ಗದಗ

ಅಕ್ರಮ ಗಾಳಿಯಂತ್ರ: ಜಿಲ್ಲಾಡಳಿತ ಮೌನ

Published On :

ಕನ್ನಡಪ್ರಭ ವಾರ್ತೆ, ಗದಗ, ಅ. 17
ಜಿಲ್ಲೆಯಲ್ಲಿ ಕಂಪನಿಗಳು ಗಾಳಿಯಂತ್ರಗಳನ್ನು ಸರ್ಕಾರದ ನಿಯಮ ಗಾಳಿಗೆ ತೂರಿ ಸ್ಥಾಪನೆ ಮಾಡಿದ್ದು, ಈಗಾಗಲೇ ತನಿಖೆಯಿಂದ ಬಹಿರಂಗಗೊಂಡಿದೆ. ಆದರೆ, ಈ ಅಕ್ರಮವೆಸಗಿದವರಿಗೆ ನೋಟಿಸ್ ನೀಡಿದ ಜಿಲ್ಲಾಡಳಿತ ಮುಂದಿನ ಯಾವುದೇ ಕ್ರಮಕ್ಕೆ ಮುಂದಾಗದೇ ತೆಪ್ಪಗೆ ಕುಳಿತಿದ್ದು, ಸದ್ಯದ ಜಿಲ್ಲಾಧಿಕಾರಿಗಳ ನಡೆ ಹಲವು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ ಎನಾರ್ಕಾನ್, ಪಯನಿಯರ್, ಎನ್‌ಇಪಿಸಿ ಲಿಮಿಟೆಡ್, ಗ್ಲೋಬಲ್ ವಿಂಡ್ ಲಿಮಿಟೆಡ್, ಟಾಟಾ ಪವರ್ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ 8 ಕಂಪನಿಗಳ 158 ಗಾಳಿಯಂತ್ರಗಳಿಂದ ಸರ್ಕಾರಕ್ಕೆ ಬರಬೇಕಾದ ಲಕ್ಷಾಂತರ ತೆರಿಗೆ ಹಣ ಟೋಪಿ ಹಾಕಿ, ತಮ್ಮ ಗಾಳಿಯಂತ್ರಗಳನ್ನು ಸ್ಥಾಪಿಸಿದ್ದು, ಈ ಕುರಿತು ಹಿಂದಿನ ಜಿಲ್ಲಾಧಿಕಾರಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಈ ತನಿಖೆಯಿಂದ ಹೊರ ಬಂದ ಸತ್ಯವನ್ನಾಧರಿಸಿ ಜಿಲ್ಲಾಡಳಿತ ಗಾಳಿಯಂತ್ರ ಕಂಪನಿಗಳಿಗೆ ನೋಟಿಸ್ ನೀಡಿ ಕೈ ತೊಳೆದುಕೊಂಡಿದ್ದಷ್ಟೇ ದೊಡ್ಡ ಸಾಧನೆಯಾಗಿದೆ.
ನೋಟಿಸ್‌ಗೆ ಕ್ಯಾರೆ ಎನ್ನದ ಕಂಪನಿಗಳು
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಸ್.ಟಿ. ಅಂಜನ್‌ಕುಮಾರ್ ಸರ್ಕಾರದ ನಿಮಯಗಳನ್ನು ಗಾಳಿಗೆ ತೂರಿರುವ ಕಂಪನಿಗಳಿಗೆ ಹಾಗೂ ಜಮೀನು ಮಾಲೀಕರಿಗೆ ಕಳೆದ ಜುಲೈ 16 ರಂದು 7 ದಿನದೊಳಗೆ ಇದಕ್ಕೆ ಸಮರ್ಪಕ ಉತ್ತರ ನೀಡುವಂತೆ ನೋಟಿಸ್ ನೀಡಿದ್ದರು. ಅಲ್ಲಿಂದ ಇಲ್ಲಿವರೆಗೆ ಕಂಪನಿಗಳು ಉತ್ತರಿಸುವ ಗೋಜಿಗೆ ಹೋಗಿಲ್ಲ. ನೋಟಿಸ್ ಜಾರಿ ಮಾಡಿ ತಿಂಗಳುಗಳು ಕಳೆದರೂ ನೋಟಿಸ್‌ಗೆ ಕಂಪನಿಗಳು ಕ್ಯಾರೆ ಎಂದಿಲ್ಲ.   
ಅನುಮಾನಕ್ಕೆ ಎಡೆ: ಜಿಲ್ಲೆಯ ಗದಗ, ಶಿರಹಟ್ಟಿ, ಮುಂಡರಗಿ, ರೋಣ ಹಾಗೂ ನರಗುಂದ ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 393 ಪವನ ವಿದ್ಯುತ್ ಉತ್ಪಾದನಾ ಯಂತ್ರಗಳಿವೆ. ಇವುಗಳಲ್ಲಿ 158 ಅಕ್ರಮವಾಗಿ ಹಾಕಲಾಗಿದೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಪವನ ವಿದ್ಯುತ್ ಉತ್ಪಾದನಾ ಯಂತ್ರಗಳು ರೈತರ ಕೃಷಿ ಯೋಗ್ಯ ಭೂಮಿಯಲ್ಲಿ ಸ್ಥಾಪಿಸಿ, ಸರ್ಕಾರಕ್ಕೆ ಬರಬೇಕಾದ ಹಣವನ್ನು ವಂಚಿಸಿದ್ದಾರೆ. ಇಂತಹದೊಂದು ದೊಡ್ಡ ಅಕ್ರಮ ಜಿಲ್ಲಾಡಳಿತದ ಗಮನಕ್ಕೆ ಬಂದು ಹಿಂದಿನ ಡಿಸಿ ಎಸ್.ಟಿ. ಅಂಜನಕುಮಾರ್ ನೋಟಿಸ್ ನೀಡಿದ್ದರು. ಆದರೆ, ಸದ್ಯದ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ್ ಮಾತ್ರ ಮೃಧು ಧೋರಣೆ ತಳೆದಿದ್ದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಗಾಳಿ ವಿದ್ಯುತ್ ಉತ್ಪಾದನಾ ಯಂತ್ರಗಳು ಅಕ್ರಮ ಎನ್ನುವುದು ಹಿಂದಿನ ಜಿಲ್ಲಾಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡು ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಯಾವ ಕಂಪನಿಗಳೂ ಉತ್ತರಿಸಿಲ್ಲ, ಅದರೆ ಜಿಲ್ಲಾಡಳಿತ ಮಾತ್ರ ಇನ್ನೂ ಕ್ರಮಕ್ಕೆ ಮುಂದಾಗದೇ ಇರುವುದು ಹಲವು ಸಂಶಯಕ್ಕೆ ಕಾರಣವಾಗಿದೆ. ಇನ್ನಾದರೂ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ರೈತ ಸಂಘದ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುವುದು.
- ಕೆ.ಜಿ. ಶಾಂತಸ್ವಾಮಿಮಠ
ರೈತ ಸಂಘದ ರಾಜ್ಯ ಉಪಾಧ್ಯಕ್ಷ

ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.