ಗದಗ

ಆಯುರ್ವೇದ ಪೋಷಿಸುವ ಕಾರ್ಯವಾಗಲಿ

Published On :

ಕನ್ನಡಪ್ರಭ ವಾರ್ತೆ, ಗದಗ, ಅ. 19
ಭಾರತೀಯ ವೈದ್ಯಕೀಯ ಹಾಗೂ ಆಯುರ್ವೇದ ಪದ್ಧತಿ ಪೋಷಿಸುವ ಕಾರ್ಯವನ್ನು ಇಂದಿನ ಯುವ ವೈದ್ಯರು ಕೈಗೊಳ್ಳಬೇಕಾಗಿದೆ ಎಂದು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಸಚಿವ ಡಾ.ಡಿ. ಪ್ರೇಮಕುಮಾರ ಹೇಳಿದರು.
ಅವರು ಶನಿವಾರ ಸ್ಥಳೀಯ ಜ. ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಡಿ.ಜಿ.ಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆದ ದೀಕ್ಷಾಂತ ಸಮಾರೋಹ ಸಮಾರಂಭ, ಕ್ರೀಡಾ, ಸಾಂಸ್ಕೃತಿಕ ಸಪ್ತಾಹ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ  ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತಿವೆ. ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದವರು ಮಾತ್ರ ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು. ವೈದ್ಯಕೀಯ ಕ್ಷೇತ್ರದಲ್ಲಿ ಇಂದು ವೈದ್ಯರಿಗೆ ಸಾಕಷ್ಟು ಅವಕಾಶಗಳಿವೆ. ಅಷ್ಟೇ ಪ್ರಮಾಣದಲ್ಲಿ ಸವಾಲುಗಳು ಸೃಷ್ಟಿಯಾಗಿವೆ. ಮನುಷ್ಯನ ಜೀವನ ಶೈಲಿಗೆ ಸಂಬಂಧಿಸಿದಂತೆ ಭಯಾನಕ ಕಾಯಿಲೆಗಳು ಮನುಷ್ಯನನ್ನು ಬಾಧಿಸುತ್ತಿವೆ. ಹಾಗಾಗಿ ಆಯುರ್ವೇದ ಪದ್ಧತಿಯಿಂದ ಅಂತಹ ಕಾಯಿಲೆಗಳನ್ನು ತಡೆಗಟ್ಟಲು ಯುವ ವೈದ್ಯರು ಮುಂದಾಗಬೇಕು. ವಿಶ್ವ ಆರೋಗ್ಯ ಸಂಸ್ಥೆ ಆಯುರ್ವೇದ ಪದ್ಧತಿಯನ್ನು ಮಾನ್ಯ ಮಾಡಿದೆ. ವಿದೇಶದಲ್ಲಿಯೂ ಆಯುರ್ವೇದ ಪದ್ಧತಿಗೆ ಬಹುಬೇಡಿಕೆಯಿದೆ.
ವೈದ್ಯ ಸ್ಥಾನ ಮಹತ್ವವಾದದ್ದು, ಸಂಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚಲು ಸಿಕ್ಕ ಸುವರ್ಣ ಅವಕಾಶವೆಂದು ಭಾವಿಸಿ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕು. ಹಣಕ್ಕೆ ಪ್ರಾಮುಖ್ಯ ನೀಡದೇ ಜವಾಬ್ದಾರಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಾಮಾಣಿಕರಾಗಿ ಕರ್ತವ್ಯ ನಿಭಾಯಿಸಬೇಕು. ಮತ್ತೊಬ್ಬರ ನೋವು ಪರಿಹರಿಸಿದಾಗ ಸಿಗುವ ಸಂತೃಪ್ತಿಯು ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ಹಾಗಾಗಿ ವೃತ್ತಿ ಬದುಕಿನಲ್ಲಿ ಉತ್ತಮ ವೈದ್ಯರಾಗುವಂತೆ ಯುವ ವೈದ್ಯರಿಗೆ ಸೂಚಿಸಿದರು.
