ಇಂದು ಚನ್ನಮ್ಮಳ ವಿಜಯೋತ್ಸವ
ನರಗುಂದ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್, ಲಿಂಗಾಯತ ಪಂಚಮಸಾಲಿ ಸಮಾಜ ವಿವಿಧೋದ್ದೇಶಗಳ ಸಂಘ ಹಾಗೂ ರಾಣಿ ಚನ್ನಮ್ಮಾ ಪ್ರತಿಷ್ಠಾನ ಇವರ ಸಂಯುಕ್ತ ಆಶ್ರಯದಲ್ಲಿ ವೀರರಾಣಿ ಕಿತ್ತೂರರಾಣಿ ಚನ್ನಮ್ಮಾಜಿಯ 190ನೇ ವಿಜಯೋತ್ಸವ ಹಾಗೂ ನರಗುಂದ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶ ಮತ್ತು ಹುಬ್ಬಳ್ಳಿ ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಅ. 24ರ ಬೆಳಗ್ಗೆ 11 ಗಂಟೆಗೆ ಜರುಗಲಿದೆ. ಸಾನ್ನಿಧ್ಯವನ್ನು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಸಮಾಜದ ಜ. ಬಸವಜಯಮೃತ್ಯುಂಜಯ ಶ್ರೀಗಳು, ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶ್ರೀಗಳು, ವಿರಕ್ತಮಠದ ಚನ್ನಬಸವ ಶ್ರೀಗಳು, ಪತ್ರೀವನಮಠದ ಸಿದ್ದವೀರ ಶ್ರೀಗಳು, ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ವಹಿಸುವರು. ಶಾಸಕ ಬಿ.ಆರ್. ಯಾವಗಲ್, ಧಾರವಾಡ ಶಾಸಕ ವಿನಯ ಕುಲಕರ್ಣಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಸವದತ್ತಿ ಶಾಸಕ ಆನಂದ ಮಾಮನಿ, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಸಚಿವ ಸಿ.ಸಿ. ಪಾಟೀಲ, ಮುರುಗೇಶ ನಿರಾಣಿ, ಕಳಕಪ್ಪ ಬಂಡಿ, ಪಿ.ಸಿ. ಸಿದ್ದನಗೌಡ್ರ, ಶ್ರೀಶೈಲಪ್ಪ ಬಿದರೂರ, ಶಂಕರಪಾಟೀಲ ಮುನೇನಕೊಪ್ಪ, ನೀಲಕಂಠ ಅಸೂಟಿ, ರಾಜಶೇಖರ ಮೆಣಸಿನಕಾಯಿ, ಮಹಾಂತೇಶ ಹಳ್ಳೂರ, ಡಾ. ಸಿ.ಕೆ. ರಾಚನಗೌಡ್ರ ಮುಂತಾದವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ನಾಳೆ ವಾಲಿಬಾಲ್ ಪಂದ್ಯ
ನರಗುಂದ: ತಾಲೂಕಿನ ಹದಲಿ ಗ್ರಾಮದಲ್ಲಿ ಲಯನ್ಸ್ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅ. 25ರ ಬೆಳಗ್ಗೆ 9 ಗಂಟೆಗೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜರುಗಲಿದೆ. ಶಾಸಕ ಬಿ.ಆರ್. ಯಾವಗಲ್, ರಾಜು ಹಿರೇಮಠ, ಸುರೇಶ ಸೊನಕೊಪ್ಪ, ಚಂದ್ರು ಅರಗಂಜಿ, ಬಾಳನಗೌಡ ಪರ್ವತಗೌಡ್ರ, ಹನುಮಂತಪ್ಪ ಕೆರಿ ಮುಂತಾದವರು ಭಾಗವಹಿಸುವರು.
