ಸುದ್ದಿ ಸಂಕ್ಷೇಪ
ಇಂದು ಶಿರಹಟ್ಟಿ ತಾಲೂಕು ಕುರುಬರ ಸಂಘದ ಸಭೆ
ಶಿರಹಟ್ಟಿ: ತಾಲೂಕಿನ ಹುಲ್ಲೂರ ಗ್ರಾಮದ ಅಮೋಘಿ ಶಿದ್ದೇಶ್ವರ ಮಠದಲ್ಲಿ ಅ. 20ರ ಬೆಳಗ್ಗೆ 11 ಗಂಟೆಗೆ ಮಠದ ಜೀರ್ಣೋದ್ಧಾರ ಕುರಿತು ಚರ್ಚಿಸಲು ತಾಲೂಕು ಕುರುಬ ಸಮಾಜ ಬಾಂಧವರ ಸಭೆ ಕರೆಯಲಾಗಿದೆ. ತಾಲೂಕಿನ ಸಮಸ್ತ ಹಾಲುಮತ ಕುರುಬ ಸಮಾಜ ಬಾಂಧವರು ಹಾಗೂ ಹಿರಿಯರು ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ರಾಮಣ್ಣ ಡಂಬಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗದಗ: ನಾಳೆ ಪೊಲೀಸ್ ಹುತಾತ್ಮರ ದಿನಾಚರಣೆ
ಗದಗ: ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಅ. 21ರಂದು ಬೆಳಗ್ಗೆ 7.30 ಗಂಟೆಗೆ ಗದಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಬೆಟಗೇರಿ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅತಿಥಿಗಳಾಗಿ ಆಗಮಿಸಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ವೀರಗಂಗಾಧರ ಶ್ರೀಗಳ ಪುಣ್ಯಸ್ಮರಣೆ
ಗದಗ: ನಗರದ ಜ. ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಅ. 20ರ ಬೆಳಗ್ಗೆ 10.30 ಗಂಟೆಗೆ ರಂಭಾಪುರಿ ಪೀಠದ ಲಿಂ. ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರ 31ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಜರುಗಲಿದೆ. ಸೂಡಿಯ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಜ. ಪಂಚಾಚಾರ್ಯ ಮಾಂಗಲ್ಯ ಮಂದಿರದ ಕಾರ್ಯಾಧ್ಯಕ್ಷ ಬಸಣ್ಣ ಮಲ್ಲಾಡದ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜ. ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜಣ್ಣ ಬೇಲೇರಿ, ಚಂದ್ರು ಬಾಳೆಹಳ್ಳಿಮಠ, ವಿ.ಕೆ.ಗುರುಮಠ, ರುದ್ರ ಬಳಗ ಅಧ್ಯಕ್ಷೆ ಅನ್ನಪೂರ್ಣಾ ಮಾಳೆಕೊಪ್ಪಮಠ ಭಾಗವಹಿಸುವರು.
