ಕಾಂಗ್ರೆಸ್ ಭದ್ರಕೋಟೆಗೆ ಬಿಜೆಪಿ ಲಗ್ಗೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಅ. 2
ಹಮ್ಮಿಗಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಗೆಲುವು ಸಾಧಿಸುವ ಮೂಲಕ ಕಳೆದ 20 ವರ್ಷಗಳಿಂದ ಕಾಂಗ್ರೆಸ್ನ ಭದ್ರಕೋಟೆಯ ದಾಖಲೆಯನ್ನು ಮುರಿದಿದ್ದು, ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎನ್ನುವುದನ್ನೂ ಕ್ಷೇತ್ರದ ಮತದಾರರು ಸಾಬೀತು ಮಾಡಿದ್ದಾರೆ.
ಎರಡೂವರೆ ವರ್ಷಗಳ ಹಿಂದೆ ನಡೆದ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಇದೇ ಹೇಮಗಿರೀಶ ಹಾವಿನಾಳ ಅಂದು ನಾಲ್ಕು ಸಾವಿರಕ್ಕೂ ಅಧಿಕ ಮತ ಪಡೆದು ಜಯಶಾಲಿಯಾಗಿದ್ದರು.
ನಂತರ ವಿಧಾನಸಭೆ ಪ್ರವೇಶಿಸಬೇಕೆನ್ನುವ ಉದ್ದೇಶದಿಂದ ಜಿಪಂ ಸದಸ್ಯತ್ವಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ನಂತರ ಜೆಡಿಎಸ್ ಪಕ್ಷ ಸೇರಿ ರೋಣ ಮತಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಅಲ್ಲಿ ಅವರು ಸೋಲನುಭವಿಸಬೇಕಾಯಿತು. ನಂತರದ ದಿನಗಳಲ್ಲಿ ಮತ್ತೆ ಬಿಜೆಪಿ ಸೇರ್ಪಡೆಗೊಂಡು ಇದೀಗ ಜರುಗಿದ ತಮ್ಮದೇ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಮತ್ತೊಮ್ಮೆ ಜಯಶಾಲಿಯಾಗಿದ್ದು, ಇಲ್ಲಿನ ಜನತೆ ಸಾರ್ವಜನಿಕ ಸಮಸ್ಯೆ ಸ್ಪಂದಿಸುವ ವ್ಯಕ್ತಿಗೆ ಮಣೆ ಹಾಕಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಕೈಹಿಡಿದ ಅಭಿವೃದ್ಧಿ ಕೆಲಸಗಳು: ಹಾವಿನಾಳ ಈ ಹಿಂದೆ 2 ವರ್ಷ 3 ತಿಂಗಳ ಕಾಲ ಜಿಪಂ ಸದಸ್ಯನಾಗಿ ಕ್ಷೇತ್ರ ವ್ಯಾಪ್ತಿಯ ಬಹುತೇಕ ಎಲ್ಲ ಗ್ರಾಮಗಳಲ್ಲಿಯೂ ಜಿಪಂ ಅನುದಾನದಲ್ಲಿ ಒಂದಿಲ್ಲೊಂದು ಅಭಿವೃದ್ದಿ ಕೆಲಸ ಮಾಡಿದ್ದು, ಕೆಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಸುಧಾರಿಸಿದರೆ ಇನ್ನು ಕೆಲವು ಗ್ರಾಮಗಳಿಗೆ ಕುಡಿವ ನೀರಿನ ಸಮಸ್ಯೆ ಪರಿಹರಿಸಿದ್ದಾರೆ. ರೈತರಿಗೆ ಸಹಾಯಧನದಲ್ಲಿ ಬೀಜ, ಗೊಬ್ಬರ ಕೊಡಿಸುವಲ್ಲಿ ರೈತರಿಗೆ ಸಹಾಯಧನದಲ್ಲಿ ದೊರೆಯುವ ಕೃಷಿ ಉಪಕರಣ ತಲುಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹೀಗಾಗಿ ಹಾವಿನಾಳಗೆ ಅವರು ಮಾಡಿದ ಅಭಿವೃದ್ಧಿ ಕೆಲಸಗಳು ಕೈ ಹಿಡಿದವು ಎನ್ನುವುದು ಜನತೆ ಅಭಿಪ್ರಾಯವಾಗಿದೆ.
