ಭಾವೈಕ್ಯದೂರಿನಲ್ಲಿ ವಿಶಿಷ್ಟ ವಿಜಯದಶಮಿ
ಶಿರಹಟ್ಟಿ: ಶಿರಹಟ್ಟಿ ಭಾವೈಕ್ಯಕ್ಕೆ ಹೆಸರಾಗಿದ್ದು, ದಸರಾ ಹಾಗೂ ಬನ್ನಿ ಮುಡಿಯುವ ಸಂಪ್ರದಾಯವೂ ವಿಶಿಷ್ಟವಾಗಿದೆ. ಜ. ಫಕೀರ ಸಿದ್ಧರಾಮ ಶ್ರೀಗಳು ಪಟ್ಟಣದ ಕೆಳಗೇರಿ ಓಣಿಯ ಗರಿಬನ್ ನವಾಜ್ ದರ್ಗಾದ ಸಮೀಪ ಸೋಮವಾರ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಆನೆ, ಒಂಟೆ, ಕುದುರೆ ಮತ್ತು ವಾದ್ಯ ವೃಂದದ ಜತೆಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಿ, ಬನ್ನಿ ಮುಡಿಯುತ್ತಾ ಜನತೆಯನ್ನು ಆಶೀರ್ವದಿಸಿದರು. ಪಟ್ಟಣದಲ್ಲಿ ಬನ್ನಿ ಮುಡಿಯುವ ಆಚರಣೆಗೆ ಸ್ವಾಮಿಗಳೇ ಚಾಲನೆ ನೀಡುತ್ತಾರೆ. ಅನೇಕ ಶತಮಾನಗಳಿಂದ ಈ ಸಂಪ್ರದಾಯ ನಡೆದು ಬಂದಿದೆ. ಪರಸ್ಪರ ದ್ವೇಷ ಹಾಗೂ ಭೇದ ಭಾವನೆ ತೊರೆದು ಹಿಂದೂಗಳು ಹಾಗೂ ಮುಸ್ಲಿಂಮರು ಬನ್ನಿ ಮುಡಿದು ದ್ವೇಷ ಬಿಡು, ಪ್ರೀತಿ ಮಾಡು ಎಂದು ಸಾರುತ್ತಾರೆ. ಹಿರಿಯರಾದ ಶೀಮಣ್ಣ ಅಕ್ಕಿ, ಬಸಲಿಂಗಪ್ಪ ಕಪ್ಪತ್ತನವರ, ಎ.ಎ.ಪಠಾಣ, ದೇವಪ್ಪ ತಳವಾರ, ಡಿ.ಎನ್.ಡಬಾಲಿ, ವೈ.ಎಸ್. ಪಾಟೀಲ, ಎನ್.ಆರ್. ಕುಲಕರ್ಣಿ ಈ ಸಂಪ್ರದಾಯಕ್ಕೆ ಅನೇಕ ದಶಕಗಳ ಇತಿಹಾಸವೇ ಇರುವುದನ್ನು ನೆನಪಿಸಿಕೊಳ್ಳುತ್ತಾರೆ.
ಘಟಸ್ಥಾಪನೆ: 9 ದಿನ ದೇವಿಯ ಘಟಸ್ಥಾಪನೆ ಮಾಡಿ, ಮಡಿಯಿಂದ ಪೂಜೆ ಸಲ್ಲಿಸಿ, ಕೊನೆಯ ದಿನ ಆಯುಧ ಪೂಜೆ ಹಾಗೂ ಮಾರನೇ ದಿನ ವಿಜಯ ದಶಮಿಯನ್ನು ವಿಜೃಂಭಣೆಯಿಂದ ಆಚರಿಸುವುದು ರೂಢಿ. ವಿಜಯ ದಶಮಿಯ ಸಡಗರಕ್ಕೆ ಪಟ್ಟಣವೆಲ್ಲ ಶೃಂಗಾರಗೊಂಡಿತ್ತು. ದೀಪಾಲಂಕಾರ-ತಳಿರು ತೋರಣಗಳಿಂದ ಬೀದಿಗಳು ಝಗಮಗಿಸುತ್ತಿದ್ದವು. ಸ್ವಾಮಿಗಳಿಂದ ಬನ್ನಿ ಮುಡಿಯುವ ಕಾರ್ಯಕ್ರಮ ಪ್ರಾರಂಭಗೊಂಡ ನಂತರ ಪಟ್ಟಣದ ಜನತೆ ಬನ್ನಿ ಕೊಟ್ಟು ಬಂಗಾರದಂತೆ ಬಾಳೋಣ ಎಂದು ಸ್ನೇಹಿತರು, ಬಂಧುಗಳು, ಹಿರಿಯರಿಗೆ ನಮಸ್ಕರಿಸಿ ಶುಭ ಹಾರೈಸಿದರು. ಪಟ್ಟಣ ಸೇರಿದಂತೆ ಬೇರೆ ಊರುಗಳಿಂದ ಆಗಮಿಸಿದ ಬಹುತೇಕ ಜನರು ಸ್ವಾಮಿಗಳು ಬನ್ನಿ ಮುಡಿಯುವುದನ್ನು ವೀಕ್ಷಿಸಿದರು. ಗಾಂಧಿ ವೃತ್ತದ ಬಳಿ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಮೆರವಣಿಗೆಯಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಸದಸ್ಯ ಹುಮಾಯೂನ ಮಾಗಡಿ, ಸಂತೋಶ ಕುರಿ, ಜೆ.ಆರ್.ಕುಲಕರ್ಣಿ, ಮುಖಂಡ ಸಿ.ಸಿ. ನೂರಶೆಟ್ಟರ, ರಾಮಣ್ಣ ಡಂಬಳ, ಪರಮೇಶಿ ಪರಬ, ಬಸವರಾಜ ಹೊಸೂರ, ಬೀರಪ್ಪ ಸ್ವಾಮಿ, ಅಶೋಕ ಕಲಬುರ್ಗಿ, ಕಾಶಪ್ಪ ಸ್ವಾಮಿ, ಬಸವಣ್ಣೆಪ್ಪ ತುಳಿ ಹಾಗೂ ಪಟ್ಟಣದ ವಿವಿಧ ಸಂಘಟನೆಯ ಯುವಕರು ಭಾಗವಹಿಸಿದ್ದರು.
ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

