ಗದಗ

ಗಜೇಂದ್ರಗಡ ಜನರ ಕನಸು ಭಗ್ನ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಅ. 23
ಈ ಭಾಗದ ಜನತೆಯ ದಶಕದ ಕನಸಿನ ರೈಲು ಯೋಜನೆಯಾಗಿದ್ದ ಗದಗ-ವಾಡಿ ರೈಲು ಮಾರ್ಗವೀಗ ಬದಲಾಗಿದೆ. ಇದರಿಂದಾಗಿ ಈ ಭಾಗದಲ್ಲಿ ರೈಲು ಸಂಚರಿಸುವ ಕನಸು ಹೊತ್ತಿದ್ದ ಜನರಿಗೆ ಕೇಂದ್ರ ರೇಲ್ವೆ ಇಲಾಖೆ ತಣ್ಣೀರೆರಚಿದ್ದು, ಈಗ ರೈಲು ಸೇವೆಗೆ ಜನ ಮತ್ತೊಂದು ಪಕ್ಷಾತೀತ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.
ಆಂಗ್ಲರು ಹಾಗೂ ನಿಜಾಮರ ಕಾಲದಿಂದಲೂ ನೆನೆಗುದಿಗೆ ಬಿದ್ದಿರುವ ಗಜೇಂದ್ರಗಡ ಮಾರ್ಗವಾಗಿ ತೆರಳಬೇಕಿದ್ದ ಗದಗ-ವಾಡಿ ರೈಲು ಮಾರ್ಗವನ್ನು ಗದಗದಿಂದ ಅಡವಿಸೋಮಾಪುರ, ಮಂಡಲಗೇರಿ, ಕೊಪ್ಪಳ ಜಿಲ್ಲೆ, ಕುಕನೂರು, ಸಂಗನಾಳ, ಯಲಬುರ್ಗಾ, ಯಾದಗಿರಿ, ಗುಲ್ಬರ್ಗ, ಶಹಪುರ, ಸುರಪುರ ಮಾರ್ಗವಾಗಿ ವಾಡಿ ತಲುಪುವಂತೆ ಮಾರ್ಗ ಬದಲಿಸಲಾಗಿದೆ. ಹಳೆಯ ಸರ್ವೇ ಪ್ರಕಾರ ಗಜೇಂದ್ರಗಡ ಮಾರ್ಗವಾಗಿ ಸಂಚರಿಸುವ ಗದಗ-ವಾಡಿ ರೈಲು ಮಾರ್ಗಕ್ಕೆ ಕತ್ತರಿ ಹಾಕಿ ಹೊಸ ಸರ್ವೇ ಪ್ರಕಾರ ಗಜೇಂದ್ರಗಡ ಕೈ ಬಿಟ್ಟಿರುವುದು ಈ ಭಾಗದ ಜನತೆಗೆ ಕೇಂದ್ರ ರೇಲ್ವೆ ಇಲಾಖೆ ತೀವ್ರ ನಿರಾಶೆಯನ್ನುಂಟು ಮಾಡಿದೆ.
ಜಿಲ್ಲೆಯ ಮುಖ್ಯ ವಾಣಿಜ್ಯ ನಗರಿ ಖ್ಯಾತಿಯ ಗಜೇಂದ್ರಗಡದಿಂದ ಕೇವಲ ಒಂಭತ್ತು ಕಿಮೀ ಹತ್ತಿರ ಸಂಚರಿಸುವ ರೈಲು ಮಾರ್ಗವನ್ನು ಕೊಂಚ ಬದಲಾವಣೆ ಮಾಡಿ ಗಜೇಂದ್ರಗಡ ಮೂಲಕ ಹಾದು ಹೋಗುವ ರೀತಿಯಲ್ಲಿ ಜತೆಗೆ 25 ವರ್ಷಗಳ ಹಿಂದೆ ನಡೆಸಿದ ಸರ್ವೇ ಪ್ರಕಾರ ರೈಲು ಮಾರ್ಗ ಅನುಷ್ಠಾನಗೊಳಿಸಿದಲ್ಲಿ ಗಜೇಂದ್ರಗಡ ವಾಣಿಜ್ಯ, ವ್ಯಾಪಾರ ಕ್ಷೇತ್ರದಲ್ಲಿ ಬೆಳವಣಿಗೆಯಾಗಲಿದೆ ಎನ್ನುವುದು ತಜ್ಞರ ಅಭಿಮತ. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರದ ಯೋಜನೆಗಳು ದೊರಕದೆ ಈ ಭಾಗದ ಜನತೆಗೆ ಘೋರ ಅನ್ಯಾಯವಾಗುತ್ತಿದೆ ಎಂಬುದು ನಾಗರಿಕರ ದೂರಾಗಿದೆ.
