ಗದಗ

ಹಾಸ್ಟೆಲ್ ಪ್ರಾರಂಭಕ್ಕೆ ಆಗ್ರಹ: ಪ್ರತಿಭಟನೆ

Published On :

ರೋಣ: 3 ತಿಂಗಳ ಹಿಂದೆಯೇ ಮೆಟ್ರಿಕ್ ನಂತರದ ಬಿಸಿಎಂ ಹಾಸ್ಟೆಲ್‌ಗೆ ವಿದ್ಯಾರ್ಥಿಗಳಿಂದ ಅರ್ಜಿ ಕರೆದು ನೇಮಕಾತಿ ಮಾಡಿಕೊಳ್ಳಲಾಗಿದ್ದರೂ, ಈವರೆಗೆ ಪಟ್ಟಣದಲ್ಲಿ ಬಿಸಿಎಂ ವಸತಿ ನಿಲಯ ಆರಂಭಗೊಳ್ಳದ್ದರಿಂದ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದ್ದು, ಈ ಕೂಡಲೇ ವಸತಿ ನಿಲಯಗಳನ್ನು ಆರಂಭಿಸಬೇಕು ಎಂದು ತಾಲೂಕು ಎಬಿವಿಪಿ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪಟ್ಟಣದಲ್ಲಿನ ಬಿಸಿಎಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ರಾಜ್ಯ ಸಂಚಾಲಕ ಅನಿಲ ನವಲಗುಂದ ಮಾತನಾಡಿ, ರಾಜ್ಯ ಸರ್ಕಾರ ಶಿಕ್ಷಣದ ಬಗ್ಗೆ ಅಭಿವೃದ್ಧಿಯ ಸುಳ್ಳು ಭರವಸೆಯನ್ನೇ ಹೇಳುತ್ತಾ ಕಾಲಹರಣ ಮಾಡುತ್ತಿದೆ. ಇಲ್ಲಿ 65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮರ್ಪಕ ವಸತಿ ವ್ಯವಸ್ಥೆ ಇಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ನಿತ್ಯ ಬಿಸಿಎಂ ಕಚೇರಿಗೆ ಅಲೆಯುತ್ತಿದ್ದಾರೆ. ಈ ಕುರಿತು ಬಿಸಿಎಂ ಅಧಿಕಾರಿ ಈಟೇಕರ್ ಅವರು ಸ್ಪಂದಿಸುತ್ತಿಲ್ಲ. ಹೀಗೇಕೆ ಎಂದು ಕೇಳಿದರೆ ಜನಪ್ರತಿನಿಧಿಗಳ ಮೇಲೆ ಹಾಕುತ್ತಾರೆ. ಈ ಕುರಿತು ಗಂಭೀರವಾಗಿ ವಿಚಾರ ಮಾಡದೇ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೆಟ್ರಿಕ್ ನಂತರದ ವಸತಿ ನಿಲಯಗಳನ್ನು ಇನ್ನೂ ಆರಂಭಿಸದಿರುವುದು ಆಡಳಿತ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಾಗಿದ್ದು, ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಯಾವುದೇ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದಕ್ಕೆ ಇದೊಂದು ನಿದರ್ಶನ. ಕೂಡಲೇ ಸ್ಥಳೀಯ ಶಾಸಕರು ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ವಸತಿ ನಿಲಯವನ್ನು ಕೂಡಲೇ ಆರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು. ವಿದ್ಯಾರ್ಥಿ ಮುಖಂಡ ಜಗದೀಶ ಕೋಟೆಣ್ಣವರ, ಮಹೇಶ ಹೊಸಳ್ಳಿ, ಯಚ್ಚರಗೌಡ ಗೋವಿಂದಗೌಡ್ರ, ಬಿ.ಆರ್. ಕಳಸಣ್ಣವರ, ಎಸ್.ಕೆ. ಮಠದ, ಎಂ.ಆರ್. ಅಂಗಡಿ, ಅನಿಲ ಆವಣ್ಣವರ, ರಂಗನಾಥ ಹೊಸೂರ, ಶಂಭು ವಗತಿ, ಗುರುಪಾದ ಜಡಿಮಠ ಸೇರಿದಂತೆ ತಾಲೂಕು ಎಬಿವಿಪಿ ಸಂಘಟನೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರಾಜ್ಯ ಸರ್ಕಾರ ಶಿಕ್ಷಣದ ಬಗ್ಗೆ ಅಭಿವೃದ್ಧಿಯ ಸುಳ್ಳು ಭರವಸೆಯನ್ನೇ ಹೇಳುತ್ತಾ ಕಾಲಹರಣ ಮಾಡುತ್ತಿದೆ. ಇಲ್ಲಿ 65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಮರ್ಪಕ ವಸತಿ ವ್ಯವಸ್ಥೆ ಇಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ನಿತ್ಯ ಬಿಸಿಎಂ ಕಚೇರಿಗೆ ಅಲೆಯುತ್ತಿದ್ದಾರೆ. ಈ ಕುರಿತು ಬಿಸಿಎಂ ಅಧಿಕಾರಿ ಈಟೇಕರ್ ಅವರು ಸ್ಪಂದಿಸುತ್ತಿಲ್ಲ.
- ಪ್ರತಿಭಟನಾಕಾರರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.