ಹಮ್ಮಿಗೆ ಆಸ್ಪತ್ರೆಯಲ್ಲಿಲ್ಲ 24 ಗಂಟೆ ಆರೋಗ್ಯ ಸೇವೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ನ. 21
ಗದಗ ಜಿಲ್ಲೆಯ ಕೊನೆಯ ಗ್ರಾಮವೆಂದು ಹೆಸರಾಗಿರುವ ಹಮ್ಮಿಗಿ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆ ಸಾರ್ವಜನಿಕರ ಆರೋಗ್ಯ ಸೇವೆಗೆಂದು ಸ್ಥಾಪನೆಯಾಗಿದೆಯಾದರೂ ಇಂದು ಆಸ್ಪತ್ರೆಯೇ ಚಿಕಿತ್ಸೆಗಾಗಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಆಸ್ಪತ್ರೆಯ ಬಗ್ಗೆ ಗಮನ ಹರಿಸಬೇಕಾದ ಆರೋಗ್ಯ ಇಲಾಖೆ, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಈ ಭಾಗದ ಬಡವರಿಗೆ ತೀವ್ರ ತೊಂದರೆಯಾಗುತ್ತಿದೆ.
ತಾಲೂಕಿನ ಡಂಬಳ, ಬಾಗೇವಾಡಿ ಹಾಗೂ ಹಿರೇವಡ್ಡಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ದಿನದ 24 ತಾಸು, ವಾರದ 7 ದಿನಗಳ ಕಾಲ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೆರಿಗೆ ವ್ಯವಸ್ಥೆ ಇದೆ. ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸುಮಾರು 8 ಗ್ರಾಮಗಳು, 4 ಉಪ ಕೇಂದ್ರಗಳು ಬರುತ್ತಿದ್ದು, ಒಟ್ಟು 20 ಸಾವಿರದಷ್ಟು ಜನಸಂಖ್ಯೆ ಹೊಂದಿದೆ. ಇಲ್ಲಿಯೂ ದಿನದ 24 ಗಂಟೆ, ವಾರದ 7 ದಿನಗಳ ಕಾಲ ಹೆರಿಗೆ ಸೇವೆ ಪ್ರಾರಂಭಿಸಿ, ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲ ಮಾಡಿಕೊಡಬೇಕೆನ್ನುವುದು ಇಲ್ಲಿನ ಸಾರ್ವಜನಿಕರ ಬಹುದಿನದ ಆಶಯವಾಗಿದೆ.
ಈಡೇರದ ಭರವಸೆ: ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ವೇಳೆ ಮುಂದಿನ 2-3 ತಿಂಗಳಿನಲ್ಲಿ ದಿನದ 24 ಗಂಟೆ, ವಾರದ 7 ದಿನಗಳ ಕಾಲ ಹೆರಿಗೆ ಸೇವೆಯನ್ನು ಪ್ರಾರಂಭಿಸಿ ಗ್ರಾಮೀಣ ಜನತೆಗೆ ಅನುಕೂಲ ಮಾಡಿಕೊಡುವ ಭರವಸೆ ನೀಡಲಾಗಿತ್ತು. ಆದರೆ, ಆ ಭರವಸೆ ಹುಸಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶದ ಎಲ್ಲ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಹಾಗೂ ಹೆರಿಗೆ ಸಂದರ್ಭದಲ್ಲಿ ಆಗುವ ತಾಯಿ ಮರಣ ಮತ್ತು ಶಿಶುವಿನ ಮರಣದ ಪ್ರಮಾಣ ಕಡಿಮೆಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಹತ್ತು ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರ ಒಂದು ಭಾಗವಾಗಿ ಈ ಹೆರಿಗೆ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತವೆ. ಆದರೆ ಜನರಿಗೆ ಇನ್ನೂ ಹೆಚ್ಚಿನ ಸೇವೆ ನೀಡುವುದು ಅವಶ್ಯವಿದೆ.
ಕಾಂಗ್ರೆಸ್ ಸರ್ಕಾರವಾದರೂ ಈ ಆಸ್ಪತ್ರೆಯನ್ನು ದಿನದ 24 ಗಂಟೆ ಸೇವೆ ಸಲ್ಲಿಸುವ ಹಾಗೆ ಮಾಡಲಿ ಎಂದು ಹಮ್ಮಿಗಿ ಸುತ್ತಮುತ್ತಲಿನ ಗ್ರಾಮದ ಜನತೆಯ ಆಗ್ರಹವಾಗಿದೆ. ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಿಂಗಳಿಗೆ 8-10 ಹೆರಿಗೆಗಳು ಆಗುತ್ತಿದ್ದು, ನೂತನ ಕಟ್ಟಡವಾದಾಗಿನಿಂದ ಇಲ್ಲಿಯವರೆಗೆ ಸುಮಾರು 115ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಲಾಗಿದೆ. ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ರಿಗೆ ಬರುವ ಗುಮ್ಮಗೋಳ ಗ್ರಾಮವು ಮುಂಡರಗಿಯಿಂದ ಸುಮಾರು 30 ಕಿ.ಮೀ. ಅಂತರದಲ್ಲಿದ್ದು, ರಾತ್ರಿ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡರೆ ಗರ್ಭಿಣಿಯರಿಗೆ ತೊಂದರೆಯಾಗುತ್ತಿದೆ.
ಸಿಬ್ಬಂದಿ ಕೊರತೆ: ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹುದ್ದೆ 1, ಹಿರಿಯ ಆರೋಗ್ಯ ಸಹಾಯಕ ಪುರುಷ 1, ಹಿರಿಯ ಆರೋಗ್ಯ ಸಹಾಯಕ ಮಹಿಳೆ 1, ಪ್ರಥಮ ದರ್ಜೆ ಸಹಾಯಕರು 1, ಕಿರಿಯ ಔಷಧಿ ವಿತರಕರು 1, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞ 1, ಕಿರಿಯ ಆರೋಗ್ಯ ಸಹಾಯಕ ಪುರುಷ 2, ಕಿರಿಯ ಆರೋಗ್ಯ ಸಹಾಯಕಿ ಮಹಿಳೆ 5, ಡ ವರ್ಗದ ನೌಕರ 1 ಹೀಗೆ 14 ಹುದ್ದೆಗಳಿದ್ದು, ಇದೀಗ ವೈದ್ಯಾಧಿಕಾರಿ 1, ಕಿರಿಯ ಔಷಧಿ ವಿತರಕರು 1, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು 1, ಕಿರಿಯ ಆರೋಗ್ಯ ಸಹಾಯಕ ಪುರುಷ 1, ಕಿರಿಯ ಆರೋಗ್ಯ ಸಹಾಯಕಿ ಮಹಿಳೆ 1, ಹಿರಿಯ ಆರೋಗ್ಯ ಸಹಾಯಕ ಮಹಿಳೆ 1, ಡ ವರ್ಗದ ನೌಕರ 1 ಸೇರಿದಂತೆ ಒಟ್ಟು 7 ಹುದ್ದೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲಾಗುತ್ತಿದೆ. ಉಳಿದ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಸುವುದರ ಜತೆಗೆ ಆಸ್ಪತ್ರೆಯಲ್ಲಿ ದಿನದ 24 ಗಂಟೆ ಸೇವೆ ನೀಡುವಂತೆ ಆರೋಗ್ಯ ಸಚಿವ ವಿ.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಾಸಕ ರಾಮಕೃಷ್ಣ ದೊಡ್ಡಮನಿ ಅವರಲ್ಲಿ ಜನತೆ ವಿನಂತಿಸಿದ್ದಾರೆ.
-ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

