ಗದಗ

ವಿವಾದಿತ ಸಿದ್ಧರಾಮ ಚರಿತೆ ನಿಷೇಧಿಸಲಿ

Published On :

ಕನ್ನಡಪ್ರಭ ವಾರ್ತೆ, ಗದಗ, ಅ. 21
ಸಾಮಾಜಿಕ ಆಂದೋಲನದ ಮೂಲಕ ವಿಶ್ವದಲ್ಲಿ ಕ್ರಾಂತಿಗೆ ಕಾರಣರಾದ ಬಸವಣ್ಣನವರ ಕುರಿತು ಪ್ರಕಟವಾಗಿರುವ ಅವಹೇಳನಕಾರಿ ಕೃತಿ ಸಿದ್ಧರಾಮ ಚರಿತೆ ಯನ್ನು ಮಹಾರಾಷ್ಟ್ರ ಸರ್ಕಾರ ತಕ್ಷಣ ನಿಷೇಧಿಸಬೇಕು ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಸೋಮವಾರ ನಗರದ ತೋಂಟದಾರ್ಯ ಮಠದ ಆವರಣದಿಂದ ದಲಿತ ಸಂಘಟನೆಗಳು, ಬಸವ ಅಭಿಮಾನಿಗಳು ಹಾಗೂ ಜ. ತೋಂಟದಾರ್ಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕವಿ ರಾಘವಾಂಕ ವಿರಚಿತ ಸಿದ್ಧರಾಮ ಚರಿತೆ ಕೃತಿ ವಿಕೃತಗೊಳಿಸಿದ ಹೀನಮನಸ್ಸುಗಳ ವಿರುದ್ಧ ಸಾತ್ವಿಕ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು.
ಸಾಧನೆ, ಸಂಘರ್ಷ ಮತ್ತು ಮಾನವೀಯತೆಯೇ ಪ್ರಮುಖ ಎಂದು ಸಾರಿ ಹೋರಾಟ ಮತ್ತು ವಚನಗಳ ಮೂಲಕ ಸಮಾಜಕ್ಕೆ ಹೊಸ ಆಯಾಮ ನೀಡಿದ ಬಸವಾದಿ ಶರಣರ ಕುರಿತು ಅವಹೇಳನಕಾರಿ ಪುಸ್ತಕ ಪ್ರಕಟಣೆಗೆ ಮುಂದಾಗಿದ್ದ ವಿಕೃತ ಮನಸ್ಸಿನ ಕೃತ್ಯ ಇದಾಗಿದ್ದು, ವಿಶ್ವದಾದ್ಯಂತ ನೆಲೆಸಿರುವ ಬಸವಾಭಿಮಾನಿಗಳ ಭಾವನೆಗಳನ್ನು ಅರ್ಥೈಸಿಕೊಳ್ಳುವ ಮೂಲಕ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಈ ವಿಕೃತಿ ತಕ್ಷಣ ನಿಷೇಧಕ್ಕೆ ಒಳಗಾಗಬೇಕಾಗಿದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲ ಕುತ್ಸಿತ ಬುದ್ಧಿಯ ಜನರಿಂದ ಈ ರೀತಿಯ ಕೃತಿ ಚೌರ್ಯಗಳು ಜರುಗುತ್ತಿರುವುದು ಸಮಾಜಕ್ಕೆ ಮಾರಕವಾಗಿದೆ.
ಸಮಸ್ತ ಸಮುದಾಯದ ಏಳ್ಗೆಗೆ ಶ್ರಮಿಸಿದ ಶರಣ ಪರಂಪರೆಗೆ ಹಾಗೂ ಇತಿಹಾಸಕ್ಕೆ ಬಗೆದ ದ್ರೋಹ ಇದಾಗಿದ್ದು, ಮನುಕುಲದ ಸಮಾನತೆಗೆ ಬಗೆದ ದ್ರೋಹ ಎಂದು ಪರಿಗಣಿಸಬೇಕಿದೆ. ಇತಿಹಾಸದುದ್ದಕ್ಕೂ ಧಾರ್ಮಿಕ, ವೈಚಾರಿಕ, ಸಾಂಸ್ಕೃತಿಕ ಅತ್ಯಾಚಾರಗಳು ಪಟ್ಟಭದ್ರ ಹಿತಾಸಕ್ತಿಗಳಿಂದಲೂ ನಡೆಯುತ್ತಾ ಬಂದಿರುವುದು ನಾಡಿನ ಪ್ರಜ್ಞಾವಂತ ಜನತೆ ಗಮನಿಸುತ್ತಿದೆ.
ಕೀಳು ಪ್ರಯತ್ನಗಳನ್ನು ಸಮಾಜ ಧಿಕ್ಕರಿಸಲಿದೆ. ಈ ಹಿನ್ನೆಲೆಯಲ್ಲಿ ಕೀಳು ಪ್ರವೃತ್ತಿಯ ಅವಿವೇಕದ ಕೃತಿಗಳನ್ನು ಖಂಡಿಸುವ ನಿಟ್ಟಿನಲ್ಲಿ ಇಂದು ಸಾತ್ವಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಈ ಪುಸ್ತಕದ ವಿಕೃತಿ ಸಮಾಜದ ಸ್ವಾಸ್ಥ್ಯಕ್ಕೆ ವಿರೋಧವಾಗಿದ್ದು, ಈ ಪ್ರವೃತ್ತಿಯನ್ನು ಖಂಡಿಸುತ್ತೇನೆ. 12ನೇ ಶತಮಾನದಲ್ಲಿ ಕಾಯಕ, ದಾಸೋಹ ಮತ್ತು ಸಾಮಾಜಿಕ ಸಮಾನತೆಯ ಮೂಲಕ ಕ್ರಾಂತಿಕಾರಿ ಬದಲಾವಣೆಯಿಂದ ಸಮಾಜದಲ್ಲಿ ಬೇರೂರಿಸಿದ್ದ ಬಸವಾದಿ ಶರಣರ ಅವಹೇಳನ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಕಾಯಕ, ಪ್ರತಿಭೆ ಮತ್ತು ವ್ಯಕ್ತಿತ್ವದಿಂದ ವ್ಯಕ್ತಿ ಮೇಲುಸ್ತರದ ಬದುಕು ಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕರು ಈ ಕೃತಿಯನ್ನು ಖಂಡಿಸಬೇಕಾಗಿದೆ ಎಂದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರೊ. ಕೆ.ಎಚ್.ಬೇಲೂರ, ನಗರಸಭೆಯ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ರಾಜು ಕುರಡಗಿ, ಮೋಹನ ಅಲಮೇಲಕರ, ಪ್ರಕಾಶ ಕರಿಸೋಮನಗೌಡ್ರ, ವಿದ್ಯಾಧರ ದೊಡ್ಡಮನಿ, ವಿಜಯ ಮುಳಗುಂದ, ರಜಾಕಸಾಬ ಡಂಕೇದ, ಕೆ.ಐ. ಶೇಖ, ಶೇಖರ ಕವಳಿಕಾಯಿ, ಚಂದ್ರು ತಡಸದ, ಬಾಲಚಂದ್ರ ಭರಮಗೌಡ್ರ, ಎಂ.ಎಸ್. ಪರ್ವತಗೌಡ್ರ, ಎಂ.ಎ. ಹಂಚಿನಾಳ, ಕೊಟ್ರೇಶ ಮೆಣಸಿನಕಾಯಿ, ಸಿದ್ದು ಪಾಟೀಲ, ಅಶೋಕ ಮಂದಾಲಿ ಹಾಗೂ ದಲಿತ ಸಂಘಟನೆಯ ಪದಾಧಿಕಾರಿಗಳು ಹಾಗೂ ನೂರಾರು ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.

