ಹತ್ತಿ ಬಿತ್ತಿ ಹೈರಾಣಾದ ರೈತ
ಶಿರಹಟ್ಟಿ: ಎಲ್ಲ ಕ್ಷೇತ್ರಗಳಿಗಿಂತ ಅಸಂಘಟಿತ ಹಾಗೂ ಅಭದ್ರತೆಯಿಂದ ಇರುವ ಕ್ಷೇತ್ರ ಕೃಷಿ ಕ್ಷೇತ್ರ. ಇಲ್ಲಿ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಕಳಪೆ ಬೀಜ ಬಿತ್ತಿ ನಷ್ಟ ಅನುಭವಿಸಿದರೂ ರೈತರಿಗೆ ನ್ಯಾಯ ಕೊಡಿಸುವವರ್ಯಾರೂ ಇಲ್ಲ. ಇದು ನಮ್ಮ ರೈತರಿಗೆ ಬಂದಿರುವ ದುಸ್ಥಿತಿ.
ಹತ್ತಿ ಬಿತ್ತಿದ ರೈತ ಹಣ್ಣಾಗಿ ಹೋಗಿದ್ದು, ಆಳೆತ್ತರ ಬೆಳೆದಿರುವ ಬಿಟಿ ಹತ್ತಿ ಗಿಡಗಳಲ್ಲಿ ಒಂದೇ ಒಂದು ಕಾಯಿ ಬಿಟ್ಟಿಲ್ಲ. ಬಿತ್ತನೆ ಬೀಜ ಮಾರಾಟ ಮಾಡಿದ ಕಂಪನಿಗಳು ರೈತರ ನೆರವಿಗೆ ಬಾರದೇ ನಿರ್ಲಕ್ಷ್ಯ ವಹಿಸಿವೆ. ರೈತ ದೇಶದ ಬೆನ್ನೆಲುಬಾಗಿದ್ದಾನೆ. ಆದರೆ ಆ ರೈತನ ಶೋಷಣೆ ಮಾತ್ರ ನಿಲ್ಲದಿರುವುದು ನಮ್ಮ ದೇಶದ ದುರಂತ.
ದೊಡ್ಡ ದೊಡ್ಡ ಕಂಪನಿಗಳು ತಾವು ಉತ್ಪಾದಿಸುವ ಸಣ್ಣ ವಸ್ತುಗಳಿಂದ ಹಿಡಿದು ಮಾರಾಟ ಬೆಲೆ ನಿಗದಿ ಮಾಡುತ್ತವೆ. ಆದರೆ, ಮಳೆ, ಬಿಸಿಲು, ಗಾಳಿ, ಚಳಿ ಎನ್ನದೇ ರೈತ ಹೊಲವನ್ನು ಉತ್ತಿ, ಬಿತ್ತಿ ಬೆಳೆದರೆ ಸರಿಯಾದ ದರ ಸಿಗುವುದಿಲ್ಲ. ಸಿಕ್ಕರೂ ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕಿ ಬೆಳೆ ಹಾನಿಗೊಳಗಾಗುತ್ತಾನೆ. ಸದ್ಯ ಉತ್ತಮ ಬೆಳೆ ಬಂದರೂ ಹತ್ತಿ ಗಿಡ ಕಾಯಿ ಬಿಡದಿರುವುದರಿಂದ ರೈತನಿಗೆ ದಿಕ್ಕೇ ತೋಚದಂತಾಗಿದೆ. ತಾಲೂಕಿನ ಹೊಸಳ್ಳಿ ಗ್ರಾಮದ ಮಾದೇವಪ್ಪ ಸಣ್ಣಮಲ್ಲಪ್ಪ ಹಾರುಗೇರಿ, ಮಲ್ಲಪ್ಪ ದೊಡ್ಡಹನುಮಪ್ಪ ಹಾರುಗೇರಿ, ಬಸವಣ್ಣೆಪ್ಪ ಹೊನಕೇರೆಪ್ಪ ಹಾರುಗೇರಿ, ಬಸವಣ್ಣೆಪ್ಪ ರಾವುತರ, ಮುದಕಪ್ಪ ಹೊಸಳ್ಳಿ, ಶಂಕ್ರಪ್ಪ ಲಕ್ಕಣ್ಣವರ ಸೇರಿದಂತೆ ಇದೇ ಗ್ರಾಮದಲ್ಲಿ ಸುಮಾರು 40 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆದಿದ್ದಾರೆ. ಆದರೆ ಗಿಡಗಳಲ್ಲಿ ಮೊಗ್ಗು, ಕಾಯಿ ಬಿಡದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಅಪಾರ ವೆಚ್ಚ: ರೈತರು ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ, ಉತ್ತಮ ಬೆಳೆ ಬರುವ ನಿರೀಕ್ಷೆಯಿಂದ ವ್ಯಾಪಾರಸ್ಥರು ಶಿಫಾರಸು ಮಾಡಿದ್ದ ಹೇಳಿದಷ್ಟು ಹಣ ಕೊಟ್ಟು ವಿವಿಧ ಕಂಪನಿಗಳ ಬಿಟಿ ಹತ್ತಿ ಬೀಜಗಳನ್ನು ಕೊಂಡು ತಂದು ಬಿತ್ತಿದ್ದಾರೆ. ಪ್ರತಿ ಎಕರೆಗೆ ರಸಗೊಬ್ಬರ, ಕ್ರಿಮಿನಾಶಕ, ಕಳೆ ಮತ್ತಿತರ ಕೃಷಿ ಕಾರ್ಯಕ್ಕೆ ರು. 