ಗದಗ

ಕರಡಿ, ಚಿರತೆಗೆ ವಿರಹ ವೇದನೆ

Published On :


ಗದಗ: ಪ್ರಾಣಿಗಳೂ ಸಂಗಾತಿಗಾಗಿ ಹಪಹಪಿಸುತ್ತವೆ. ಅದರಲ್ಲಿಯೂ ವನ್ಯ ಮೃಗಗಳಂತೂ ಸಂಗಾತಿ ಇಲ್ಲದೇ ಜೀವನ ನಡೆಸಲು ಒದ್ದಾಡುತ್ತವೆ.
ಈ ರೀತಿ ಸಂಗಾತಿಗಳನ್ನು ಕಳೆದುಕೊಂಡು ಗದಗ ತಾಲೂಕಿನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿರುವ ಕರಡಿ ಹಾಗೂ ಚಿರತೆಗಳೂ ಕಳೆದ ಹಲವು ತಿಂಗಳುಗಳಿಂದ ವಿರಹ ವೇದನೆಯನ್ನು ಅನುಭವಿಸುತ್ತಿವೆ. ಇದರತ್ತ ಗಮನಿಸಬೇಕಾದ ಅರಣ್ಯ ಇಲಾಖೆ ಮಾತ್ರ ಅದೇಕೊ ನಿರ್ಲಕ್ಷ್ಯ ಭಾವ ತಾಳಿದೆ. ಇದರಿಂದ ಪ್ರಾಣಿಗಳ ಜೀವಿತಾವಧಿ ಕಡಿಮೆಯಾಗಲಿದೆ ಎಂಬ ಆತಂಕ ಪ್ರಾಣಿಪ್ರಿಯರನ್ನು ಕಾಡುತ್ತಿದೆ.
ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ರೇಖಾ ಎಂಬ ಹೆಸರಿನ ಹೆಣ್ಣು ಚಿರತೆ ಇದೆ. ರಾಜಾ ಎಂಬ ಗಂಡು ಚಿರತೆ ಸುಮಾರು 11 ವರ್ಷಗಳ ಕಾಲ ಇದರ ಜತೆಗಿತ್ತು.  ಆದರೆ, ಕಳೆದ ವರ್ಷ ರಾಜಾ ಅನಾರೋಗ್ಯದಿಂದ ಮೃತಪಟ್ಟಿದೆ. ಅಲ್ಲೀವರೆಗೂ ಜೋಡಿ ಚಿರತೆಗಳಿಂದ ಕಂಗೊಳಿಸುತ್ತಿದ್ದ ಚಿರತೆ ಬೋನೀಗ ಮೌನಕ್ಕೆ ಶರಣಾದಂತೆ ಭಾಸವಾಗುತ್ತಿದೆ. ಸಂಗಾತಿಯನ್ನು ಕಳೆದುಕೊಂಡ ರೇಖಾ ಹಾಕಿದ ಮಾಂಸವನ್ನು ತಿನ್ನಲು ಒಲ್ಲೆ ಎನ್ನುತ್ತಾಳೆ.
ರೇಖಾಳದ್ದು ಒಂದು ರೀತಿಯ ವಿರಹ ವೇದನೆಯಾದರೆ, ಇದೇ ಸಂಗ್ರಹಾಲಯದಲ್ಲಿರುವ ಗಂಡು ಕರಡಿ ಕಾಸೀಮ್ನದ್ದು ಮತ್ತೊಂದು ರೀತಿ. ಇದರ ಸಂಗಾತಿಯೂ ಕಳೆದ ವರ್ಷ ಮೃತಪಟ್ಟಿದ್ದು, ಇದೀಗ ಸಂಗಾತಿಗಾಗಿ ಹಪಹಪಿಸುತ್ತಿದೆ. ಜತೆಗಾತಿ ಇದ್ದಾಗ ಮೈ ತುಂಬಿಕೊಂಡಿದ್ದ ಕಾಸೀಮ್ ಈಗ ಸೊರಗಿದ್ದಾನೆ.  ಇದು ಕೇವಲ ಕರಡಿ ಮತ್ತು ಚಿರತೆ ಸಮಸ್ಯೆ ಮಾತ್ರವಲ್ಲ. ಸಂಗ್ರಹಾಲಯದಲ್ಲಿರುವ ಇನ್ನು ನಾಲ್ಕೈದು ಪ್ರಾಣಿಗಳು ಈ ಸಮಸ್ಯೆ ಎದುರಿಸುತ್ತಿವೆ.
ಅರಣ್ಯ ಇಲಾಖೆ ಗಮನಿಸಲಿ: ಉತ್ತರ ಕರ್ನಾಟಕದಲ್ಲಿಯೇ ಸದ್ಯಕ್ಕೆ ಅತ್ಯಂತ ದೊಡ್ಡ ಪ್ರಾಣಿ ಸಂಗ್ರಹಾಲಯವೆಂದರೆ ಬಿಂಕದಕಟ್ಟಿ ಮಾತ್ರ. ಇಲ್ಲಿನ ವನ್ಯ ಮೃಗಗಳ ಸಂಖ್ಯೆಯನ್ನು ಹೆಚ್ಚಿಸಿ, ಪ್ರವಾಸೋದ್ಯಮ ದೃಷ್ಟಿಯಿಂದ ಜಿಲ್ಲೆಯನ್ನು ರಾಜ್ಯದಲ್ಲಿಯೇ ಗುರುತಿಸುವ ಕೆಲಸ ಮಾಡಬೇಕು ಎನ್ನುವುದು ಜಿಲ್ಲೆಯ ಪ್ರಜ್ಞಾವಂತ ಜನರ ಆಶಯ. ವಿಚಿತ್ರವೆಂದರೆ ಪ್ರಾಣಿಗಳ ಸಂಖ್ಯೆಯನ್ನು ಹೆಚ್ಚಿಸುವುದಿರಲಿ, ಸಂಗಾತಿಗಳನ್ನು ಕಳೆದುಕೊಂಡ ಪ್ರಾಣಿಗಳಿಗೆ ಮರಳಿ ಸಂಗಾತಿ ಕಲ್ಪಿಸುವ ನಿಟ್ಟಿನಲ್ಲಿಯೂ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ.


