ಗದಗ

ಸ್ವಾವಲಂಬಿ ಜೀವನಕ್ಕೆ ಟಗರು ಸಾಕಾಣಿಕೆ

Published On :

ಕನ್ನಡಪ್ರಭ ವಾರ್ತೆ, ರೋಣ, ಅ. 20
ಸರ್ಕಾರಿ ಉದ್ಯೋಗ ಬೆನ್ನತ್ತಿ ಅರ್ಜಿ ಹಾಕಿ ಕಾಲ ಕಳೆಯುತ್ತ, ಕೆಲಸವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುವ ಅದೆಷ್ಟೋ ಯುವಕರಿಗೆ ಮಾದರಿಯಾಗುವಂತೆ ತಾಲೂಕಿನ ಹೊಸಹಳ್ಳಿ ಗ್ರಾಮದ ಯುವಕರು ಟಗರು ಸಾಕಾಣಿಕೆಯಲ್ಲಿ ತೊಡಗಿ ಸ್ವಾವಲಂಬಿಗಳಾಗಿದ್ದಾರೆ. ಪ್ರತಿ ತಿಂಗಳು ಲಕ್ಷಾಂತರ ಸಂಪಾದಿಸಿ ಗ್ರಾಮಸ್ಥರಿಂದ ಸೈ ಎನಿಸಿಕೊಂಡಿದ್ದಾರೆ.
ಪ್ರತಿ ಮನೆಯಲ್ಲೂ ಟಗರು: ರೋಣದಿಂದ 10 ಕಿಮೀ ದೂರದಲ್ಲಿರುವ ಹೊಸಹಳ್ಳಿ ಗ್ರಾಮದಲ್ಲಿ 450ಕ್ಕೂ ಹೆಚ್ಚು ಮನೆಗಳಿದ್ದು, ಪ್ರತಿ 2 ಮನೆಗೊಬ್ಬ ಯುವಕ ಟಗರು ಸಾಕಾಣಿಕೆಯಲ್ಲಿ ತೊಡಗಿರುವುದು ವಿಶೇಷ. ಖರ್ಚು ಕಡಿಮೆ, ಅಧಿಕ ಲಾಭದಾಯಕ ಉದ್ಯೋಗವಾದ ಟಗರು ಸಾಕಾಣಿಕೆಯಿಂದ ಇಲ್ಲಿನ ಯುವಕರು ಪ್ರತಿ ತಿಂಗಳು ಲಕ್ಷಾಂತರ ಸಂಪಾದನೆ ಮಾಡುತ್ತಿದ್ದಾರೆ. ಹೇಗೆ ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.
ಯುವಕರು ಒಮ್ಮಲೇ 15ರಿಂದ 20 ಮರಿಗಳನ್ನು ತರುತ್ತಾರೆ. ಅವುಗಳನ್ನು 3ರಿಂದ 4 ತಿಂಗಳ ವರೆಗೆ ಸಾಕುತ್ತಾರೆ. ನಂತರ ದಷ್ಟಪುಷ್ಟವಾಗಿ ಬೆಳೆಸಿ, 6 ಅಥವಾ 7 ತಿಂಗಳಿನ ಟಗರನ್ನು ರು. 10ರಿಂದ 15 ಸಾವಿರಕ್ಕೆ ಮಾರಾಟ ಮಾಡುತ್ತಾರೆ. ಇಲ್ಲಿ ಖರೀದಿಸಿ ತಂದಿದ್ದಕ್ಕಿಂತ 3ರಿಂದ 4 ಪಟ್ಟು ಹೆಚ್ಚು ಲಾಭವಾಗುತ್ತದೆ. ಟಗರು ಸಾಕಾಣಿಕೆಯಲ್ಲಿ ಹೊಸ ಪದ್ಧತಿ ಅಳವಡಿಸಿಕೊಂಡ ಇಲ್ಲಿನ ಯುವಕರು ಯಾವುದೇ ಶ್ರಮವಿಲ್ಲದೆ ಕಡಿಮೆ ಖರ್ಚಿನೊಂದಿಗೆ ಅಧಿಕ ಲಾಭ ಪಡೆಯುತ್ತಿದ್ದಾರೆ.
ಅಶೋಕ ಮೆಣಸಿನಕಾಯಿ ಮಾದರಿ: ಐಟಿಐ ಮುಗಿಸಿದ ಗ್ರಾಮದ ಯುವಕ ಅಶೋಕ ಮೆಣಸಿನಕಾಯಿ 3 ವರ್ಷಗಳಿಂದ ಈ ಟಗರಿನ ಕೃಷಿಯಲ್ಲಿ ತೊಡಗಿದ್ದಾನೆ. ಈ ಯುವಕ ಸದ್ಯ ಹೆಸ್ಕಾಂನಲ್ಲಿ ಗುತ್ತಿಗೆ ಆಧಾರದ ನೌಕರನಾಗಿದ್ದು, ಬಿಡುವಿನ ವೇಳೆಯಲ್ಲಿ ಟಗರು ನೋಡಿಕೊಳ್ಳುತ್ತಾನೆ. ಪ್ರತಿ ತಿಂಗಳು 20 ಟಗರು ಮಾರಾಟ ಮಾಡಿ ಮತ್ತೆ 20 ಮರಿಗಳನ್ನು ಖರೀದಿಸಿ ತರುತ್ತಾನೆ. ಹೀಗೆ, ನಿರಂತರ ಟಗರಿನ ಕೃಷಿಯಲ್ಲಿ ತೊಡಗಿ ಪ್ರತಿ ತಿಂಗಳು ರು. 1 ಲಕ್ಷದ ವರೆಗೆ ಆದಾಯ ಗಳಿಸುತ್ತಾನೆ.
