ಹೆಚ್ಚಿದ ಬಾಲ ಕಾರ್ಮಿಕರು
ರೋಣ: ತಾಲೂಕಿನಾದ್ಯಂತ 8 ರಿಂದ 14 ವರ್ಷದೊಳಗಿನ ನೂರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕಾರ್ಮಿಕರಂತೆ ಅಪಾಯಕಾರಿ ಸ್ಥಳದಲ್ಲಿ ದುಡಿಯುತ್ತಿದ್ದಾರೆ.
ಈ ಕುರಿತು ಗಮನ ಹರಿಸಬೇಕಾದ ಜಿಲ್ಲಾ ಮತ್ತು ತಾಲೂಕು ಆಡಳಿತ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಸಾರ್ವಜನಿಕರ, ಪ್ರಗತಿಪರ ಚಿಂತಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಡ ಮಕ್ಕಳು ಬಾಲ್ಯಾವಸ್ಥೆಯಲ್ಲಿರುವಾಗ ಕಾರ್ಮಿಕರಂತೆ ದುಡಿಯದೇ ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯದ ಜೀವನ ಉಜ್ವಲಗೊಳ್ಳಲಿ ಎಂಬ ಸದುದ್ದೇಶದಿಂದ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ. ಆದರೆ, ಅದು ಇಲ್ಲಿ ಮಾತ್ರ ಮರೀಚಿಕೆಯಾಗಿದೆ. ತಾಲೂಕಿನಾದ್ಯಂತ ಇಂದು ನಿತ್ಯ 500ಕ್ಕೂ ಹೆಚ್ಚು ಮಕ್ಕಳು ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್, ಭಿಕ್ಷಾಟನೆ, ಹೊಲದಲ್ಲಿ ಕೂಲಿ ಕೆಲಸ, ಗಾರೆ ಕೆಲಸ, ಈರುಳ್ಳಿ ಹೆಚ್ಚುವುದರಲ್ಲಿ ಮಕ್ಕಳು ದುಡಿಯುತ್ತಿದ್ದಾರೆ.
ಆತಂಕಕಾರಿ ಬೆಳವಣಿಗೆ: ರೋಣ, ಗಜೇಂದ್ರಗಡ, ನರೇಗಲ್ ಪಟ್ಟಣ ಸೇರಿದಂತೆ ತಾಲೂಕಿನ ಅರಹುಣಸಿ, ಮಲ್ಲಾಪುರ, ಮುಗಳಿ, ಹೊಸಹಳ್ಳಿ, ಇಟಗಿ, ಸೂಡಿ, ಶಾಂತಗೇರಿ, ಚಿಕ್ಕಮಣ್ಣೂರ, ಮೇಲ್ಮಠ, ಸೋಮನಕಟ್ಟಿ, ಹಿರೇಹಾಳ, ಹೊನ್ನಿಗನೂರ, ಮುದೇನಗುಡಿ, ನಾಗೇಂದ್ರಗಡ, ತಳ್ಳಿಹಾಳ, ಸವಡಿ ಸೇರಿದಂತೆ ಬಹುತೇಕ ಎಲ್ಲ ಹಳ್ಳಿಗಳಲ್ಲಿ ಮಕ್ಕಳನ್ನ ಸದ್ಯ ಈರುಳ್ಳಿ ಹೆಚ್ಚುವುದರಲ್ಲಿ ಮತ್ತು ಗೋವಿನ ಜೋಳ ರಾಶಿ (ಮಷಿನ್ ಮೂಲಕ) ಕೆಲಸದಲ್ಲಿ ಕಾರ್ಮಿಕರಂತೆ ದುಡಿಯುತ್ತಿದ್ದಾರೆ.
ಸದ್ಯ ತಾಲೂಕಿನಲ್ಲಿ ಈರುಳ್ಳಿ ಹೆಚ್ಚುವ ಕೆಲಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕಾರ್ಮಿಕರಂತೆ ದುಡಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಎಷ್ಟೊಂದು ಅಪಾಯಕಾರಿಯಾಗಿದೆ ಎಂದರೆ, ಕುಡಗೋಲನ್ನು (ಹರಿತವಾದ ಆಯುಧ) ಬಳಸಿ ಈರುಳ್ಳಿ ಹೆಚ್ಚಲಾಗುತ್ತದೆ. ಸ್ವಲ್ಪ ಯಾಮಾರಿದರೆ ಕೈ ಬೆರಳುಗಳು ತುಂಡಾಗುವ ಸಾಧ್ಯತೆಯಿದೆ. ಒಂದು ಬುಟ್ಟಿ ಈರುಳ್ಳಿ ಹೆಚ್ಚಿದಲ್ಲಿ ರು. 10-15 ಕೊಡುತ್ತಾರೆ. ದಿನ ಪೂರ್ತಿ ರು. 20 ರಿಂದ 30ಕ್ಕೆ ಮಕ್ಕಳು ಕಾರ್ಮಿಕರಂತೆ ದುಡಿಯುತ್ತಿರುವದು ಮಾತ್ರ ನೋವಿನ ಸಂಗತಿ.