ಕೈಗಾರಿಕೆಗೆ ರೈಲು ಯೋಜನೆ ಅಗತ್ಯ: ಗಜೇಂದ್ರಗಡ ಪಟ್ಟಣ ನೇಕಾರಿಕೆಯ ಮುಖ್ಯ ಕೇಂದ್ರವಾಗಿದೆ. ಅಲ್ಲದೆ, ಗಜೇಂದ್ರಗಡದಿಂದ 35 ಕಿಮೀ ಅಂತರದಲ್ಲಿರುವ ಗ್ರಾನೈಟ್ ನಗರವೆಂದೇ ಹೆಸರಾದ ಇಲಕಲ್ ಸೇರಿದಂತೆ ಸುತ್ತಲೂ ಅಂದಾಜು ನೂರಾರು ಕೈಗಾರಿಕೆಗಳಿವೆ. ಅದರಲ್ಲೂ ಮುಖ್ಯವಾಗಿ ಇಲಕಲ್ ಗ್ರಾನೈಟ್ ಉದ್ಯಮ ವಿದೇಶದಲ್ಲೂ ಹೆಚ್ಚು ಬೇಡಿಕೆಯುಳ್ಳದ್ದಾಗಿದೆ. ಅಲ್ಲದೆ ಗಜೇಂದ್ರಗಡದಲ್ಲಿ ತಯಾರಾಗುವ ಸೀರೆ ಖಣಗಳು ಮಹಾರಾಷ್ಟ್ರದ ಪುಣಾ, ಔರಂಗಬಾದ್, ನಾಸೀಕ್, ಮುಂಬೈನಂತಹ ಪಟ್ಟಣಗಳಲ್ಲಿ ಪ್ರಸಿದ್ಧಿ ಪಡೆದಿವೆ.
ವರ್ತಕರಿಗೆ ಆಘಾತ: ದೇಶದ ತುಂಬೆಲ್ಲ ವಾಣಿಜ್ಯ ವಹಿವಾಟಿನಲ್ಲಿ ತೊಡಗಿರುವ ಗಜೇಂದ್ರಗಡಕ್ಕೆ ರೈಲು ಯೋಜನೆ ಅವಶ್ಯವಿದೆ. ಜತೆಗೆ ರೇಲ್ವೆ ಇಲಾಖೆಗೆ ಹೇಳಿ ಮಾಡಿಸಿದ ಆದಾಯದ ತಾಣವಾಗಿದೆ. ಇಷ್ಟೆಲ್ಲ ಅರ್ಹತೆ ಹೊಂದಿದ ಗಜೇಂದ್ರಗಡ ಪಟ್ಟಣಕ್ಕೆ ರೈಲು ಮಾರ್ಗ ತಪ್ಪಿರುವುದು ಈ ಭಾಗದ ವರ್ತಕರಿಗೆ ಆಘಾತವಾಗಿದೆ. ಆದರೆ, ರೇಲ್ವೆ ಯೋಜನೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ಇನ್ನೂ ಕಾಲ ಮಿಂಚಿಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾದರೆ, ಆಗಿರುವ ಅನ್ಯಾಯದ ವಿರುದ್ಧ ಮತ್ತು ಯೋಜನೆ ಲಾಭ ಪಡೆಯಲು ಜನ ಮತ್ತು ಸುತ್ತಲಿನ ಗ್ರಾಮಗಳ ಸಂಘ, ಸಂಸ್ಥೆಗಳು ತಾಲೂಕು ಕೇಂದ್ರ ಹೋರಾಟ ಮಾದರಿಯಲ್ಲೇ ಮತ್ತೆ ಹೋರಾಟ ನಡೆಸಿದರೆ ರೇಲ್ವೆ ಯೋಜನೆ ಪಡೆದುಕೊಳ್ಳಲು ಸಾಧ್ಯ ಎನ್ನುವುದು ಹೋರಾಟಗಾರರ ಅಭಿಪ್ರಾಯವಾಗಿದೆ.