5 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ವ್ಯಾಪಾರಸ್ಥರು ಪ್ರತಿ ಎಕರೆಗೆ 20-25 ಕ್ವಿಂಟಲ್ ಇಳುವರಿ ಬಂದೇ ಬರುತ್ತದೆ ಎಂದು ಹೇಳಿದ್ದಕ್ಕೆ ಅವರ ಮಾತು ನಂಬಿ ಬಿಟಿ ಹತ್ತಿ ಬೆಳೆದು ಈಗ ರೈತರು ಕಣ್ಣೀರಿಡುತ್ತಿದ್ದಾರೆ. ವಿವಿಧ ಕಂಪನಿಗಳ ಬಿಟಿ ಹತ್ತಿ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದು, ಗಿಡಗಳಲ್ಲಿ ಮೊಗ್ಗು ಕಾಯಿ ಕಾಣಿಸುತ್ತಿಲ್ಲ. ಇದಕ್ಕೆ ಏನು ಕಾರಣ ಎಂದು ಬೀಜ ಪೂರೈಕೆ ಮಾಡಿದ ವ್ಯಾಪಾರಸ್ಥರನ್ನು ಪ್ರಶ್ನಿಸಿದರೆ, ರೈತರನ್ನು ಹತ್ತಿರವೂ ಬರಿಸಿ ಕೊಳ್ಳುತ್ತಿಲ್ಲ. ಕೃಷಿ ಇಲಾಖೆಯತ್ತ ಕೈ ಮಾಡಿ ಅವರನ್ನು ಕೇಳಿ ಎಂದು ರೈತರನ್ನು ಸಾಗು ಹಾಕುತ್ತಿದ್ದಾರೆ. ಕೃಷಿ ಇಲಾಖೆಗೆ ಹೋಗಿ ಬೀಜ ಖರೀದಿಸಿದ ರಶೀದಿಯನ್ನು ಹಚ್ಚಿ ಕಳಪೆ ಬೀಜ ಪೂರೈಕೆ ಮಾಡಿದ ಕಂಪನಿಯ ಮೇಲೆ ಸೂಕ್ತ ಕ್ರಮ ಕೈಗೊಂಡು ಪರಿಹಾರ ಕೊಡಿಸುವಂತೆ ಅರ್ಜಿ ಸಲ್ಲಿಸಿರುವುದಾಗಿ ರೈತರು ತಿಳಿಸಿದ್ದಾರೆ.
ಅಧಿಕಾರಿ ಸ್ಪಷ್ಟನೆ
ಶಿರಹಟ್ಟಿ ತಾಲೂಕಿನಲ್ಲಿ ಕನಕ ಬಿಟಿ ಹತ್ತಿ ಬೆಳೆ ವಿಫಲವಾದ ಬಗ್ಗೆ ಗಮನಕ್ಕೆ ಬಂದಿದೆ. ನಮ್ಮ ಸಿಬ್ಬಂದಿಯೂ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಬಂದು ಹೋಗಿದ್ದಾರೆ. ಬೀಜ ಪೂರೈಕೆ ಮಾಡಿದ ಕಂಪನಿಯಿಂದ ಪರಿಹಾರ ಕೊಡಿಸುವಂತೆ ರೈತ ಸಂಪರ್ಕ ಕೇಂದ್ರಕ್ಕೆ ರೈತರಿಂದ ಅರ್ಜಿಗಳು ಬಂದಿವೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಪ್ರಹ್ಲಾದ ತಿಳಿಸಿದ್ದಾರೆ.
ಆತ್ಮಹತ್ಯೆ ಬೆದರಿಕೆ
ಸಾಲ ಸೋಲ ಮಾಡಿ ಲಕ್ಷಾಂತರ ಹಣ ಖರ್ಚು ಮಾಡಿ ಬಿಟಿ ಹತ್ತಿ ಬಿತ್ತನೆ ಮಾಡಿದ್ದು, ಬೆಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ಸಾಲ ಬೆಟ್ಟದಷ್ಟು ಬೆಳೆದಿದೆ. ಈ ಬಗ್ಗೆ ಕೃಷಿ ಸಚಿವರಿಗೆ, ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ತಹಸೀಲ್ದಾರ್ಗೆ, ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾರಿಂದಲೂ ಈವರೆಗೆ ನ್ಯಾಯ ಸಿಕ್ಕಿಲ್ಲ. ನೇಗಿಲಯೋಗಿಯ ಸಂಕಷ್ಟಕ್ಕೆ ಧಾವಿಸಿ ಕಳಪೆ ಬೀಜ ಪೂರೈಸಿದ ಕಂಪನಿಯವರ ಕುತ್ತಿಗೆ ಪಟ್ಟಿ ಹಿಡಿದು ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ಕೊಡಿಸಬೇಕು. ಇಲ್ಲದೇ ಹೋದಲ್ಲಿ ಆತ್ಮಹತ್ಯೆಗೆ ಮುಂದಾಗುವುದಾಗಿ ರೈತರು ಬೆದರಿಕೆ ಹಾಕಿದ್ದಾರೆ.
- ಮಹದೇವಪ್ಪ ಎಂ. ಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

