ಶ್ರದ್ಧಾ, ಭಕ್ತಿಯ ಬಕ್ರೀದ್
ಕನ್ನಡಪ್ರಭ ವಾರ್ತೆ, ಗದಗ, ಅ. 16
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಂ ಬಾಂಧವರು ಬುಧವಾರ ಶ್ರದ್ಧಾ, ಭಕ್ತಿಯಿಂದ ಬಕ್ರೀದ್ ಹಬ್ಬ ಆಚರಿಸಿದರು.
ನಗರದ ಡಂಬಳ ನಾಕಾದ ಬಳಿ ಇರುವ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸೇರಿ ಹಬ್ಬ ಆಚರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಪಾಲ್ಗೊಂಡು ಮುಸ್ಲಿಂ ಬಾಂಧವರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಸಾಧಿಕ ನರಗುಂದ, ಉಮರಫಾರೂಖ ಹುಬ್ಬಳ್ಳಿ, ಬಾಬಾಜಾನ ಬಳಗಾನೂರ, ಗುರಣ್ಣ ಬಳಗಾನೂರ, ಅಕ್ಬರ್ಸಾಬ ಬಬರ್ಚಿ, ಅಶೋಕ ಮಂದಾಲಿ, ಸರ್ಪರಾಜ ಉಮಚಗಿ, ಜಿ.ಎಂ. ದಂಡಿನ, ವಜೀರಬಾಬಾ ಶಿರಹಟ್ಟಿ, ಅಹ್ಮದಶರೀಫ ಮುಜಾವರ, ಮೌಲಾಲಿಸಾಬ್ ಹುಬ್ಬಳ್ಳಿ, ದಾಯಮ್ಮನವರ ಮುಂತಾದವರು ಪಾಲ್ಗೊಂಡಿದ್ದರು.
ಅಲ್ಲಾಹನ ಕೃಪೆಗೆ ಪಾತ್ರರಾಗಿ
ಗಜೇಂದ್ರಗಡ: ಮನದಾಳದ ಅಹಂಭಾವ ತ್ಯಾಗ ಮಾಡಿ, ಶ್ರದ್ಧೆ, ಭಕ್ತಿಯ ಪರಿಪಾಲನೆಯೊಂದಿಗೆ ಸೃಷ್ಟಿಕರ್ತನಲ್ಲಿ ಶರಣಾಗಿ ಇಸ್ಲಾಮಿನ ಮೂಲ ಭಾವೈಕ್ಯ ಸಂದೇಶ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿದಾಗ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದು ಧರ್ಮಗುರು ತಲಹಾ ಮೌಲಾನಾ ಕರೆ ನೀಡಿದರು. ಸ್ಥಳೀಯ ಈದ್ಗಾ ಮೈದಾನದಲ್ಲಿ ಈದ ಉದ್ ದುವ್ಹಾ (ಬಕ್ರೀದ್) ಆಚರಣೆ ನಿಮಿತ್ತ ಬುಧವಾರ ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮಗ್ರಂಥ ಕುರಾನ್ ಪಠಿಸಿ ಮಾತನಾಡಿದರು. ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸುವುದರ ಜತೆಗೆ ಸರ್ವ ಧರ್ಮೀಯರ ಜತೆ ಸೌಹಾರ್ದತೆಯಿಂದ ಬಾಳಬೇಕು. ಪವಿತ್ರ ಕುರಾನ್ ಗ್ರಂಥ ಉಲ್ಲೇಖದನ್ವಯ ಮನುಷ್ಯನ ಅಂತರಂಗದಲ್ಲಿನ ಕ್ರೌರ್ಯತೆಯನ್ನು ತ್ಯಾಗಮಾಡಿ ಅಹಿಂಸಾ ತತ್ವದಿಂದ ಬಾಳುವುದರಿಂದ ಮಾನವನ ಮಾನವೀಯತೆ ಜಾಗೃತಗೊಳ್ಳುತ್ತದೆ. ಮಾನವೀಯತೆಗೆ ಎಲ್ಲವನ್ನು ಸಮರ್ಪಿಸಿದ ದೈವಿಶಕ್ತಿಗೆ ಕೃತಜ್ಞತೆ ಅರ್ಪಿಸುವ ಸುವರ್ಣ ಅವಕಾಶವಿದು. ಕ್ಷಮೆ, ಸಹಬಾಳ್ವೆ, ಕೃತಜ್ಞತಾ ಸಮರ್ಪಣೆ ಹಾಗೂ ನೈತಿಕ ದಿಗ್ವಿಜಯದ ಸಂಕೇತವಾಗಿದೆ. ಈ ನಿಟ್ಟಿನಲ್ಲಿ ಸತ್ಯದ ಪರಿಪಾಲನೆ ಮತ್ತು ಶಾಂತಿಯ ಮಾರ್ಗದಲ್ಲಿ ಬಾಳಿ ಬಡವ, ಅನಾಥ, ನಿರ್ಗತಿಕರಿಗೆ ಧಾನ ಧರ್ಮದಂತಹ ಪುಣ್ಯ ಕಾರ್ಯಮಾಡುವ ಕಾಯಕಕ್ಕೆ ಮುಂದಾಗಿ ಎಂದರು. ಮಹ್ಮದ ಜಮಾ ಮೌಲಾನಾ, ಖಲೀಲ ಖಾಜಿ ಮೌಲಾನಾ, ರಫೀಕ್ ಮೌಲಾನ ಅವರು ಹಬ್ಬದ ಆಚರಣೆ ಕುರಿತು (ಧರ್ಮಗ್ರಂಥ) ಪಠಿಸಿದರು. ಬಳಿಕ ಅಂಜುಮನ್ ಇಸ್ಲಾಂ ಕಮೀಟಿ ಚೇರ್ಮನ್ ಎಂ.ಎಚ್. ಕೋಲಕಾರ ಮಾತನಾಡಿದರು. ಇದಕ್ಕೂ ಮುನ್ನ ಬೆಳಗ್ಗೆ ಟಕ್ಕೇದ ಮಸೀದಿ, ಮದೀನಾ ಮಸೀದಿ, ಒಂಟಿಯವರ ಮಸೀದಿ, ದರ್ಗಾ ಮಸೀದಿಯ ಎಲ್ಲ ಮುಸ್ಲಿಂ ಬಂಧುಗಳು ಜುಮ್ಮಾ ಮಸೀದಿಯಿಂದ ಸಾಮೂಹಿಕ ಮೆರವಣಿಗೆಯಲ್ಲಿ ಅಲ್ಲಾಹನ ನಾಮಸ್ಮರಣೆ ಮಾಡುತ್ತಾ ಪಟ್ಟಣದ ಬಸವೇಶ್ವರ ವೃತ್ತ, ದುರ್ಗಾವೃತ್ತ, ಜೋಡು ರಸ್ತೆ ಹಾಗೂ ಕಾಲಕಾಲೇಶ್ವರ ವೃತ್ತದ ಮಾರ್ಗವಾಗಿ ಕುಷ್ಟಗಿ ರಸ್ತೆಯ ಬಳಿಯ ಈದ್ಗಾ ಮೈದಾನಕ್ಕೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೆಹಬೂಬ ಅಲಿಶಾ ಪೀರಾ ಮಕಾನದಾರ, ಹಾಜಿ ಎಂ.ಕೆ. ಹೀರೇಹಾಳ, ಎ.ಆರ್. ಗೋಡೆಕಾರ, ಪಿ.ಕೆ. ಬಾಗವಾನ, ಸುಬಾನಸಾಬ ಆರಗಿದ್ದಿ, ಡಿ.ಜಿ. ಮೋಮಿನ್, ಎ.ಎಸ್. ಮಕಾನದಾರ, ಎಂ.ಬಿ. ಕಂದಗಲ್, ಇಸ್ಮಾಯಿಲಸಾಬ ನಾಲಬಂದ, ಗಫಾರಸಾಬ್ ತಾಳಿಕೋಟಿ, ಹಸನ ತಟಗಾರ, ಎಂ.ಡಿ. ಸರಕಾವಸ, ಶ್ಯಾಮಿದ ದಿಂಡವಾಡ ಸೇರಿದಂತೆ ಸುತ್ತಲಿನ ಗ್ರಾಮದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಎಲ್ಲರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