ಇಲ್ಲಿ ಮೋಳಿ, ಎಳಗ, ಕರಿಕುರಿ, ಟೆಂಗುರಿ ಸೇರಿದಂತೆ ವಿವಿಧ ತಳಿಯ ಟಗರುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಟಗರಿನ ಮರಿಗಳು ದಷ್ಟಪುಷ್ಟವಾಗಿ ಬೆಳೆಯಲು ಹುಲ್ಲು, ಬೇವಿನ ತಪ್ಪಲು, ಸುಬವಾಲಿ ಗಿಡದ ತಪ್ಪಲು, ಪಿಸರಿಪಿಳ್ಳಿ ಸೊಪ್ಪು, ನುಗ್ಗಿ ತಪ್ಪಲು, ಆಡುಕಸ ಮೇಯಿಸುವುದರೊಂದಿಗೆ ಗೋವಿನಜೋಳದ ರವೆ, ಗೋದಿ ರವೆ, ಬಿಳಿಜೋಳದ ರವೆ ಹಾಗೂ ವೈಜ್ಞಾನಿಕ ಆಹಾರ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಆಗಾಗ್ಗೆ ಪಶು ವೈದ್ಯರನ್ನೂ ಕರೆಯಿಸಿ ಪರೀಕ್ಷಿಸಿ ಯಾವುದೇ ಕಾಯಿಲೆ ಬಾರದಂತೆ ಚಿಕಿತ್ಸೆ ಕೊಡಿಸಲಾಗುತ್ತಿದೆ
- ಅಶೋಕ ಮೆಣಸಿನಕಾಯಿ, ಮಲ್ಲಯ್ಯ ಸ್ಥಾವರಮಠ
ಟಗರು ಸಾಕಾಣಿಕೆಯಲ್ಲಿ ತೊಡಗಿರುವ ಯುವಕರು
ಸರ್ಕಾರಿ ನೌಕರಿ ದಾರಿ ಕಾಯದೇ ಹೊಸಹಳ್ಳಿ ಗ್ರಾಮದ ಸುಮಾರು 200ಕ್ಕೂ ಹೆಚ್ಚು ಯುವಕರು ಟಗರು ಸಾಕಾಣಿಕೆಯಲ್ಲಿ ತೊಡಗಿದ್ದು ಹೆಮ್ಮೆಯ ಸಂಗತಿಯಾಗಿದೆ. ಇತರರಿಗೆ ಸ್ವಾವಲಂಬನೆಯ ಬದುಕಿನ ಪಾಠ ಕಲಿಸುವಲ್ಲಿ ಈ ಯುವಕರ ಈ ಉದ್ಯೋಗ ಮೆಚ್ಚುವಂತದ್ದಾಗಿದೆ.
- ಶಿವು ಜುಮ್ಮನಗೌಡ್ರ, ಸಂಗಪ್ಪ ಮೆಣಸಿನಕಾಯಿ, ಬಾಬು ಘೋರ್ಪಡೆ, ಯಮನೂರಪ್ಪ ಮಾದರ
ಹೊಸಹಳ್ಳಿ ಗ್ರಾಮಸ್ಥರು
ಟಗರಿನ ಮರಿಗಳ ಸಾಕಾಣಿಕೆ, ಅವುಗಳನ್ನು ದಷ್ಟಪುಷ್ಟವಾಗಿ ಬೆಳೆಸುವ ರೀತಿ, ಆಹಾರ ಪದ್ಧತಿ ಹಾಗೂ ಚಿಕಿತ್ಸೆ ವಿಧಾನ ಸೇರಿದಂತೆ ಟಗರಿನ ಸಾಕಾಣಿಕೆಗೆ ಸಂಬಂಧಿಸಿದಂತೆ ತರಬೇತಿ ನೀಡುವಲ್ಲಿ ಸಮೃದ್ಧಿ ಜೀವನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸೇರಿದಂತೆ ಅನೇಕ ಸಂಸ್ಥೆಗಳು ತರಬೇತಿ ನೀಡುತ್ತಿವೆ. ಇಲ್ಲಿನ ಅನೇಕ ಯುವಕರು ಈಗಾಗಲೇ ತರಬೇತಿ ಪಡೆದಿದ್ದಾರೆ.
- ಮಲ್ಲಯ್ಯ ಸ್ಥಾವರಮಠ,
ತರಬೇತಿ ಪಡೆದ ಯುವಕ

 ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.