ಮಾನವೀಯತೆ ಸಾಕಾರದಿಂದ ಸಂತೃಪ್ತಿ
ಕನ್ನಡಪ್ರಭ ವಾರ್ತೆ, ಗದಗ, ಅ. 23
ಶರಣ, ಸಂತರ ಪುಣ್ಯಭೂಮಿಯಲ್ಲಿ ಉಚಿತ ಸಾಮೂಹಿಕ ವಿವಾಹ ನೆರವೇರಿಸುವ ಮೂಲಕ ಮಾನವೀಯತೆ ಸಾಕಾರಗೊಳಿಸುವ ಕಾರ್ಯ ಜೀವನದ ಸಂತೃಪ್ತಿಗೆ ಕಾರಣವಾಗಿದೆ ಎಂದು ಬಿಎಸ್ಆರ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಶಾಸಕ ಬಿ. ಶ್ರೀರಾಮುಲು ಹೇಳಿದರು.
ಬುಧವಾರ ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಬಿ. ಶ್ರೀರಾಮುಲು ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ 7ನೇ ವರ್ಷದ ಬೃಹತ್ ಉಚಿತ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜಕೀಯ ಬದುಕಿನಲ್ಲಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದೇನೆ. ಜನಸಾಮಾನ್ಯರ ಆಶೀರ್ವಾದದಿಂದ ಸಂಕಷ್ಟಗಳಿಗೆ ಕುಗ್ಗದೇ ದೃಢವಿಶ್ವಾಸದಿಂದ ಮುನ್ನಡೆಯುತ್ತಿದ್ದು, ಸಾಮಾನ್ಯನ ಸಂತೃಪ್ತಿಯಲ್ಲಿ ಬದುಕು ಸಾಗಿಸುತ್ತಿದ್ದೇನೆ. ಬೆಲೆ ಏರಿಕೆ ಕಷ್ಟ ಸ್ಥಿತಿಯನ್ನು ಲೆಕ್ಕಿಸದೆ ಸ್ನೇಹಿತರ, ಅಭಿಮಾನಿಗಳ ಸಹಕಾರದಿಂದ ನಮ್ಮ ನೋವುಗಳನ್ನು ಬದಿಗಿರಿಸಿ ಬಡಜನತೆಯ ನೋವಿಗೆ ಸ್ಪಂದಿಸಿದ ತೃಪ್ತಿ ಹೊಂದಿದ್ದೇನೆ. ಮಿತಸಂತಾನ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮುಖ್ಯತೆ ನೀಡಿ, ಹೊಸ ಬಾಳಿನ ಹೊಸ್ತಿಲಲ್ಲಿ ನಿಂತಿರುವ ನವ ವಿವಾಹಿತರು ಆದರ್ಶ ಬದುಕು ಸಾಗಿಸುವ ಮುಖಾಂತರ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅರಿತಿದ್ದೇನೆ. ಕಷ್ಟಗಳ ಸರಮಾಲೆಯಲ್ಲೇ ಸಾಮಾನ್ಯನ ಕಣ್ಣೀರು ಒರೆಸುವ ಕಾರ್ಯಕ್ಕೆ ಅಣಿಯಾಗಿದ್ದೇನೆ ಎಂದರು.
ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ್ ಮಾತನಾಡಿ, ರಾಜ್ಯದಲ್ಲಿ ಆರೋಗ್ಯಶ್ರೀ ಯೋಜನೆಗೆ ಚಾಲನೆ ನೀಡಿ ಜನಾರೋಗ್ಯ ಕಾಪಾಡಲು ಪ್ರಾಮುಖ್ಯತೆ ನೀಡಿದ್ದ ಶ್ರೀರಾಮುಲು ಸಾಮೂಹಿಕ ವಿವಾಹಗಳ ಮೂಲಕ ಬಡವರ ಬದುಕಿನಲ್ಲಿ ಸ್ವಾಭಿಮಾನ ಮೂಡಿಸುವ ಕಾರ್ಯಕ್ಕೆ ಆದ್ಯತೆ ನೀಡಿದ್ದು, ಸಮಾಜಪರ ಸಂಘಟನೆಗಳು ಬಡವರ ಕನಸು ಕಟ್ಟುವ ಕಾರ್ಯಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀರಾಮುಲು ಅಭಿಮಾನಿ ಬಳಗದ ಅಧ್ಯಕ್ಷ ಅನಿಲ ಮೆಣಸಿನಕಾಯಿ ಮಾತನಾಡಿ, ಸ್ವಕಷ್ಟಗಳನ್ನು ಮರೆತು ಸಾಮಾನ್ಯನ ಸಮಸ್ಯೆಗಳಿಗೆ ಸ್ಪಂದಿಸಿ ಸಮಾಜದ ಋಣ ತೀರಿಸುವ ಕಾರ್ಯದಿಂದ ಸಮಾಜದಲ್ಲಿ ಉತ್ತಮ ಜನಪ್ರತಿನಿಧಿಯಾಗಿ ಪ್ರಚಲಿತವಾಗಿರುವ ಶ್ರೀರಾಮುಲು ಅವರ ನಿಸ್ವಾರ್ಥ ಸೇವೆಯನ್ನು ಸಮಾಜ ಗುರುತಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ 15 ಜೋಡಿ ಮುಸ್ಲಿಂ ಸಮಾಜ ಬಾಂಧವರ ನಿಖಾಃ ಸೇರಿದಂತೆ ಒಟ್ಟು 555 ಜೋಡಿ ಸರ್ವಧರ್ಮೀಯರ ಸಾಮೂಹಿಕ ವಿವಾಹಗಳು ವಿಜೃಂಭಣೆಯಿಂದ ಜರುಗಿದವು.
ಹೊಸಳ್ಳಿ ಸಂಸ್ಥಾನಮಠದ ಬೂದೀಶ್ವರ ಶ್ರೀಗಳು, ಬಿಎಸ್ಆರ್ ಕಾಂಗ್ರೆಸ್ ಪಾರ್ಲಿಮೆಂಟರಿ ಬೋರ್ಡ್ ಸದಸ್ಯ ಮೌಲಾನಾ ಅಬುತಾಲೀಬ್ ರೆಹಮಾನಿ, ಬಿಎಸ್ಆರ್ ವಕ್ತಾರ ವೈ.ಎನ್. ಗೌಡರ, ಸಣ್ಣವೀರಪ್ಪ ಹಳ್ಳೆಪ್ಪನವರ, ನಗರಸಭೆ ಸದಸ್ಯ ಮಂಜುನಾಥ ಮುಳಗುಂದ ಮಾತನಾಡಿದರು.
ಬಳಗಾನೂರಿನ ಶಿವಶಾಂತವೀರ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಸೊರಟೂರು ಹಿರೇಮಠದ ಫಕ್ಕೀರೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವಿಪ ಸದಸ್ಯ ಮೃತ್ಯುಂಜಯ ಜಿನಗಾ, ರಾಯಚೂರು ಸಂಸದ ಸಣ್ಣಪಕೀರಪ್ಪ, ಮಾಜಿ ಶಾಸಕ ಎಸ್.ಎನ್. ಪಾಟೀಲ, ಮೌಲಾನಾ ಮಾನ್ವಿ, ಎಸ್.ಟಿ. ಮೇಲಗಿರಿ, ಬಸಣ್ಣ ಮಲ್ಲಾಡದ, ಸಿರಾಜ ಬಳ್ಳಾರಿ, ನವೀನ ಗುಳಗಣ್ಣವರ, ಎಸ್.ಬಿ. ಸಂಕಣ್ಣವರ, ನಗರಸಭೆ ಸದಸ್ಯ ಸಂತೋಷ ಮೇಲಗಿರಿ, ರಾಘವೇಂದ್ರ ಯಳವತ್ತಿ, ನಾಗಲಿಂಗಪ್ಪ ಐಲಿ, ಶ್ರೀನಿವಾಸ ಕರಿ, ಚಿನ್ನವ್ವ ಮುಳಗುಂದ, ಜಯಶ್ರೀ ಬೈರವಾಡೆ ಮುಂತಾದವರು ಪಾಲ್ಗೊಂಡಿದ್ದರು.
ಮಂಜರಿ ಹೊಂಬಾಳಿ ಪ್ರಾರ್ಥಿಸಿದರು. ಪ್ರೊ. ಕೆ.ಎಚ್. ಬೇಲೂರು ಸ್ವಾಗತಿಸಿದರು. ಸಿದ್ದಾಪುರ ಶಾಸ್ತ್ರಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