ಕಣ್ಮುಚ್ಚಿ ಕುಳಿತ ಇಲಾಖೆಗಳು: ಕೇವಲ ವರ್ಷಕ್ಕೊಮ್ಮೆ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ದಿನಾಚರಣೆಯನ್ನು ಕೇವಲ 4 ಗೋಡೆಗಳ ಮಧ್ಯ ಆಚರಿಸಿ ಕೈತೊಳೆದುಕೊಳ್ಳುತ್ತಿರುವ ಜಿಲ್ಲಾ ಮತ್ತು ತಾಲೂಕು ಕಾರ್ಮಿಕ ಇಲಾಖೆ ಅಧಿಕಾರಿಗಳು ವಾಸ್ತವ ಸಂಗತಿಗಳನ್ನು ತಿಳಿದು ಪರಿಹರಿಸುವ ದಿಶೆಯಲ್ಲಿ ಮುಂದಾಗಬೇಕಿದೆ. ಮಕ್ಕಳ ಸರ್ವಾಂಗೀಣ ಏಳ್ಗೆಗೆ ನಿಗಾವಹಿಸಬೇಕಾದ ಜಿಲ್ಲಾ ಮತ್ತು ತಾಲೂಕು ಆಡಳಿತ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳನ್ನೊಳಗೊಂಡ ಬಾಲ ಕಾರ್ಮಿಕ ನಿರ್ಮೂಲನಾ ಸಮಿತಿ ಕಣ್ಮುಚ್ಚಿ ಕುಳಿತಿರುವುದರಿಂದ ಮಕ್ಕಳು ಕಾರ್ಮಿಕರಂತೆ ದುಡಿಯುವ ಸಂಖ್ಯೆ ಹೆಚ್ಚಾಗುತ್ತಿದೆ.
ವಿವೇಚನಾ ಶಕ್ತಿಯ ಪ್ರಬುದ್ಧತೆ ಹೊಂದದ ಮಕ್ಕಳನ್ನು ಬಲವಂತವಾಗಿ ಅಪಾಯಕಾರಿ ಉದ್ಯಮದಲ್ಲಿ ದುಡಿಸಿಕೊಳ್ಳುವುದು ಅಪರಾಧ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವಲ್ಲಿ ಶ್ರಮಿಸಬೇಕಾದ ಕಾರ್ಮಿಕ ಇಲಾಖೆ ಸಂಪೂರ್ಣ ನಿಷ್ಕಾಳಜಿ ವಹಿಸಿದ್ದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಕಾರ್ಮಿಕ ಇಲಾಖೆ ಎಚ್ಚೆತ್ತು ಮಕ್ಕಳ ರಕ್ಷಣೆ ಮಾಡದಿದ್ದಲ್ಲಿ ಜಿಲ್ಲಾ ಮತ್ತು ತಾಲೂಕು ಕಚೇರಿ ಎದುರು ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು.
ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಗಾಗಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮೂಲಕ ಒಂದು ಸಮಿತಿಯನ್ನು ರಚಿಸಲಾಗಿದ್ದು, ಆ ಮೂಲಕ ನ. 6 ರಿಂದಲೇ ಜಿಲ್ಲಾದ್ಯಂತ ಪ್ರತಿಯೊಂದು ಮನಗೆ ತೆರಳಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಅಪಾಯಕಾರಿ ಸ್ಥಳದಲ್ಲಿ ಬಾಲ ಮಕ್ಕಳು ಕಾರ್ಮಿಕರಂತೆ ದುಡಿಸಿಕೊಳ್ಳುವದನ್ನು ತಡೆಗಟ್ಟುವಲ್ಲಿ ಕೂಡಲೇ ಕಾರ್ಮಿಕ ಇಲಾಖೆಗೆ ಆದೇಶಿಸಲಾಗುವುದು.
ಶಾಲೆ ತೆರೆಯಲು ಆಗ್ರಹ
ಶಾಲೆ ಬಿಟ್ಟು ಅಪಾಯಕಾರಿ ಸ್ಥಳಗಳಲ್ಲಿ ಕಾರ್ಮಿಕರಂತೆ ದುಡಿಯುತ್ತಿರವ ಮಕ್ಕಳಿಗೆ ಸೂಕ್ತ ಶಿಕ್ಷಣ ಕಲ್ಪಿಸುವಲ್ಲಿ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಬಾಲ ಕಾರ್ಮಿಕರ ಸಮೀಕ್ಷೆ ಎಂಬ ಸಂಸ್ಥೆಯಿಂದ ಈಗಾಗಲೇ ಜಿಲ್ಲಾದ್ಯಂತ ಸಮೀಕ್ಷೆ ಮಾಡಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 5 ಶಾಲೆಗಳನ್ನು ತೆರೆಯಲಾಗುತ್ತದೆ ಎನ್ನುವುದು ಶ್ಲಾಘನೀಯವಾಗಿದೆ. ಈ ಕುರಿತು ರೋಣ ತಾಲೂಕಿನಲ್ಲಿ ಸುಮಾರು 400ಕ್ಕೂ ಹೆಚ್ಚು ಮಕ್ಕಳು ಶಾಲೆ ಬಿಟ್ಟು ಅಪಾಯಕಾರಿ ಸ್ಥಳದಲ್ಲಿ ದುಡಿಯುತ್ತಿದ್ದಾರೆ. ಅಂತಹ ಮಕ್ಕಳ ಸಮೀಕ್ಷೆ ಮಾಡಿ ರೋಣ ತಾಲೂಕಿನಲ್ಲೊಂದು ಶಾಲೆ ತೆರೆಯುವಲ್ಲಿ ಜಿಲ್ಲಾಧಿಕಾರಿಗಳು ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
-ಪಿ.ಎಸ್. ಪಾಟೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

