ಗದಗ

ಮಹಿಳೆ ಕೊಲೆ: ಆರೋಪಿ ಬಂಧನ

Published On :

ಕನ್ನಡಪ್ರಭ ವಾರ್ತೆ, ಗದಗ/ರೋಣ, ನ. 6
ತಾಲೂಕಿನ ಶಾಂತಗೇರಿ ಗ್ರಾಮದ ಹೊರವಲಯದಲ್ಲಿ ಕಳೆದ ಅ. 25 ರಂದು ಗ್ರಾಮದ ಶಾಂತವ್ವ ಜಾಡರ (ಪದ್ಮಶಾಲಿ) (65) ಎಂಬ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ರೋಣ ಪೊಲೀಸರು ಬಂಧಿಸಿದ್ದಾರೆ.
ಶಾಂತಗೇರಿ ಗ್ರಾಮದ ಕಳಕಪ್ಪ ಹನುಮಪ್ಪ ಪಿಳಬಂಟರ (22) ಬಂಧಿತ ಆರೋಪಿಯಾಗಿದ್ದಾನೆ.
ಕೊಲೆಗೆ ಕಾರಣ: ಈ ಮಹಿಳೆ ಕೊಲೆ ತೀವ್ರ ಚರ್ಚೆಗೆ ಕಾರಣವಾಗಿತ್ತು, ಆದರೆ ಆರೋಪಿ ಬಂಧನದ ನಂತರ ಅವನು ಬಾಯಿಬಿಟ್ಟ ವಿಷಯ ಗಮನಿಸಿದಲ್ಲಿ ಯಾವುದೇ ತಪ್ಪು ಮಾಡದ ಅಮಾಯಕ ಮಹಿಳೆ ಜೀವ ಕಳೆದುಕೊಂಡಿದ್ದಾಳೆ ಎನ್ನುವುದು ಸ್ಪಷ್ಟವಾಗುತ್ತದೆ. ಕೊಲೆ ನಡೆದ ದಿನ ಕಳಕಪ್ಪ ಅತಿ ಪಾನಮತ್ತನಾಗಿ, ಕೈಯಲ್ಲಿ ಹರಿತವಾದ ಆಯುಧ ಹಿಡಿದುಕೊಂಡು ಅದ್ಯಾವ ಕಾರಣಕ್ಕಾಗಿ ಹೊಲದತ್ತ ಹೊರಟಿದ್ದನೋ ಗೊತ್ತಿಲ್ಲ. ಆದರೆ, ದಾರಿ ಮಧ್ಯೆ ಆಡುಗಳನ್ನು ಮೇಯಿಸುತ್ತಿದ್ದ ಶಾಂತವ್ವಳನ್ನು ಗಮನಿಸಿದ ಕಳಕಪ್ಪ ಅವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅದಕ್ಕೆ ಆ ಮಹಿಳೆ ನಿರಾಕರಿಸಿದಾಗ ಹರಿತವಾದ ಆಯುಧದಿಂದ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.
ಆರೋಪಿ ಪತ್ತೆ: ಕೊಲೆ ನಡೆದ ಸ್ಥಳದಲ್ಲಿ ಯಾವುದೇ ಸಣ್ಣ ಸುಳಿವು ಬಿಡದೇ ಪರಾರಿಯಾಗಿದ್ದ ಕೊಲೆ ಆರೋಪಿಯ ಪತ್ತೆಗಾಗಿ ಎಸ್ಪಿ ಡಾ. ಎಸ್.ಡಿ. ಶರಣಪ್ಪ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ವಿಜಯ ಡಂಬಳ ನೇತೃತ್ವದ ರೋಣ ಸಿಪಿಐ ವೆಂಕಟಪ್ಪ ನಾಯಕ, ಪಿಎಸ್‌ಐ ಡಿ.ಬಿ. ಪಾಟೀಲ ಮುಖಂಡತ್ವದಲ್ಲಿ ರಚಿತಗೊಂಡ ಪೊಲೀಸ್ ತಂಡ ಆರೋಪಿ ಪತ್ತೆಗೆ ವ್ಯಾಪಕ ಜಾಲ ಬೀಸಿತ್ತು. ಇದಕ್ಕಾಗಿ ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟಿದ್ದರು.
ಕೊಲೆಯಾದ ದಿನದಿಂದ ನಾಪತ್ತೆಯಾಗಿದ್ದ ಕಳಕಪ್ಪ ಮೊದ ಮೊದಲು ರಾತ್ರಿಯಾಗುತ್ತಿದ್ದಂತೆ ಗ್ರಾಮಕ್ಕೆ ಬಂದು ಊಟ ಮಾಡಿ ಹೋಗುತ್ತಿದ್ದ. ನಂತರ ಪೊಲೀಸರು ಬೆನ್ನು ಬಿದ್ದಿದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆ ತಡರಾತ್ರಿ ಊರಿಗೆ ಬರುವುದನ್ನು ನಿಲ್ಲಿಸಿದ. ಆದರೆ ಊಟಕ್ಕೆ ತೊಂದರೆಯಾಗುತ್ತಿದ್ದಂತೆ ಗ್ರಾಮದವರನ್ನು ಸಂಪರ್ಕಿಸಲು ಪ್ರಯತ್ನಿಸುವುದು, ಗ್ರಾಮದ ಸಮೀಪದಲ್ಲಿಯೇ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದನ್ನು ಗಮನಿಸಿದ ಗ್ರಾಮದ ಕೆಲವರು ನೀಡಿದ ಮಾಹಿತಿ ಆಧಾರದಲ್ಲಿ ಆರೋಪಿಯನ್ನು ನ. 3 ರಂದು ಬಂಧಿಸಿದ್ದಾರೆ.
ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಕೊ ಆರೋಪಿಯನ್ನು ಬಂಧಿಸುವಲ್ಲಿ ಸಿಬ್ಬಂದಿಗಳಾದ ಎಸ್.ಎಲ್. ಗಾಣಿಗೇರ, ಎಸ್.ಎಸ್. ಮಾವಿನಕಾಯಿ, ಪಿ.ಎಂ. ಭಜಂತ್ರಿ, ಎಸ್.ವಿ. ಮೇಟಿ, ಎಂ.ಎಫ್. ಹೆರಕಲ್ಲ, ಬಿ.ಜಿ. ಹೊರಕೇರಿ, ಪವನ ಗಡ್ಡಾಳೆ, ಫಕ್ಕಿರೇಶ ಮತ್ತು ಕೆ.ವಿ. ತಿಗರಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.