ಗದಗ

ಕಾಮಗಾರಿಗೆ ಅಡ್ಡಿಪಡಿಸಿದರೆ ಮೊಕದ್ದಮೆ ದಾಖಲು: ಪಾಟೀಲ್

Published On :

ಕನ್ನಡಪ್ರಭ ವಾರ್ತೆ, ರೋಣ, ಅ. 12
ಪಟ್ಟಣದಲ್ಲಿನ ವಿವಿಧ ವಾರ್ಡ್‌ಗಳಲ್ಲಿ ನಡೆಯಲಿರುವ ರಸ್ತೆ, ಚರಂಡಿ, ಶೌಚಾಲಯ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಯಾರಾದರೂ ಅಡ್ಡಿಪಡಿಸಿದಲ್ಲಿ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ, ತಕ್ಕ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಎಚ್ಚರಿಕೆ ನೀಡಿದರು.
ಗುರುವಾರ ಪುರಸಭೆಯ ಸಭಾಭವನದಲ್ಲಿ ಜರುಗಿದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು, ಕೆಲ ಜನತೆ ಕಾಮಗಾರಿಗಳಿಗೆ ತಡೆ ಮಾಡುತ್ತಾರೆ ಎಂಬ ಸದಸ್ಯರ ದೂರಿಗೆ ಈ ರೀತಿ ಪ್ರತಿಕ್ರಿಯಿಸಿದರು.
ಜಿಗಳೂರು ಒಳರಸ್ತೆಯಲ್ಲಿನ ಸ್ಮಶಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅದರ ದುರಸ್ತಿ 4 ವರ್ಷಗಳ ಹಿಂದೆ ಅರ್ಧಕ್ಕೆ ಮುಗಿದಿದ್ದು, ಇನ್ನರ್ಧ ಕಾಮಗಾರಿಗೆ ಅಲ್ಲಿನ ಕೆಲ ಜನತೆ ಅನಾವಶ್ಯಕ ತಂಟೆ, ತಕರಾರು ತೆಗೆದು ಅಡ್ಡಿಪಡಿಸುತ್ತಿದ್ದಾರೆ. ಸಮರ್ಪಕ ರಸ್ತೆ ಇಲ್ಲದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಶಾಸಕರೇ ಇದಕ್ಕೊಂದು ಮಾರ್ಗೋಪಾಯ ಮಾಡಬೇಕು. ಇಲ್ಲದಿದ್ದರೆ ಕಾಮಗಾರಿ ಪೂರ್ಣಗೊಳಿಸಲು ಅಸಾಧ್ಯ ಎಂದು ಸದಸ್ಯ ಮಂಜುನಾಥ ಹಾಳಕೇರಿ, ತೋಟಪ್ಪ ನವಲಗುಂದ ಆಗ್ರಹಿಸಿದರು. ಆಗ ಶಾಸಕರು ಮೇಲಿನಂತೆ ಹೇಳಿದರು.
ಸ್ಚಚ್ಛತೆಗೆ ಅದ್ಯತೆ ನೀಡಿ
ಪಟ್ಟಣದಲ್ಲಿನ ಬಹುತೇಕ ವಾರ್ಡ್‌ಗಳ ಗಟಾರುಗಳು ಗಲೀಜಿನಿಂದ ತುಂಬಿದ್ದು, ಗಬ್ಬು ನಾರುತ್ತಿವೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅಲ್ಲದೆ ಅಲ್ಲಲ್ಲಿ ಮಹಿಳಾ ಶೌಚಾಲಯ ನಿರ್ಮಿಸಿ 3 ವರ್ಷಗಳೇ ಗತಿಸಿವೆ. ಈವರೆಗೂ ಬಳಕೆಗೆ ನೀಡುವಲ್ಲಿ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಸದಸ್ಯ ಖಾದರಸಾಬ್ ಸಂಕನೂರ, ಯಮನವ್ವ ಜುಮ್ಮನಕಟ್ಟಿ, ರತ್ನಾ ಕೊಳ್ಳಿ, ನಾಜಿಬೇಗಂ ಯಲಿಗಾರ, ವಿಜಯ ಗಡಗಿ, ಜಯಶ್ರೀ ನವಲಗುಂದ ತಿಳಿಸಿದರು. ಈ ಕುರಿತು ಶಾಸಕ ಪಾಟೀಲ್ ಪ್ರತಿಕ್ರಿಯಿಸಿ, ಸೂಕ್ತ ಕ್ರಮ ಕೈಗೊಂಡು ನಿರ್ಮಾಣಗೊಂಡಿರುವ ಮಹಿಳಾ ಶೌಚಾಲಯಗಳನ್ನು ಬಳಕೆಗೆ ಕೊಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಮಳಿಗೆಗಳ ಮಾಹಿತಿ ನೀಡಿ
ಪುರಸಭೆ ಮಳಿಗೆಗಳು ಎಷ್ಟಿವೆ. ಅವುಗಳಿಂದ ಬರುವ ಬಾಡಿಗೆ ಎಷ್ಟು, ಯಾರು ಬಾಡಿಗೆ ಪಡೆದಿದ್ದಾರೆ. ಅದರಲ್ಲಿ ಯಾರು ವ್ಯಾಪಾರ ನಡೆಸುತ್ತಿದ್ದಾರೆ ಎಂಬುದರ ಬಗ್ಗೆ ಸವಿಸ್ತಾರ ಮಾಹಿತಿ ನೀಡುವಂತೆ ಪುರಸಭೆ ಅಧ್ಯಕ್ಷಮುತ್ತಣ್ಣ ಸಂಗಳದ ಆಗ್ರಹಿಸಿದರು. ಆಗ ಮುಖ್ಯಾಧಿಕಾರಿ ಕೆ.ಐ. ನಾಗನೂರ ಮಾತನಾಡಿ, ಮುಂದಿನ ಸಭೆ ನಡೆಯುವುದರೊಳಗೆ ಸರ್ವೆ ಮಾಡಿ ಮಾಹಿತಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ನಂತರ 2012-13ನೇ ಸಾಲಿನ 13ನೇ ಹಣಕಾಸಿನ ಕ್ರಿಯಾಯೋಜನೆ ಅನುಮೋದನೆ ಪಡೆಯಲಾಯಿತು. ಸಭೆಯಲ್ಲಿ ಅಧ್ಯಕ್ಷ ಮುತ್ತಣ್ಣ ಸಂಗಳದ, ಮುಖ್ಯಾಧಿಕಾರಿ ಕೆ.ಐ. ನಾಗನೂರ, ಅಭಿಯಂತರ ಬಿ.ಎ. ನದಾಫ್, ಗದಿಗೆಪ್ಪ ಕಿರೇಸೂರ, ವಿರೋಧ ಪಕ್ಷದ ನಾಯಕ ಬಸನಗೌಡ ಪಾಟೀಲ ಸೇರಿದಂತೆ ಸರ್ವ ಸದಸ್ಯರು, ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.