ದೇಶ ರಕ್ಷಕರ ಗೌರವಿಸಿ: ಪ್ರಸನ್ನಕುಮಾರ್
ಗದಗ: ನಾಗರಿಕ ಸಮಾಜ ದೇಶ ರಕ್ಷಕರ ಗೌರವಿಸುವ ರೂಢಿ ಬೆಳೆಸಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಅವರು ಸೋಮವಾರ ಬೆಟಗೇರಿ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ದೇಶ ರಕ್ಷಣೆಗಾಗಿ ತಮ್ಮ ಕೌಟುಂಬಿಕ ವ್ಯವಸ್ಥೆಯಿಂದ ದೂರವಿದ್ದು ಸಮಾಜದ ಶಾಂತಿ, ನೆಮ್ಮದಿಗಾಗಿ ಜೀವನದುದ್ದಕ್ಕೂ ಸೇವೆ ಸಲ್ಲಿಸುವ ದೇಶರಕ್ಷಕರ ಸೇವೆ ಅತ್ಯಮೂಲ್ಯವಾಗಿದ್ದು, ನೆಮ್ಮದಿಯುತ ಹಾಗೂ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯೋಧರ ಪಾತ್ರ ಅಪಾರವಾಗಿದೆ. ದೇಶ ಎದುರಿಸುತ್ತಿರುವ ನಕ್ಸಲ್ ಹಾಗೂ ಭಯೋತ್ಪಾದನೆ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸಲು ಯೋಧರು ಹಾಗೂ ಆರಕ್ಷಕರಿಗೆ ನಾಗರಿಕ ಸಮಾಜದಿಂದ ಸ್ಫೂರ್ತಿ ಮತ್ತು ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯ ಜರುಗಬೇಕಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ದೇಶದ ಆಂತರಿಕ ಭದ್ರತೆಯನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಸಮಸ್ಯೆಗಳು ತಂತ್ರಜ್ಞಾನದ ದುರ್ಬಳಕೆಯಿಂದ ನಡೆಯುತ್ತಿವೆ. ಯೋಧರು ಹಾಗೂ ಇಲಾಖಾ ಸಿಬ್ಬಂದಿಯನ್ನು ಈ ಕುರಿತು ತರಬೇತಿಗೊಳಿಸುವ ಕಾರ್ಯಕ್ಕೆ ಪ್ರಾಮುಖ್ಯ ನೀಡಬೇಕಿದೆ. ಕಾನೂನು ರಕ್ಷಣೆ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ಪ್ರಾಣತ್ಯಾಗ ಗೈದ ಹುತಾತ್ಮರ ಕುರಿತು ಸಮಾಜದಲ್ಲಿ ಗೌರವ ಒಡಮೂಡಬೇಕಿದೆ. ತಂತ್ರಜ್ಞಾನದ ದುರ್ಬಳಕೆಯಿಂದಾಗಿ ಅಪರಾಧಗಳು ಹೆಚ್ಚಾಗುತ್ತಿದ್ದು, ನಕ್ಸಲ್ ಸೇರಿದಂತೆ ಭಯೋತ್ಪಾದನಾ ಚಟುವಟಿಕೆ ಕಂಡುಬರುತ್ತಿವೆ. ಇವು ದೇಶರಕ್ಷಕ ಇಲಾಖೆಗಳಿಗೆ ಹೊಸ ಸವಾಲಾಗಿ ಪರಿಣಮಿಸಿದ್ದು, ಸವಾಲುಗಳ ಸಮರ್ಥ ನಿರ್ವಹಣೆಗೆ ನಾಗರಿಕ ಸಮಾಜದ ಸಹಕಾರ ಅವಶ್ಯಕವಾಗಿದೆ. 53 ವರ್ಷಗಳಲ್ಲಿ ದೇಶದಲ್ಲಿ ಸುಮಾರು 32 ಸಾವಿರಕ್ಕೂ ಹೆಚ್ಚು ಯೋಧರು ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದು, ಈ ಸಾಲಿನಲ್ಲಿ ದೇಶದಲ್ಲಿ 579, ರಾಜ್ಯದಲ್ಲಿ 19 ಹಾಗೂ ಗದಗ ಜಿಲ್ಲೆಯ ಓರ್ವಯೋಧ ದೇಶ ರಕ್ಷಣೆಯ ವೇಳೆಯಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದರು. ಜಿಲ್ಲಾ ಸಶಸ್ತ್ರದಳದ ಆರ್ಪಿಐ ಚಿ. ಪೈಜುದ್ದೀನ್ ನೇತೃತ್ವದಲ್ಲಿ ಪೊಲೀಸ್ ತುಕಡಿಗಳ ಸಮಾವೇಶ ಹಾಗೂ ಆಕರ್ಷಕ ಕವಾಯತು ಜರುಗಿತು. ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ನಗರದ ಗಣ್ಯ ನಾಗರಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಿಂದ ಹುತಾತ್ಮ ಸ್ಮಾರಕಕ್ಕೆ ಪುಷ್ಪನಮನ ಜರುಗಿತು.
ಬಸಣ್ಣ ಮಲ್ಲಾಡದ, ಮೋಹನ ಅಲಮೇಲಕರ, ನಗರಸಭಾ ಸದಸ್ಯ ಪ್ರವೀಣ ಬನ್ಸಾಲಿ, ಮೇಘಾ ಮುದಗಲ್, ಪನ್ನಾಬಾಯಿ ಬಾಗಡೆ, ಅನಿಲ ಅಬ್ಬಿಗೇರಿ, ಭರತ್ ಇರಾಳ, ರಾಮಣ್ಣ ಫಲದೊಡ್ಡಿ, ಡಾ. ಡಿ.ಡಿ. ಹೆಮ್ಮಾಡಿ, ದಿನೇಶ ಜೈನ್, ನವೀನ ಭಾಗಮಾರ. ಶ್ರೀನಿವಾಸ ಹುಬ್ಬಳ್ಳಿ, ಆರ್.ಎಂ. ಸಿಂಧಗಿ, ಎಸ್.ಎನ್. ಬಳ್ಳಾರಿ ಮುಂತಾದವರು ಪಾಲ್ಗೊಂಡಿದ್ದರು. ಎಂ.ಟಿ. ಭಟ್ ಹಾಗೂ ಪಿಎಸ್ಐ ವಿದ್ಯಾಧರ ನಾಯಕ ನಿರೂಪಿಸಿದರು. ಡಿಎಸ್ಪಿ ವಿ.ಜಿ. ಡಂಬಳ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

