ಗದಗ

ಕುಡಿವ ನೀರಿಗೆ ರಾಮಗಿರಿ ಗ್ರಾಮಸ್ಥರ ಪರದಾಟ

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಅ. 18
ಕಳೆದ 27 ದಿನಗಳಿಂದ ಗ್ರಾಮದ ಜನತೆ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿದ್ದು, ದನಕರುಗಳಿಗೆ ಕುಡಿಯಲು ನೀರಿಲ್ಲದ್ದರಿಂದ ಅವುಗಳನ್ನು ಮಾರುವ ಹಂತಕ್ಕೆ ಬಂದಿದ್ದೇವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲಿ, ಪಿಡಿಒ ಆಗಲಿ ಗಮನ ನೀಡುತ್ತಿಲ್ಲವೆಂದು ರಾಮಗಿರಿ ಗ್ರಾಮದ ಜನತೆ ಆರೋಪಿಸಿದರು.
ಈಚೆಗೆ ರಾಮಗಿರಿ ಗ್ರಾಮಕ್ಕೆ ಭೇಟಿ ನೀಡಿದ ಸುದ್ದಿಗಾರರಿಗೆ ಮಾಹಿತಿ ನೀಡಿದ ಗ್ರಾಮಸ್ಥರು, ಗ್ರಾಮದ ವಾರ್ಡ್ ನಂ. 2ರಲ್ಲಿ 1 ತಿಂಗಳಿಂದ ಕುಡಿಯುವ ನೀರಿಗಾಗಿ ಜನತೆ ಪರಾದಾಡುತ್ತಿದ್ದಾರೆ, ಗ್ರಾಮದಲ್ಲಿ ಕುಡಿವ ನೀರಿಗಾಗಿ 7 ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ.
ಇವುಗಳಲ್ಲಿ ಒಂದು ಮಾತ್ರ ನಿಷ್ಕ್ರಿಯಗೊಂಡಿದ್ದು, ಉಳಿದವುಗಳು ಉತ್ತಮ ಸ್ಥಿತಿಯಲ್ಲಿದ್ದರೂ ಜನತೆ ಕುಡಿಯುವ ನೀರಿಗಾಗಿ ಪರದಾಡುತ್ತಿರುವುದು ದುರಂತವಾಗಿದೆ. ಇದಕ್ಕೆಲ್ಲ ನಮ್ಮ ಗ್ರಾಮದ ಪಿಡಿಒ ನೇರ ಹೊಣೆಗಾರರಾಗಿದ್ದಾರೆ. ಗ್ರಾಪಂಗೆ ತಿಂಗಳಿಗೊಂದು ಬಾರಿ, ಎರಡು ಬಾರಿ ಬಂದು ಹೋಗುತ್ತಾರೆ. ಅವರನ್ನು ಸಂಪರ್ಕಿಸಲು ಯತ್ನಿಸಿದರೆ ಅವರ ಪೋನ್ ಯಾವಾಗಲೂ ಬಂದ್ ಆಗಿರುತ್ತದೆ. ಗ್ರಾಪಂನಲ್ಲಿರಬೇಕಾದ ಕಾಗದ ಪತ್ರಗಳು ಪಿಡಿಒ ಅವರ ಮನೆಯಲ್ಲಿರುತ್ತವೆ. ಅಧ್ಯಕ್ಷರು ಹಾಗೂ ಸದಸ್ಯರು ಪಿಡಿಒ ಅವರನ್ನು ಭೇಟಿಯಾಗಲು ಹಾಗೂ ಅವಶ್ಯ ಕಾಗದಪತ್ರಗಳಿಗೆ ಸಹಿ ಮಾಡಿಸಲು ಅವರ ಮನೆಗೆ ಹೋಗಬೇಕಾದ ಸ್ಥಿತಿ ಉಂಟಾಗಿದೆ ಎಂದು ಗ್ರಾಪಂ ಸದಸ್ಯ ಶೇಖಣ್ಣ ಕಾಳೆ ಆರೋಪಿಸಿದರು.