ಕೃತಿ ವಿರೋಧಿ ಪ್ರತಿಭಟನೆಗೆ ವಿದ್ಯಾರ್ಥಿಗಳ ಬೆಂಬಲ
ಗದಗ: ಕವಿ ರಾಘವಾಂಕ ವಿರಚಿತ ಸಿದ್ದರಾಮ ಚಾರಿತ್ರ್ಯ ಕೃತಿ ವಿಕೃತಿಗೊಳಿಸಿದ ಹೀನ ಮನಸ್ಸುಗಳ ವಿರುದ್ದ ಸೋಮವಾರ ನಡೆದ ಸಾತ್ವಿಕ ಪ್ರತಿಭಟನೆಗೆ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್‌ನ ವಿದ್ಯಾರ್ಥಿಗಳು ನಗರಸಭೆಯಲ್ಲಿ ಇರುವ ಬಾಬಾಸಾಹೇಬ ಅಂಬೇಡ್ಕರ್ ಪುತ್ಥಳಿಗೆ ಹಾರಹಾಕುವ ಮೂಲಕ ಬೆಂಬಲ ಸೂಚಿಸಿದರು. ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಸಂಚಾಲಕ ಪ್ರಕಾಶ ವೀರಾಪುರ, ವಸಂತ ಚವಡಣ್ಣವರ, ಫಕ್ಕೀರೇಶ ಹಾದಿಮನಿ, ಗಾಳೆಪ್ಪ ಜಾಲವಾಡಗಿ, ಮುತ್ತು ಬಿಳೇಯಲಿ, ಭೀಮಸಿ ಹೊಸಮನಿ, ಶಿವಾನಂದ ಅಳವಂಡಿ, ಚಂದ್ರಶೇಖರ ಹರಿಜನ, ಹನುಮಂತ ಪೂಜಾರ, ಸುರೇಶ ಚಲವಾದಿ, ಮತ್ತು ವಸತಿ ನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.