ಗದಗ

ರೈತರ ಹತ್ತಿಕ್ಕಲು ಯತ್ನ: ಕೆಂಚಳ್ಳೇರ

Published On :

ಬ್ಯಾಡಗಿ: ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖವಾಡ ಧರಿಸಿರುವ ವ್ಯಕ್ತಿಗಳಿಂದ ಅನ್ನ ಹಾಕುವ ರೈತನ ಶಕ್ತಿ ಹಾಗೂ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನಕ್ಕೆ ನಡೆದಿದೆ ಎಂದು ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆರೋಪಿಸಿದರು.
ತಾಲೂಕಿನ ಹಿರೇಅಣಜಿಯಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ಗ್ರಾಮ ಘಟಕ ಉದ್ಘಾಟಿಸಿದ ಅವರು, ದೇಶದ ಪ್ರಗತಿಗೆ ಆಧಾರ ಸ್ತಂಭವಾಗಿರುವ ರೈತನ ಬೇಕು-ಬೇಡಗಳಿಗೆ ಸ್ಪಂದಿಸದಿರುವ ಸರ್ಕಾರಗಳು, ಆತನ ಸಂಕಷ್ಟಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಹೀಗಾಗಿ ದಿನದ 24 ಗಂಟೆ ದುಡಿದರೂ ಕೃಷಿ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.
ಇತ್ತೀಚಿನ ಅವೈಜ್ಞಾನಿಕ ಕೃಷಿ ನೀತಿಯಿಂದಾಗಿ ರೈತ ಸಾಲದ ಶೂಲಕ್ಕೆ ಸಿಗುವಂತಾಗಿದೆ. ಬದುಕಿದ್ದಾಗ ಆತನ ಕೈ ಹಿಡಿಯದಿರುವ ಸರ್ಕಾರಗಳು ಸತ್ತ ಮೇಲೆ ಪರಿಹಾರ ಘೋಷಿಸುತ್ತವೆ. ಇದರಿಂದ ರೈತ ಸ್ವಾವಲಂಬಿಯಾಗಲು ಸಾಧ್ಯವೇ? ರೈತನನ್ನು ದೇಶವೇ ಜೀತ ದುಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಎಲ್ಲವನ್ನೂ ಹೋರಾಟ ಮಾಡಿಯೇ ಪಡೆಯಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ರೈತನಿದ್ದಾನೆ. ಹೀಗಾಗಿ, ಸಂಘಟನೆ ಅನಿವಾರ್ಯವಾಗಿದೆ. ರೈತ ಸಂಘಟನೆಗಳನ್ನು ಹತ್ತಿಕ್ಕುವ ಮೂಲಕ ಆತನ ಅಸ್ತಿತ್ವವನ್ನೇ ಅಡಗಿಸುವ ಹುನ್ನಾರ ಜನಪ್ರತಿನಿಧಿಗಳಿಂದ ನಡೆದಿದೆ ಎಂದರು.
ನಾಮಫಲಕ ಉದ್ಘಾಟಿಸಿದ ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ದೇಶದಲ್ಲಿ ರೈತ ಸಂಘಟನೆಗಳೇ ಇಲ್ಲದಿದ್ದರೆ ಆತನ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಅವಶ್ಯವಿದ್ದಾಗ ನಮ್ಮನ್ನು ಬಳ ಸಿಕೊಳ್ಳವ ಸರ್ಕಾರಗಳು ಬಳಿಕ ರೈತನ ಸಮಾಧಿ ಮೇಲೆ ಅಧಿಕಾರ ನಡೆಸುತ್ತಿವೆ ಎಂದರು.
ಇಲ್ಲಿಯವರೆಗೆ ಎಲ್ಲವನ್ನೂ ಸಹಿಸಿಕೊಂಡಿದ್ದಾಗಿದೆ. ಇನ್ನು ಮುಂದೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸಂಘಟಿತರಾಗದಿದ್ದಲ್ಲಿ ಕಷ್ಟದ ದಿನ ಎಣಿಸಬೇಕಾಗುತ್ತದೆ. ಇದರಲ್ಲಿ ರಾಜಕೀಯ ಬೇಡ. ರೈತ ಒಂದೇ ಸತ್ಯ ಎಂಬುದನ್ನು ದೇಶಕ್ಕೆ ತೋರಿಸುವ ಅಗತ್ಯವಿದೆ ಎಂದರು.
ಅರವಿಂದ ಮುಳತಳ್ಳಿ ಅಧ್ಯಕ್ಷತೆ ವಹಿಸಿದ್ದರು. ವೀರನಗೌಡ ಲಿಂಗನಗೌಡ್ರ ಜ್ಯೋತಿ ಬೆಳಗಿಸಿದರು. ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ, ಎಸ್.ವಿ. ಚಪ್ಪರದಳ್ಳಿ, ಚಿಕ್ಕಪ್ಪ  ಛತ್ರದ, ಕೆ.ವಿ. ದೊಡ್ಡಗೌಡ್ರ, ಎಂ.ವಿ. ಚಿಕ್ಕಳ್ಳಿ, ಬಿ.ಎಸ್. ಪಾಟೀಲ ಇದ್ದರು. ಗದಿಗೆಪ್ಪ ಗೂಳಪ್ಪಗೌಡ್ರ ಸ್ವಾಗತಿಸಿದರು. ಸಂತೋಷ್ ಹುರಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.