ಕನಕದಾಸರ ಜಯಂತಿ ಕಾಟಾಚಾರಕ್ಕೆ ಮಾಡಬೇಡಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ನ. 8
ಸಮಾಜದ ಮುಖಂಡರನ್ನು ಕಡೆಗಣಿಸಿ, ಕನಕದಾಸರ ಜಯಂತಿ ಆಚರಣೆ ಮಾಡುವ ಕುರಿತು ಚರ್ಚಿಸಲು ಪೂರ್ವಭಾವಿ ಸಭೆ ಕರೆದಿದ್ದು, ಕಾಟಾಚಾರದ ಜಯಂತಿ ಆಚರಣೆಗೆ ಮುನ್ಸೂಚನೆಯಾಗಿದೆ ಎಂದು ಬೀರಪ್ಪ ಸ್ವಾಮಿ, ಸೋಮನಗೌಡ ಮರಿಗೌಡ್ರ, ಸಂತೋಷ ಕುರಿ ಅಪಾದಿಸಿದರು.
ಅವರು ಶುಕ್ರವಾರ ತಹಸೀಲ್ದಾರ್ ಕಾರ್ಯಾಯದಲ್ಲಿ ಕನಕದಾಸರ ಜಯಂತಿ ಆಚರಣೆ ಮಾಡುವ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪೂರ್ವಭಾವಿ ಸಭೆಯಲ್ಲಿ ಬೆರಳೆಣಿಕೆಯಷ್ಟು ಸರ್ಕಾರಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿರುವುದು ಮತ್ತು ಸಮಾಜದ ಮುಖಂಡರಿಗೆ ಸಭೆ ನಡೆಸುವ ಕುರಿತು ಮುಂಚಿತವಾಗಿಯೇ ಯಾವುದೇ ಮಾಹಿತಿ ನೀಡದಿರುವ ಕುರಿತು ಬೇಸರ ವ್ಯಕ್ತಪಡಿಸಿದರಲ್ಲದೇ ಕಾಟಾಚಾರದ ಜಯಂತಿ ಆಚರಣೆ ಮಾಡುವುದಾದರೆ ನಿಮ್ಮ ಕಾರ್ಯಾಲಯದಲ್ಲಿಯೇ ಆಚರಣೆ ಮಾಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು. ಅದ್ಧೂರಿ ಮೆರವಣಿಗೆಯೊಂದಿಗೆ ಜಯಂತಿ ಆಚರಿಸುವುದಾದರೆ ತಪ್ಪದೇ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಳ್ಳುವಂತೆ ತಾಕೀತು ಮಾಡಿ ಎಂದು ತಹಸೀಲ್ದಾರ್ರ ಗಮನ ಸೆಳೆದರು.
ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ ಮಾತನಾಡಿ, ಪ್ರತಿ ವರ್ಷವೂ ವಿವಿಧ ಕಾರ್ಯಕ್ರಮ ಮತ್ತು ಜಯಂತಿ ಆಚರಣೆ ಮಾಡುತ್ತಿದ್ದು, ಹಿಂದಿನ ವರ್ಷದ ಪದ್ದತಿಯಲ್ಲಿಯೇ ಆಚರಣೆ ಮಾಡುವ ಕುರಿತು ಮಾಹಿತಿ ಕೇಳಿದರೆ ನಮ್ಮ ಇಲಾಖೆಯ ಸಿಬ್ಬಂದಿ ಮತ್ತು ಶಿರಸ್ತೇದಾರರು ಯಾವುದೇ ಮಾಹಿತಿ ನೀಡದಿರುವುದು ಬೇಸರದ ಸಂಗತಿಯಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಬಾರಿಯಾದರೂ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಸಲಹೆ ನೀಡಿದರು.
ಕನಕದಾಸರ ಜಯಂತಿಯಂದು ಬೆಳಗ್ಗೆ 8.30ಕ್ಕೆ ಕರಿಸಿದ್ದೇಶ್ವರ ದೇವಸ್ಥಾನದಿಂದ ಕನಕದಾಸರ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಈ ಮೆರವಣಿಗೆಯಲ್ಲಿ ಡೊಳ್ಳು, ಜಾಂಜ್ಮೇಳ ಪಾಲ್ಗೊಳ್ಳುವವು. ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೀರೇಶ್ವರ ದೇವಸ್ಥಾನಕ್ಕೆ ಆಗಮಿಸುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೆರವಣಿಗೆ ಕಾರ್ಯಕ್ರಮಕ್ಕೆ ಜಾನಪದ ಕಲಾ ತಂಡಗಳನ್ನು ನೇಮಿಸಬೇಕೆಂದು ಇಲಾಖೆ ಅಧಿಕಾರಿಗಳಿಗೆ ಸಮಾಜದವರು ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎನ್. ರಾಟಿ, ಅಕ್ಷರ ದಾಸೋಹ ಅಧಿಕಾರಿ ಕೆ.ಎ. ಬಳಿಗೇರ, ತೋಟಗಾರಿಕೆ ಇಲಾಖೆಯ ಸುರೇಶ ಕುಂಬಾರಿ, ಸಿಡಿಪಿಒ ಎಸ್.ಕೆ. ಹೊನ್ನೇಗೌಡರ, ಹುಣಸ್ಯಾಳ, ತಾಲೂಕು ಕುರುಬರ ಸಂಘದ ಅಧ್ಯಕ್ಷ ರಾಮಣ್ಣ ಡಂಬಳ, ಪರಸಪ್ಪ ಪೂಜಾರ, ದೇವಪ್ಪ ಬಟ್ಟೂರ, ಗೂಳಪ್ಪ ಕರಿಗಾರ, ಯಲ್ಲಪ್ಪ ಹಾಲಪ್ಪನವರ, ಸುರೇಶ ಅಕ್ಕಿ, ಜಗದೀಶ ಸ್ವಾಮಿ, ಸಿದ್ದು ಅಮರಾಪುರ, ಪರಸಪ್ಪ ಹುಲಕಡ್ಡಿ ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