ಸಾರಿಗೆ ಕಚೇರಿ ಸ್ಥಳಾಂತರ
ಗದಗ: ಗದಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯು ಲಕ್ಷ್ಮೇಶ್ವರ ಮಾರ್ಗದ ಕಳಸಾಪುರ ಗ್ರಾಮದ ಹುಡ್ಕೋ ಬಡಾವಣೆಯಲ್ಲಿನ ನೂತನ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲಿದೆ. ಜನರು ಕಚೇರಿಗೆ ಸಂಬಂಧಿತ ಕಾರ್ಯಗಳಿಗೆ ಅ. 21ರಂದು ಹೊಸ ಕಚೇರಿಗೆ ಬರಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಗದಗ: ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತಿಗೆ ಅಧ್ಯಕ್ಷರನ್ನಾಗಿ ಡಾ. ಸಿದ್ದಣ್ಣ ಜಕಬಾಳ ಅವರನ್ನು ನೇಮಿಸಲಾಗಿದೆ. ಗೌರವಾಧ್ಯಕ್ಷ ಚನ್ನಪ್ಪ ಅಂಗಡಿ, ಕಾರ್ಯದರ್ಶಿ ಡಾ. ಪ್ರಭು ಗಂಜಿಹಾಳ, ಕೋಶಾಧ್ಯಕ್ಷ ಡಾ. ಎಂ.ಎನ್. ಅಂಬಲಿಯವರ, ಸದಸ್ಯರಾಗಿ ಚಂದ್ರಶೇಖರ ವಸ್ತ್ರದ, ಮಂಜುನಾಥ ಬಮ್ಮನಕಟ್ಟಿ, ಅಶೋಕ ಬಣ್ಣದ, ಡಾ. ಬಸಯ್ಯ ಗದಗಿನಮಠ, ಶಕುಂತಲಾ ಸಿಂಧೂರ ಅವರನ್ನು ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡರ ನೇಮಿಸಿದ್ದಾರೆಂದು ಕಾರ್ಯದರ್ಶಿ ಡಾ. ಪ್ರಭು ಗಂಜಿಹಾಳ ತಿಳಿಸಿದ್ದಾರೆ.
ನಾಳೆ ಶ್ವಾಸಕೋಶದ ಉಚಿತ ಪರೀಕ್ಷಾ ಶಿಬಿರ
ಗದಗ: ನಗರದ ವಿವೇಕಾನಂದ ರಸ್ತೆಯ ವಾತ್ಸಲ್ಯ ಆಸ್ಪತ್ರೆಯಲ್ಲಿ ಅ. 21ರ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರ ವರೆಗೆ ಶ್ವಾಸಕೋಶ ಉಚಿತ ಪರೀಕ್ಷಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಅಸ್ತಮಾ, ಶ್ವಾಸಕೋಶದ ಸಮಸ್ಯೆಯುಳ್ಳವರು ತಪಾಸಿಸಿಕೊಳ್ಳಬಹುದು. ಮಾಹಿತಿ, ನೋಂದಣಿಗಾಗಿ ವಾತ್ಸಲ್ಯ ಆಸ್ಪತ್ರೆ, ವಿವೇಕಾನಂದ ರಸ್ತೆ, 4 ನೇ ಕ್ರಾಸ್, ಮಸಾರಿ, ಗದಗ-582101, ದೂ. 08372-252399, 9611118474 ಸಂಪರ್ಕಿಸುವಂತೆ ಪಿಆರ್ಒ ಧೀರೇಂದ್ರ ಪಂಢರಿ ತಿಳಿಸಿದ್ದಾರೆ.
ಮತದಾರರ ಹೆಸರು ನೋಂದಣಿಗೆ ಅವಕಾಶ
ಗದಗ: ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರಾಗಿ ಹೆಸರು ನೋಂದಾಯಿಸಲು ಅರ್ಹ ಪದವೀಧರರಿಗೆ ಅ. 30ರ ವರೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಸೆಪ್ಟೆಂಬರ್ 30ರಂದು ಸಿದ್ಧವಿರುವ ಮತದಾರರ ಕರಡು ಪ್ರತಿಯನ್ನು ಪರಿಶೀಲನೆಗಾಗಿ ಎಲ್ಲ ತಹಸೀಲ್ದಾರ್ ಕಚೇರಿಗಳಲ್ಲಿ ಅಂಟಿಸಲಾಗಿದೆ. ಗದಗ ಜಿಲ್ಲಾ ವ್ಯಾಪ್ತಿಯಲ್ಲಿ 