ಗದಗ

ಶಿರಹಟ್ಟಿಯಲ್ಲಿ ಶೀಗೆ ಹುಣ್ಣಿಮೆ ಆಚರಣೆ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ. 18
ಒಂದು ಕಡೆ ಒಣಗುತ್ತಿರುವ ಬೆಳೆ, ಮತ್ತೊಂದು ಕಡೆ ತಮ್ಮನ್ನು ಸಾಕಿ ಸಲುಹುವ ಭೂತಾಯಿಯನ್ನು ತಾತ್ಸಾರ ಮಾಡುವ ಹಾಗಿಲ್ಲ. ಇಂಥಹ ಸಂದಿಗ್ಧ ಸ್ಥಿತಿಯಲ್ಲಿ ನೋವನ್ನು ನುಂಗಿ ಮನಸ್ಸಿಲ್ಲದ ಮನಸ್ಸಿನಿಂದ ಶುಕ್ರವಾರ ರೈತರು ಶೀಗೆ ಹುಣ್ಣಿಮೆ ಆಚರಿಸಿದರು.
ವರ್ಷದುದ್ದಕ್ಕೂ ಹುಣ್ಣಿಮೆ, ಅಮಾವಾಸ್ಯೆಗಳು ಬಂದರೂ ರೈತರ ಪಾಲಿಗೆ ಶೀಗೆ ಹುಣ್ಣಿಮೆ ಮತ್ತು ಯುಗಾದಿ ಸಂಭ್ರಮಾಚರಣೆಯ ಹಬ್ಬಗಳಾಗಿವೆ. ಈ ಹಬ್ಬದಲ್ಲಿ ಹಸಿರು ತುಂಬಿದ ಭೂತಾಯಿಗೆ ನೈವೇದ್ಯ ಸಲ್ಲಿಸಿ ಉಡಿ ತುಂಬುತ್ತಾರೆ. ವಿಶೇಷ ಅಡುಗೆಗಳನ್ನು ಮಾಡಿ ಹೊಲದಲ್ಲಿ ಪಂಚಪಾಂಡವರನ್ನಿಟ್ಟು ಪೂಜೆ ಸಲ್ಲಿಸಿ ನಂತರ ಹೊಲದ ತುಂಬೆಲ್ಲ ಹುಲ್ಲಲಿಗೋ ಸುರಂಬಳಿಗೋ ಎಂದು ಚರಗಾ ಚೆಲ್ಲುವುದು ವಿಶಿಷ್ಠವಾಗಿರುತ್ತದೆ. ರೈತ ಬಾಂಧವರು ಭಕ್ತಿಯಿಂದ ಭೂತಾಯಿಗೆ ನಮಸ್ಕರಿಸಿ ತಮ್ಮ ಹೊಲ ಚೆನ್ನಾಗಿ ಬೆಳೆದು, ಬಾಳು ಬಂಗಾರವಾಗಲೆಂದು ಬೇಡಿಕೊಳ್ಳುವುದು ಸಾಮಾನ್ಯ.
ರೈತರು ವರ್ಷದುದ್ದಕ್ಕೂ ಗಡಿಬಿಡಿಯ ಜೀವನದಲ್ಲಿ ಕಾಲ ಕಳೆಯುವುದರಿಂದ ಶೀಗೆ ಹುಣ್ಣಿಮೆಯ ದಿನ ಕುಟುಂಬ ಸಮೇತರಾಗಿ ಹೊಲಕ್ಕೆ ತೆರಳಿ ವಿಶೇಷವಾಗಿ ಸಿದ್ದಪಡಿಸಿದ ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಖರ್ಚಿಕಾಯಿ, ಉಂಡಗಡಬು, ಪುಂಡಿಪಲ್ಯೆ, ಚವಳಿಕಾಯಿ ಪಲ್ಯೆ, ಕುಂಬಳಕಾಯಿ ಪಲ್ಯೆ, ಕುಟ್ಟಿದ ಮೆಣಸಿನಕಾಯಿ, ಕಟಕ್ ರೊಟ್ಟಿ ಹೀಗೆ ವಿವಿಧ ಬಗೆಯ ರುಚಿಕರ ಅಡುಗೆಯನ್ನು ಹೊಟ್ಟೆ ತುಂಬ ಉಂಡು ಹೊಲದಲ್ಲಿಯೇ ವಿರಮಿಸುತ್ತಾರೆ.
ನಿರಾಸೆಯಿಂದಲೇ ಪೂಜೆ: ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಸರಿಯಾದ ಸಮಯಕ್ಕೆ ಆಗದೇ ಇರುವುದರಿಂದಾಗಿ ಯಾವುದೇ ಫಸಲು ಬರದೇ ರೈತರು ಕಂಗಾಲಾಗಿದ್ದಾರೆ. ಹಿಂಗಾರಿ ಬಿಳಿ ಜೋಳ, ಗೋದಿ, ಕಡಲೆ ತೇವಾಂಶದ ಕೊರತೆಯಿಂದಾಗಿ ಒಣಗುತ್ತಿವೆ. ರೈತ ಚಿಂತೆಗೀಡಾಗಿದ್ದಾನೆ. ಇಂಥಹ ಸಂದರ್ಭದಲ್ಲಿಯೇ ಸಾಂಪ್ರದಾಯಿಕ ಹಬ್ಬಗಳನ್ನು ಸಾಲ ಮಾಡಿಯಾದರೂ ಆಚರಿಸುವು ಅನಿವಾರ್ಯತೆ ಎದುರಾಗಿದೆ.
ಗ್ರಾಮೀಣ ಪರಂಪರೆಯಲ್ಲಿ ಹಬ್ಬ ಹರಿದಿನಗಳು ಇನ್ನೂ ಜೀವಂತವಾಗಿದ್ದು, ರೈತರು ತಮ್ಮ ಸಾಂಪ್ರದಾಯಿಕ ಹಬ್ಬಗಳನ್ನು ಯಾವುದೇ ಪರಿಸ್ಥಿತಿ ಇದ್ದರೂ ಆಚರಿಸುತ್ತಾ ಬಂದಿದ್ದಾರೆ. ತಾಲೂಕಿನಾದ್ಯಂತ ಚಕ್ಕಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಕುಟುಂಬ ಸದಸ್ಯರು, ನೆಂಟರು, ಸ್ನೇಹಿತರು ಹಾಗೂ ಬಂಧುಮಿತ್ರರೊಂದಿಗೆ ಹೊಲಗಳಿಗೆ ತೆರಳಿ ಚರಗ ಚೆಲ್ಲಿ ಬನ್ನಿಗಿಡಕ್ಕೆ ಪೂಜೆ ಸಲ್ಲಿಸುತ್ತಿರುವುದು ಕಂಡುಬಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.