ಗದಗ

ಆಶ್ರಯ ನಿವೇಶನ ಹಂಚಿಕೆಯಲ್ಲಿ ತಾರತಮ್ಯ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಅ. 12
ಪಟ್ಟಣದಲ್ಲಿ ವಾಜಪೇಯಿ ಆಶ್ರಯ ನಿವೇಶನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಆಶ್ರಯ ಕಮಿಟಿಯ ಅಧ್ಯಕ್ಷರಾಗಿರುವ ಶಾಸಕರು ತಮಗೆ ಬೇಕಾದವರಿಗೆ ಮಾತ್ರ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಈಚೆಗೆ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಹೇಶ ಹೊಗೆಸೊಪ್ಪಿನ ಆರೋಪಿಸಿದರು.
ಪಟ್ಟಣದ ಪುರಸಭೆಯ ಸದಸ್ಯರು ಚುನಾಯಿತರಾಗಿ ಆಯ್ಕೆಯಾದ ನಂತರ ಮೊದಲ ಸಾಮಾನ್ಯ ಸಭೆ ಜರುಗಿತು. ಸಾಮಾನ್ಯ ಸಭೆಗೆ ಆಗಮಿಸಿದ ಪುರಸಭೆಯ ಎಲ್ಲ ಸದಸ್ಯರನ್ನು ಸ್ವಾಗತಿಸಲಾಯಿತು.
ಸಭೆಯಲ್ಲಿ ವಾಜಪೇಯಿ ಆಶ್ರಯ ನಿವೇಶನ ಹಂಚಿಕೆಯಲ್ಲಿ ಕೆಲವು ವಾರ್ಡ್‌ಗಳಿಗೆ ಮಾತ್ರ ಪ್ರಾತಿನಿಧ್ಯ ನೀಡಲಾಗಿದೆ. ಇನ್ನೂ ಕೆಲ ವಾರ್ಡ್‌ಗಳ ನಾಗರಿಕರಿಗೆ ಹಾಗೂ ಈ ಹಿಂದೆ ನಿವೇಶನಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ ಅರ್ಜಿದಾರರಿಗೆ ಈ ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ಹೀಗೆ ಶಾಸಕರು ತಮಗೆ ಬೇಕಾದವರಿಗೆ ಮಾತ್ರ ನಿವೇಶನ ಹಂಚಿಕೆ ಮಾಡಿದ್ದಾರೆ ಎಂದು ಅನಿಲ ಮುಳಗುಂದ ಆರೋಪಿಸಿದಾಗ, ಸದಸ್ಯ ವಿ.ಜಿ. ಪಡಗೇರಿ ಮಾತನಾಡಿ, ಆಶ್ರಯ ಕಮಿಟಿ ಅಧ್ಯಕ್ಷರು ಶಾಸಕರಾಗಿದ್ದು ಅದರ ಸಂಪೂರ್ಣ ಜವಾಬ್ದಾರಿ ಅವರಿಗೆ ಸೇರಿದ್ದು, ಪುರಸಭೆಯ ಸದಸ್ಯರಿಗೆ ಯಾವುದೇ ಹಕ್ಕು ಇಲ್ಲವೆಂದರು.
ಈ ಸಂದರ್ಭದಲ್ಲಿ ಇನ್ನೋರ್ವ ಸದಸ್ಯ ರಾಜು ಕುಂಬಿ ಮಾತನಾಡಿ, ಸಭೆಯ ನಡಾವಳಿಯಲ್ಲಿ ಇರತಕ್ಕ ವಿಷಗಳನ್ನು ಮಾತ್ರ ಚರ್ಚಿಸಬೇಕು. ಇಲ್ಲವಾದಲ್ಲಿ ಬೇರೆ ಬೇರೆ ವಿಷಯಗಳತ್ತ ಸಭೆಯ ಗಮನ ಸೆಳೆದಂತಾಗುತ್ತದೆ ಎಂದಾಗ ಇದರಿಂದ ಆಕ್ರೋಶಗೊಂಡ ಪುರಸಭೆಯ ಕೆಜೆಪಿ ಸದಸ್ಯ ಮಹೇಶ ಹೊಗೆಸೊಪ್ಪಿನ ಮಾತನಾಡಿ, ಶಾಸಕರಿಗೆ ನಮ್ಮೂರಿನಲ್ಲಿ ನಿವೇಶನಕ್ಕಾಗಿ ಈ ಹಿಂದೆ ಅರ್ಜಿ ನೀಡಿದ ಫಲಾನುಭವಿಗಳ ಹೆಸರುಗಳು ಗೊತ್ತಿರುವುದಿಲ್ಲ. ಅದಕ್ಕಾಗಿ ಪುರಸಭೆಯ ಅಧಿಕಾರಿಗಳು ಹಾಗೂ ಕೆಲ ಸದಸ್ಯರು ತಮಗೆ ಬೇಕಾದ ಜನರಿಗೆ ಮಾತ್ರ ನಿವೇಶನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರೋಪಿಸಿ ಅವರು ಹಾಗೂ ಗಣೇಶ ಬೇವಿನಮರದ ಸಭೆಯಿಂದ ಹೊರನಡೆದರು.
ವಿ.ಜಿ. ಪಡಗೇರಿ ಮಾತನಾಡಿ, ಪುರಸಭೆಯ ಆಸ್ತಿಯಾಗಿದ್ದ ಹಳೆಯ ಬಸ್ ನಿಲ್ದಾಣವನ್ನು ಕೆಲವೊಂದು ಕರಾರುಗಳಿಗೆ ಒಪ್ಪಿ ಸಾರಿಗೆ ಇಲಾಖೆಗೆ ನೀಡಲಾಗಿತ್ತು, ಆದರೆ ಸಾರಿಗೆ ಇಲಾಖೆಯ ಅಧಿಕಾರಿಗಳು ತಾವು ನೀಡಿದ ಕರಾರುಗಳನ್ನು ಉಲ್ಲಂಘಿಸಿದ್ದಾರೆ. ಅದಕ್ಕಾಗಿ ಬೆಲೆ ಬಾಳುವ ಪುರಸಭೆಯ ಆಸ್ತಿಯನ್ನು ಮರಳಿ ಪುರಸಭೆಗೆ ಹಸ್ತಾಂತರ ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಬೇಕು. ಅಲ್ಲದೇ ಈಗಾಗಲೇ ಪಟ್ಟಣದ ಹಲವು ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದು, ಆ ಕಾಮಗಾರಿಗೆ ಟೆಂಡರ್ ಪಡೆದುಕೊಂಡು ಕಾಮಗಾರಿಯನ್ನು ಪ್ರಾರಂಭಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈ ಬಗ್ಗೆ ಆ ಗುತ್ತಿಗೆದಾರರಿಗೆ ನೋಟಿಸ್ ನೀಡಬೇಕು ಎಂದು ಉಪಾಧ್ಯಕ್ಷ ಎಂ.ಆರ್. ಪಾಟೀಲ ಸೂಚಿಸಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕಿರಸ್ವಾಮಿಮಠ, ಸದಸ್ಯ ವಿ.ಜಿ.ಪಡಗೇರಿ, ಜಯಕ್ಕ ಕಳ್ಳಿ ಸೇರಿದಂತೆ ಎಲ್ಲ ಪುರಸಭೆಯ ಸದಸ್ಯರು ಹಾಗೂ ಮುಖ್ಯಾಧಿಕಾರಿ ಯು.ಎಸ್. ಗುಡ್ಡದ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.