ಗ್ರಾಮದ ಅಭಿವೃದ್ಧಿ ಮಾಡಬೇಕಾದ ಅಧಿಕಾರಿಗಳು 3-4 ತಿಂಗಳಿಂದ ಗ್ರಾಮ ಸಭೆ ಕರೆದಿಲ್ಲ. ಕಾಟಾಚಾರಕ್ಕೆ ಸಭೆ ಕರೆದು ಕೋರಂ ಭರ್ತಿಯಾಗದ ಕಾರಣ ಸಭೆ ಮುಂದೂಡಲಾಗಿದೆ ಎಂಬ ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿರುವ ಅಧಿಕಾರಿಗಳು ಉದ್ದಟತನದಿಂದ ವರ್ತಿಸುತ್ತಿರುವುದು ಸರಿಯಲ್ಲ. ಗ್ರಾಮಕ್ಕೆ ಕುಡಿಯುವ ನೀರು ಸಂಗ್ರಹಿಸುವ ಟ್ಯಾಂಕ್‌ನಲ್ಲಿ ಕಸಕಡ್ಡಿ ತುಂಬಿ ಗಲೀಜು ಉಂಟಾಗಿ, ನೀರಿನಲ್ಲಿ ಹುಳುಗಳು ಬೀಳುವ ಹಂತಕ್ಕೆ ತಲುಪಿದ್ದರೂ ಆ ಟ್ಯಾಂಕ್ ಸ್ವಚ್ಛಗೊಳಿಸುವ ಗೋಜಿಗೆ ಅಧಿಕಾರಿಗಳು ಹೋಗುತ್ತಿಲ್ಲ ಎಂದು ಗ್ರಾಮಸ್ಥರಾದ ದೇವಣ್ಣ ಬೆಟಗೇರಿ, ಬಸವರಾಜ ರಟಗೇರಿ, ಸಿದ್ದಪ್ಪ ಬೆಟಗೇರಿ, ನಿಂಗಪ್ಪ ಗಾಳೆಪ್ಪನವರ, ರಾಜೇಸಾಬ ತೆಗ್ಗಿನಮನಿ, ವಿಶ್ವನಾಥ ಮಲ್ಲೂರ, ಬಸವರಾಜ ಗೊಜಗೊಜಿ, ಯಲ್ಲಪ್ಪ ಬೆಟಗೇರಿ, ವೀರೇಂದ್ರ ಬೆಟಗೇರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಕೆಲ ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯುಂಟಾಗಿದ್ದು, ನೀರನ್ನು ಮೇಲೆತ್ತುವ ಮೋಟಾರ್ ಸುಟ್ಟು ಹೋಗಿದೆ. ಅದನ್ನು ರಿಪೇರಿ ಮಾಡಿಸಿಕೊಂಡು ಬರಲಾಗಿದೆ, ಗ್ರಾಮಸ್ಥರಿಗೆ ಸರಿಯಾಗಿ ನೀರು ಸರಬರಾಜು ಮಾಡಲಾಗುವುದು. ಅಲ್ಲದೆ ಪಿಡಿಒ ಅವರಿಗೆ ಶೀಘ್ರದಲ್ಲಿ ಸಭೆ ಕರೆಯಲು ಸೂಚನೆ ನೀಡಲಾಗಿದೆ.
 ನಿಂಗನಗೌಡ ಪಾಟೀಲ ರಾಮಗಿರಿ ಗ್ರಾಪಂ ಅಧ್ಯಕ್ಷ
ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವಲ್ಲಿ ಸ್ವಲ್ಪ ವಿಳಂಬವಾಗಿತ್ತು. ಅದಕ್ಕೆ ಕಾರಣ ಬೋರ್‌ವೆಲ್ ಮೋಟಾರ್ ದುರಸ್ತಿಗೆ ಬಂದಿತ್ತು. ಅದನ್ನು ಕೂಡಲೇ ಸರಿಪಡಿಸಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.