೀಪಾವಳಿ ನಂತರ ಗೋದಿ ಬಿತ್ತನೆ ಮಾಡುತ್ತಿದ್ದೆವು. ಆದರೆ, ಈ ವರ್ಷ ಮಳೆ ಅಭಾವ ಆಗಬಹುದೆಂದು 15 ದಿನ ಮುಂಚಿತವಾಗಿ ಬಿತ್ತನೆ ಮಾಡಿದ್ದೇವೆ. ಆದರೆ, ಬಿತ್ತನೆ ಮಾಡಿ ತಕ್ಷಣವೇ 4 ದಿನ ಬಿಟ್ಟು ಬಿಡದೇ ಮಳೆ ಸುರಿದಿದ್ದು, ಬೀಜ ಮೊಳಕೆಯೊಡೆಯದೇ ಭೂಮಿಯಲ್ಲಿಯೇ ಹಾಳಾಗಿದೆ. ಈಗ ಮತ್ತೆ ಬಿತ್ತನೆ ಮಾಡಬೇಕಾದ ಅನಿವಾರ್ಯತೆ ಇದೆ. ಕೃಷಿ ಇಲಾಖೆ ಈ ಕುರಿತು ಪರಿಶೀಲನೆ ನಡೆಸಿ, ಹಾನಿ ಅನುಭಸಿದ ರೈತರಿಗೆ ಬೀಜ ವಿತರಣೆ ಮಾಡಬೇಕು.
- ಚಳಪ್ಪ ನಾಯ್ಕರ, ಅಣ್ಣಪ್ಪಗೌಡ ಪಾಟೀಲ, ತಾಲೂಕಿನ ವಿವಿಧ ಗ್ರಾಮಗಳ ರೈತರು
ಹಿಂಗಾರಿ ಹಂಗಾಮು ಗೋದಿ ಬಿತ್ತನೆಯಾದ ತಕ್ಷಣ ಬಿಟ್ಟು ಬಿಡದೇ ಸುರಿದ ಮಳೆ ರೈತರಿಗೆ ಲಕ್ಷಾಂತರ ಮೌಲ್ಯದ ಹಾನಿಯುಂಟು ಮಾಡಿದೆ. ಮೊದಲೇ ಹತ್ತು ಹಲವು ಸಮಸ್ಯೆಗಳಿಂದ ರೈತರು ಕಂಗಾಲಾಗಿದ್ದಾರೆ. ಜಾನುವಾರಿಗೂ ಉತ್ತಮ ಆಹಾರವಾಗುತ್ತಿದ್ದ ನೀರಾವರಿ ಗೋದಿ ಮೊಳಕೆಯೊಡೆಯದಿರುವುದು ರೈತರನ್ನು ಮತ್ತಷ್ಟು ಚಿಂತಾಕ್ರಾಂತರನ್ನಾಗಿಸಿದೆ. ಈಗ ಮತ್ತೊಮ್ಮೆ ಬಿತ್ತನೆ ಮಾಡಬೇಕಾದ ಅನಿವಾರ್ಯ ಎದುರಾಗಿದ್ದು, ರೈತರು ನೆರವಿಗಾಗಿ ಕಾಯುತ್ತಿದ್ದಾರೆ.
-ಎಸ್.ಜಿ. ತೆಗ್ಗಿನಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