ಗಜೇಂದ್ರಗಡಕ್ಕೆ ರೇಲ್ವೆ ಸಂಪರ್ಕ ಕಲ್ಪಿಸಲು ದಶಕದ ಹಿಂದೆಯೇ ಅಂದಿನ ಕೇಂದ್ರ ರೇಲ್ವೆ ಸಹಾಯಕ ಸಚಿವ ಕೆ.ಎಚ್. ಮುನಿಯಪ್ಪನವರಿಗೆ ಮತ್ತು ಸೌತ್‌ವೆಸ್ಟರ್ನ್ ರೇಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಅದರಂತೆ ಗದಗ-ವಾಡಿ ರೈಲು ಮಾರ್ಗದ ನೀಲ ನಕ್ಷೆಯಲ್ಲಿ ಗಜೇಂದ್ರಗಡ ಮಾರ್ಗ ಸೇರ್ಪಡೆಗೊಳಿಸಿತ್ತು. ಆದರೆ, ಇತ್ತೀಚಿನ ರೈಲು ಮಾರ್ಗದ ನಕ್ಷೆಯಲ್ಲಿ ಗಜೇಂದ್ರಗಡ ಮಾರ್ಗ ಕೈಬಿಟ್ಟಿರುವುದು ನೋವಿನ ಸಂಗತಿ
-ಅಶೋಕ ಬಾಗಮಾರ,
ಆಯುರ್ವೇದಿಕ್ ಮೆಡಿಕಲ್ ಕಾಲೇಜು ಅಸೋಸಿಯೇಶನ್‌ನ ರಾಷ್ಟ್ರೀಯ ಅಧ್ಯಕ್ಷ

ಜಿಲ್ಲೆಯ ಮುಖ್ಯ ವಾಣಿಜ್ಯ ಪಟ್ಟಣವಾದ ಗಜೇಂದ್ರಗಡ ಭಾಗಕ್ಕೆ ರೇಲ್ವೆ ಸಂಪರ್ಕ ಅತಿ ಅವಶ್ಯವಿದೆ. ಈ ಕುರಿತು ಹಲವಾರು ಬಾರಿ ದಕ್ಷಿಣ ಮಧ್ಯ ರೇಲ್ವೆ ಇಲಾಖಾಧಿಕಾರಿಗಳಿಗೆ ಇಲ್ಲಿನ ಭೌಗೋಳಿಕ ವಾಸ್ತವಾಂಶ ಮನವರಿಕೆ ಮಾಡುವುದರ ಜತೆಗೆ ಮನವಿ ಸಲ್ಲಿಸಲಾದ ಪ್ರಯುಕ್ತ ಗದಗ-ವಾಡಿ ರೈಲು ಮಾರ್ಗದಲ್ಲಿ ಗಜೇಂದ್ರಗಡ ಸೇರ್ಪಡೆಗೊಂಡಿತ್ತು. ಆದರೆ, ಇತ್ತೀಚಿಗೆ ರೇಲ್ವೆ ಇಲಾಖೆ ಸಿದ್ಧಪಡಿಸಿದ ನೀಲನಕ್ಷೆಯಲ್ಲಿ ಗಜೇಂದ್ರಗಡ ಕೈಬಿಟ್ಟಿರುವುದು ಈ ಭಾಗದ ಪ್ರಯಾಣಿಕರಿಗೆ ಬೇಸರ ಮೂಡಿಸಿದೆ. ಕೂಡಲೇ ರೇಲ್ವೆ ಇಲಾಖೆ ಮರು ಸರ್ವೇ ನಡೆಸಿ ಗಜೇಂದ್ರಗಡಕ್ಕೆ ರೈಲು ಮಾರ್ಗ ಕಲ್ಪಿಸದಿದ್ದಲ್ಲಿ ಪಕ್ಷಾತೀತ ಹೋರಾಟ ಅನಿವಾರ್ಯ.
-ಬಸವರಾಜ ಶೀಲವಂತರ
ಭಾರತ್ ಪ್ರಜಾಸತ್ತಾತ್ಮಕ ಯುವಜನ ಫೇಡರೇಶನ್‌ನ ತಾಲೂಕಾಧ್ಯಕ್ಷ

-ಡಿ.ಜಿ. ಮೋಮಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.