ಹಿಂದೂ ಸಮಾಜ ಮುಂದಿನ ಶತಮಾನದ ಆಶಾಕಿರಣ
ಗದಗ: ಭಾರತೀಯ ಹಿಂದೂ ಸಮಾಜ ಮುಂದಿನ ಶತಮಾನದ ಆಶಾಕಿರಣವಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಉತ್ತರ ಪ್ರಾಂತೀಯ ಪ್ರಮುಖ ಸು. ಕೃಷ್ಣಮೂರ್ತಿ ಹೇಳಿದರು.
ಅವರು ಶುಕ್ರವಾರ ರಾತ್ರಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಗದಗ ಆರ್.ಎಸ್.ಎಸ್. ಘಟಕದ ವತಿಯಿಂದ ವಿಜಯದಶಮಿ ನಿಮಿತ್ತ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು. ಜಾತಿ ಆಧಾರಿತ ರಾಜಕಾರಣ ವ್ಯವಸ್ಥೆಯಿಂದಾಗಿ ದೇಶದಲ್ಲಿಂದು ಹಲವಾರು ಅವಘಡಗಳು, ಭಯೋತ್ಪಾದನೆ ನಡೆಯುತ್ತಿವೆ. ರಾಜ್ಯದ ಹಲವಾರು ಕಡೆಗಳಲ್ಲಿ ಕ್ರಿಶ್ಚಿಯನ್ನರಿಂದ ಮತಾಂತರ ಜರುಗುತ್ತಿದೆ. ಕಳೆದ ಹಲವಾರು ದಶಕಗಳಿಂದ ದೇಶವನ್ನಾಳಿದ ರಾಜಕಾರಣಿಗಳು ಮುಸ್ಲಿಂರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ವಿಫಲರಾಗಿದ್ದಾರೆ. ದೇಶದ ಸಂರಕ್ಷಣೆಯ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಆರ್.ಎಸ್.ಎಸ್. ಯಾವುದೇ ಧರ್ಮ ಹಾಗೂ ಜನರ ವಿರೋಧಿಯಲ್ಲ. ಆರ್.ಎಸ್.ಎಸ್. ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿದ್ದು, ಹಿಂದೂ ಸಮಾಜ ದೌರ್ಬಲ್ಯವಲ್ಲ ಎಂಬ ಸಂದೇಶವನ್ನು ವಿಶ್ವಕ್ಕೆ ನೀಡುವ ಗುರಿ ಹೊಂದಿದೆ. ಹಿಂದೂ ಸಮಾಜದಲ್ಲಿ ಸ್ವಾಭಿಮಾನ ಮೂಡಿಸುವ ಚಳವಳಿ ಅಗತ್ಯ. ಪ್ರತಿಯೊಬ್ಬರೂ ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶ ಕಟ್ಟುವ ಕಾರ್ಯಕ್ಕೆ ಮುಂದಾಗುವುದು ಅತ್ಯವಶ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಲೆಕ್ಕಪರಿಶೋಧಕ ಕೆ.ಎಸ್. ಚೆಟ್ಟಿ ಮಾತನಾಡಿ, ಆರ್.ಎಸ್.ಎಸ್. ಸಂಘಟನೆಯ ಶಿಸ್ತು ಇಡೀ ಜಗತ್ತಿಗೆ ಮಾದರಿಯಾಗಿದ್ದು, ಸಮಾಜ ಕಾರ್ಯದಲ್ಲಿ ತೊಡಗಿರುವ ಆರ್.ಎಸ್.ಎಸ್. ಬಲಗೊಳ್ಳುವುದರಿಂದ ದೇಶದ ಸದೃಢತೆ ಸಾಧ್ಯ ಎಂದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಹಳೇ ಬಸ್ ನಿಲ್ದಾಣ ರಸ್ತೆಯ ಮಹಾಲಕ್ಷ್ಮೀ ಜಿನ್ನಿಂಗ್ ಫ್ಯಾಕ್ಟರಿಯಿಂದ ಪ್ರಾರಂಭವಾದ ಗಣವೇಷಧಾರಿಗಳ ಪಥಸಂಚಲನ ನಗರದ ಕಮ್ಮಾರಸಾಲ, ಹಳೆ ಸರಾಫ ಬಜಾರ, ವೀರನಾರಾಯಣ ದೇವಸ್ಥಾನ, ಚವಡಿಕೂಟ, ಹುಯಿಲಗೋಳ ನಾರಾಯಣರಾವ್ ವೃತ್ತ, ಮಹೇಂದ್ರಕರ ವೃತ್ತ, ಮಹಾತ್ಮಾಗಾಂಧೀಜಿ ವೃತ್ತದ ಮೂಲಕ ಸಭಾ ಸ್ಥಳ ಮುನ್ಸಿಪಲ್ ಮೈದಾನ ತಲುಪಿತು. ಪಥಸಂಚಲನದಲ್ಲಿ ಸುಮಾರು 150ಕ್ಕೂ ಅಧಿಕ ಗಣವೇಶಧಾರಿಗಳು ಪಾಲ್ಗೊಂಡಿದ್ದರು. ಸುಧೀರಸಿಂಗ್ ಘೋರ್ಪಡೆ, ಮೋಹನ್ ಮಾಳಶೆಟ್ಟಿ, ಜಗನ್ರಾಜ ಪುರೋಹಿತ, ಮಾಧವ ಗಣಾಚಾರಿ, ಗಂಗಣ್ಣ ಕೋಟಿ, ಲಕ್ಕಣಸಾ ರಾಜೋಳಿ, ಶ್ರೀಧರ ಕುಲಕರ್ಣಿ, ಅಶೋಕ ಬ್ಯಾಹಟ್ಟಿ, ಹುಚ್ಚೀರಪ್ಪ ಮುಂತಾದವರು ಇದ್ದರು.
ರಾಘವೇಂದ್ರ ವರ್ಣೇಕರ ಸ್ವಾಗತಿಸಿದರು. ಮಂಜುನಾಥ ಹದ್ದಣ್ಣವರ ನಿರೂಪಿಸಿದರು. ನಗರ ಸಂಚಾಲಕ ತುಕಾರಾಮ ಜಮಾದರ ವಂದಿಸಿದರು.
ಜಾತಿ ಆಧಾರಿತ ರಾಜಕಾರಣ ವ್ಯವಸ್ಥೆಯಿಂದಾಗಿ ದೇಶದಲ್ಲಿಂದು ಹಲವಾರು ಅವಘಡಗಳು, ಭಯೋತ್ಪಾದನೆ ನಡೆಯುತ್ತಿವೆ. ರಾಜ್ಯದ ಹಲವಾರು ಕಡೆಗಳಲ್ಲಿ ಕ್ರಿಶ್ಚಿಯನ್ನರಿಂದ ಮತಾಂತರ ಜರುಗುತ್ತಿದೆ. ಕಳೆದ ಹಲವಾರು ದಶಕಗಳಿಂದ ದೇಶವನ್ನಾಳಿದ ರಾಜಕಾರಣಿಗಳು ಮುಸ್ಲಿಂರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ವಿಫಲರಾಗಿದ್ದಾರೆ.
-ಸು. ಕೃಷ್ಣಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