ಲಕ್ಷ ಜನರಿಗೆ 250 ವೈದ್ಯರು: ಸದ್ಯ ದೇಶದ ಜನಸಂಖ್ಯೆಗನುಗುಣವಾಗಿ ಲಕ್ಷ ಜನರಿಗೆ 250 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2017ರ ವೇಳೆಗೆ ಲಕ್ಷ ಜನರಿಗೆ 315 ವೈದ್ಯರು ಹೆಚ್ಚಳವಾಗುವ ಸಾಧ್ಯತೆಯಿದೆ. ವಿಶ್ವ ಆರೋಗ್ಯ ಸಂಸ್ಥೆ 1 ಲಕ್ಷ ಜನರಿಗೆ 450 ವೈದ್ಯಕೀಯ ಸಿಬ್ಬಂದಿ ಬೇಕು ಎಂದು ಹೇಳುತ್ತದೆ. ಹಾಗಾಗಿ ಪ್ರಸ್ತುತ ಸಂದರ್ಭದಲ್ಲಿ ಯುವ ವೈದ್ಯರಿಗೆ ಸಾಕಷ್ಟು ಅವಕಾಶಗಳಿವೆ. ದೇಶದಲ್ಲಿ ಒಟ್ಟು 250 ಆಯುರ್ವೇದಿಕ್ ಮಹಾವಿದ್ಯಾಲಯಗಳಿವೆ. ಈ ಪೈಕಿ ಶೇ. 25ರಷ್ಟು ಆಯುರ್ವೇದಿಕ್ ಕಾಲೇಜುಗಳು ಕರ್ನಾಟಕದಲ್ಲಿರುವುದು ವಿಶೇಷ ಎಂದು ಹೇಳಿದರು.
ರು. 8 ಸಾವಿರ ಕೋಟಿ ವ್ಯವಹಾರ: ಪ್ರಪಂಚದಲ್ಲಿ ರು. 8 ಸಾವಿರ ಕೋಟಿಯಷ್ಟು ವಾರ್ಷಿಕ ವ್ಯವಹಾರ ಆಯುರ್ವೇದ ಕ್ಷೇತ್ರದಲ್ಲಿ ನಡೆಯುತ್ತದೆ. ಅದರಲ್ಲಿ ಭಾರತದಿಂದ ರು. 6 ಸಾವಿರ ಕೋಟಿಯಷ್ಟು ಆಯುರ್ವೇದಿಕ್ ಔಷಧ ಉತ್ಪನ್ನಗಳ ವಹಿವಾಟು ನಡೆಯುತ್ತಿರುವುದು ವಿಶೇಷ. ಈಗಾಗಲೇ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯಲ್ಲಿ ಸಂಶೋಧನೆಗೆ ಒತ್ತು ನೀಡುವ ದೃಷ್ಟಿಯಿಂದ ಸಂಶೋಧನಾ ವಿಭಾಗವನ್ನು ಪ್ರಾರಂಭಿಸಲಾಗಿದೆ. ಫೆಲೋಷಿಪ್ ಹಾಗೂ ಪಿಎಚ್‌ಡಿ ಪದವಿಯನ್ನೂ ಪ್ರಾರಂಭಿಸಲಾಗಿದೆ. ಇದೀಗ ಆಯುಷ್ಯ ವೈದ್ಯರಿಗೆ ತರಬೇತಿ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಜ. ಅಭಿನವ ಶಿವಾನಂದ ಶ್ರೀ ಆಶೀರ್ವಚನ ನೀಡಿದರು. ಇಂಚಲದ ಎಸ್.ಎಸ್.ಆರ್. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ವಿನಯ ಮೋಹನ ವೈದ್ಯ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ 60 ಪದವಿ ಹಾಗೂ 19 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವೈದ್ಯ ಪ್ರಮಾಣ ಪತ್ರ ವಿತರಿಸಲಾಯಿತು. ಜ. ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಎಸ್.ವಿ. ಸಂಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ವಿವಿಧ ವಿಭಾಗ ಮುಖ್ಯಸ್ಥರು, ಸಿಬ್ಬಂದಿ ಇದ್ದರು. ಡಿ.ಜಿ.ಎಂ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಸ್ವಾಗತಿಸಿದರು. ಸುವರ್ಣ ನಿಡಗುಂದಿ ನಿರೂಪಿಸಿದರು. ಅಶೋಕ ಪಾಟೀಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.