2010ರ ಅಕ್ಟೋಬರ್ 31ರ ಪೂರ್ವದಲ್ಲಿ ಪದವಿ ಪಡೆದಿರುವ ಅರ್ಹರು ತಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ನಮೂನೆ 18 ನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಸಲ್ಲಿಸಬೇಕು. ಮತದಾರರ ಪಟ್ಟಿಯಿಂದ ಕೈಬಿಡಲು ನಮೂನೆ 8, ಮತಕ್ಷೇತ್ರದ ವ್ಯಾಪ್ತಿಯಲ್ಲಿ ವರ್ಗಾವಣೆಗೆ 8-ಎ ಸಲ್ಲಿಸಬೇಕು. ಪರಿಷ್ಕೃತ ಮತದಾರರ ಕರಡು ಪ್ರತಿಯನ್ನು ನವೆಂಬರ್ 1ರಂದು ಪರಿಶೀಲನೆಗೆ ಪ್ರಕಟಿಸಲಾಗುವುದು ಎಂದು ಪಶ್ಚಿಮ ಪದವೀಧರ ಮತಕ್ಷೇತ್ರದ ಸಹಾಯಕ ನೋಂದಣಿ ಅಧಿಕಾರಿ ಹಾಗೂ ಯೂ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾತ್ಮರು ಯಾವುದೇ ಜಾತಿಗೆ ಸೀಮಿತರಲ್ಲ: ಎಚ್ಕೆ
ಗದಗ: ಸಂತ, ಮಹಾತ್ಮರು ಯಾವುದೇ ಜಾತಿ ಮತಕ್ಕೆ ಸೀಮಿತರಲ್ಲ. ಅವರು ಎಲ್ಲ ವರ್ಗ ಹಾಗೂ ಸಮಾಜದ ಸ್ವತ್ತು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶುಕ್ರವಾರ ವಾಲ್ಮೀಕಿ ಜಯಂತಿ ಅಂಗವಾಗಿ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ಯಂಗ್ ಇಂಡಿಯಾ ಕೋ ಆಪ್ ಕ್ರೆಡಿಟ್ ಸೊಸೈಟಿಯ ಜಂಟಿ ಆಶ್ರಯದಲ್ಲಿ ನೀಡಿದ 17 ಆಟೋ ರಿಕ್ಷಾಗಳನ್ನು ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ವಿತರಿಸಿ ಮಾತನಾಡಿದರು.
ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿ ಉಳಿದ ಆಟೋ ರಿಕ್ಷಾ ಚಾಲಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿಯ ನಿರ್ದೇಶಕ ಲಕ್ಷ್ಮಣಗೌಡ ಹಿರೆಗೌಡ್ರ ಆಟೋರಿಕ್ಷಾ ಚಾಲಕರಿಗೆ ತಿಳಿಸಿದರು. ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರ, ಜಿಲ್ಲಾಧ್ಯಕ್ಷ ವಿಜಯ ಕಲ್ಮನಿ, ರಫೀಕ ಜಮಾಲಖಾನ್, ಗಂಗಾಧರ ಬ್ಯಾಗೊಟಿ, ದೀಪಕ ಕಾಶಪ್ಪನವರ, ಗಣ್ಯರಾದ ಜೆ.ಕೆ. ಆದಪ್ಪಗೌಡ್ರ, ಚಂದ್ರು, ಕರಿರಾಯಣಗೌಡ್ರ, ಫ್ರಭು ಬುರಬುರೆ, ರಾಮಣ್ಣ ಫಲದೊಡ್ಡಿ, ಅಶೋಕ ಮಂದಾಲಿ, ಸಿದ್ದು ಪಾಟೀಲ, ಅನಿಲ ಸಿಂಗಾಟಲಕೇರಿ, ವೇದ ಮೂರ್ತಿ ಬಸವರಾಜ ಹಿಡ್ಕಿಮಠ ಜಿಪಂ ಸದಸ್ಯ ರೇವಣ್ಣಪ್ಪ ಕೊಂಡಿಕೊಪ್ಪ ಇದ್ದರು. ಈರಣ್ಣ ಗೆಜ್ಜೆಳ್ಳಿ ಸ್ವಾಗತಿಸಿ, ಶಿವು ಚಲವಾದಿ ವಂದಿಸಿದರು. ಮಂಜುನಾಥ ಮುಂಡರಗಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