ಪಕ್ಷಕ್ಕಿಂತ ವ್ಯಕ್ತಿ ಮುಖ್ಯ: ಹಾವಿನಾಳ ಈ ಹಿಂದೆ ಹಮ್ಮಿಗಿ ಜಿಪಂ ಸದಸ್ಯರಾಗಿದ್ದ ಸಂದರ್ಭ ಈ ಭಾಗದ ರೈತರ ಜೀವನಾಡಿ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿಸುವಲ್ಲಿ ಬಹಳಷ್ಟು ಶ್ರಮಿಸಿದ್ದರು. ಗದಗ ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ತಮ್ಮ ಕ್ಷೇತ್ರದ ರೈತರೊಂದಿಗೆ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ನಂತರದ ದಿನಗಳಲ್ಲಿ ಅವರೆಲ್ಲರಿಗೂ ಸಿಗಬೇಕಾದ ಪರಿಹಾರವನ್ನು ಅಂದಿನ ಬಿಜೆಪಿ ಸರ್ಕಾರದಿಂದ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆದ್ದರಿಂದ ಈ ಉಪಚುನಾವಣೆಯಲ್ಲಿ ಅವರು ಸ್ಪರ್ಧಿಸಿರುವ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎನ್ನುವ ನಿರ್ಣಯವನ್ನು ಮತದಾರರು ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ಗೆ ಮುಖಭಂಗ: ವಿಧಾನಸಭೆ ಚುನಾವಣೆ ಬಳಿಕ ಜಿಲ್ಲೆಯಲ್ಲಿ ಜರುಗಿದ ಮಹತ್ವದ ಉಪಚುನಾವಣೆ ಇದಾಗಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ, ಜಿಲ್ಲಾ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಸೇರಿದಂತೆ ಘಟಾನುಘಟಿ ನಾಯಕರು, ಜತೆಗೆ ಕ್ಷೇತ್ರದ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ನಿರಂತರವಾಗಿ ಪಾಲ್ಗೊಂಡು ಪ್ರಚಾರ ನಡೆಸಿದರೂ ಕಾಂಗ್ರೆಸ್ಗೆ ಇದು ಪ್ರಥಮ ಮುಖ ಭಂಗವಾಗಿದೆ. ಬಿಜೆಪಿ ಪಾಳೆಯದಲ್ಲಿ ಹರ್ಷ ಮನೆ ಮಾಡಿದೆ.
ನಾನು ಈ ಹಿಂದೆ ನನ್ನ ಕ್ಷೇತ್ರದಲ್ಲಿ ಮಾಡಿದ ಜನೋಪಯೋಗಿ ಅಭಿವೃದ್ದಿ ಕೆಲಸಗಳು ಹಾಗೂ ಸಾರ್ವಜನಿಕರಿಂದ ನಾನು ಗಳಿಸಿದ ಪ್ರೀತಿ ವಿಶ್ವಾಸವೇ ನನ್ನ ಈ ಚುನಾವಣೆ ಗೆಲುವಿಗೆ ಕಾರಣವಾಗಿದೆ. ನಾನು ಎಂದಿಗೂ ನನ್ನ ಮತದಾರರಿಗೆ ಹಾಗೂ ಪಕ್ಷಕ್ಕೆ ಋಣಿಯಾಗಿ ಕೆಲಸ ಮಾಡುವೆ.
- ಹೇಮಗಿರೀಶ ಹಾವಿನಾಳ
ಸದಸ್ಯರು, ಜಿಪಂ ಹಮ್ಮಿಗಿ ಕ್ಷೇತ್ರ
-ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