ಸಿಡಿಲಿನಿಂದ ವ್ಯಕ್ತಿ ಸಾವು: ಸಾಂತ್ವನ
ಮುಂಡರಗಿ: ತಾಲೂಕಿನ ಮಕ್ತುಂಪುರ ಗ್ರಾಮದಲ್ಲಿ ಮಂಗಳವಾರ ಸಿಡಿಲು ಬಡಿದು ಸಾವಿಗೀಡಾಗಿದ್ದ ಅಂದಪ್ಪ ಅವರ ನಿವಾಸಕ್ಕೆ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ಹಮ್ಮಿಗಿ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮೃತ ಅಂದಪ್ಪನ ತಂದೆ ರೋದನ ಮುಗಿಲು ಮುಟ್ಟಿತು. ಕುಟುಂಬದವರಿಗೆ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಒದಗಿಸಿಕೊಡುವುದಾಗಿ ತಿಳಿಸಿದರು. ಅಲ್ಲದೆ, ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಯೊಂದಿಗೆ ಮಾತನಾಡಿ ಪರಿಹಾರ ಚೆಕ್ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು. ದೇವಪ್ಪ ಕಂಬಳಿ, ಚಂದ್ರಹಾಸ ಉಳ್ಳಾಗಡ್ಡಿ, ಲಿಂಗಪ್ಪ ಉಪ್ಪಾರ, ಎ.ಪಿ. ದಂಡಿನ, ಶರಣಪ್ಪ ಕುಬಸದ, ದಿಲೀಪಕುಮಾರ ಜೋಶಿ ಮತ್ತಿತರರು ಉಪಸ್ಥಿತರಿದ್ದರು.
ವಿಲೀನಕ್ಕಿಲ್ಲ ಆದ್ಯತೆ: ಪಕ್ಷ ಸಂಘಟನೆಗೆ ಪ್ರಾಧಾನ್ಯತೆ
ಗದಗ: ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಮುಂಬರುವ ಲೋಕಸಭಾ ಚುನಾವಣೆಯ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸುತ್ತಿದ್ದು, ಪಕ್ಷ ವಿಲೀನಕ್ಕೆ ಆದ್ಯತೆ ನೀಡದೆ, ಸಂಘಟನೆಗೆ ಪ್ರಾಧಾನ್ಯತೆ ನೀಡುವುದಾಗಿ ಬಿಎಸ್ಆರ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಶಾಸಕ ಬಿ. ಶ್ರೀರಾಮುಲು ಹೇಳಿದರು. ಬುಧವಾರ ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ 7ನೇ ವರ್ಷದ ಬೃಹತ್ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬರುವ ದೀಪಾವಳಿ ಒಳಗೆ ಪಕ್ಷದಲ್ಲಿ ಹಲವಾರು ಬದಲಾವಣೆಗಳಾಗಲಿದ್ದು, ರಾಜ್ಯದ 30 ಜಿಲ್ಲೆಗಳು ಹಾಗೂ 224 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡು ಪಕ್ಷ ಬಲಿಷ್ಠಗೊಳಿಸಲು ಕಾರ್ಯೋನ್ಮುಖವಾಗಲಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷ ವಿಲೀನವಾಗಲಿ ಅಥವಾ ಇತರೆ ಪಕ್ಷದೊಂದಿಗೆ ಹೊಂದಾಣಿಕೆಯಾಗಲಿ ಮಾಡಿಕೊಳ್ಳದೆ, ರಾಜ್ಯದ ಎಲ್ಲ 28 ಲೋಕಸಭಾ ಸ್ಥಾನಗಳಿಗೆ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳುವ ಮೂಲಕ ಇತ್ತೀಚಿನ ದಿನಗಳಲ್ಲಿ ಪಕ್ಷ ವಿಲೀನ ಕುರಿತು ಕೇಳಿಬರುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದರು. ಜನಾರ್ದನ ರೆಡ್ಡಿ ಬಂಧನದಿಂದ ಆತಂಕಿತನಾಗಿದ್ದರೂ ಯಾವುದೇ ಕಾರಣಕ್ಕೂ ರೆಡ್ಡಿಯೊಂದಿಗಿನ ನನ್ನ ಬಾಂಧವ್ಯ ಎಂದೆಂದಿಗೂ ಚಿರಸ್ಥಾಯಿಯಾಗಿ ಉಳಿಯಲಿದೆ ಎನ್ನುವ ಮೂಲಕ ತಮ್ಮ ಸ್ನೇಹವನ್ನು ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ಅನಿಲ ಮೆಣಸಿನಕಾಯಿ, ಮಂಜುನಾಥ ಮುಳಗುಂದ, ರಾಘವೇಂದ್ರ ಯಳವತ್ತಿ, ಎಸ್.ಎಚ್. ಶಿವನಗೌಡರ, ಬಾಬಾಜಾನ ಬಳಗಾನೂರ, ಸಿರಾಜ ಬಳ್ಳಾರಿ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