ಸದ್ಯ ಸಂಗ್ರಹಾಲಯದಲ್ಲಿರುವ ಹೆಣ್ಣು ಚಿರತೆಯನ್ನು ಬನ್ನೇರುಘಟ್ಟ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ, ಅಲ್ಲಿಂದ ಒಂದು ಜೋಡಿ ಬೇರೆ ಚಿರತೆಗಳನ್ನು ತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇನ್ನು ಕರಡಿಯನ್ನು ಹೈದರಾಬಾದ್ಗೆ ಕಳುಹಿಸಿ ಅಲ್ಲಿಂದ ಜತೆ ಕರಡಿಗಳನ್ನೇ ತರಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಟಿ ಡಿ.ಎನ್. ಅಘೋರೆ,  ಗದಗ ಜಿಲ್ಲಾ ಅರಣ್ಯಾಧಿಕಾರಿ


ಸಂಗಾತಿಗಳಿಲ್ಲದೆ
ಪ್ರಾಣಿಗಳ ವಿಚಿತ್ರ
ವರ್ತನೆ
ಸಂಗಾತಿ ಕಳೆದುಕೊಂಡ ಚಿರತೆ ಹಾಗೂ ಕರಡಿಗಳು ವಿಚಿತ್ರವಾಗಿ ವರ್ತಿಸುತ್ತಿವೆ. ಕೆಲವೊಮ್ಮೆ ಪ್ರಾಣಿ ಸಂಗ್ರಹಾಲಯಕ್ಕೆ ಬರುವ ವೀಕ್ಷಕರಿಗೆ ಯಾವ ಬೋನಿಯಲ್ಲಿ ಪ್ರಾಣಿ ಇದೆ ಎನ್ನುವುದು ತಿಳಿಯದ ರೀತಿ ಯಾವುದೋ ಮೂಲೆಯಲ್ಲಿ ಮುದುಡಿ ಮಲಗಿರುತ್ತವೆ. ಮತ್ತೊಮ್ಮೆ ನೋಡುಗರಿಗೆ ಭಯ ಬರುವ ರೀತಿ ಹೂಂಕರಿಸುತ್ತವೆ. ನೋಡುಗರ ಮೇಲೆ ಇನ್ನೇನು ಎರಗಿ ಬಿಡುತ್ತವೆಯೋ ಎನ್ನುವ ರೀತಿ ವರ್ತಿಸುತ್ತವೆ. ಹಲವಾರು ಬಾರಿ ಆಹಾರ ಹಾಕಿದರೂ ಅದನ್ನು ತಿನ್ನದೇ ಹಾಗೆಯೇ ಬಿಟ್ಟಿರುತ್ತವೆ. ಚಿರತೆಯಂತೂ ಗಂಡು ಚಿರತೆ ಸತ್ತ ದಿನದಿಂದ 2 ದಿನ ನೀರನ್ನೂ ಕುಡಿದಿರಲಿಲ್ಲ. ಸಾಧ್ಯವಾದಷ್ಟು ಬೇಗನೇ ಅವುಗಳಿಗೆ ಸಂಗಾತಿ ದೊರಕಿಸಿಕೊಡಬೇಕು ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

 ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.