ಗದಗ

ಶರಣರು ಕಾಯಕದಲ್ಲೇ ದೇವರ ಕಂಡವರು

Published On :

ಕನ್ನಡಪ್ರಭ ವಾರ್ತೆ, ಗದಗ, ಅ. 25
ಮಹಿಳೆಗೆ ಸಮಾನ ಸ್ಥಾನಮಾನ ದೊರಕಿಸಿ, ಆದರ್ಶ ಸಮಾಜ ನಿರ್ಮಿಸಿ ಸ್ವಾಭಿಮಾನದ ಅರಿವನ್ನು ಮೂಡಿಸಿದ ಹೆಗ್ಗಳಿಕೆ ಶರಣ, ಶರಣೆಯರಿಗೆ ಸಲ್ಲುವುದು ಎಂದು ಶಿರಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಹಾಗೂ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ.ಎ. ಬಳಿಗೇರ ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ಅಡವೀಂದ್ರ ಶ್ರೀಗಳ ಮಠದಲ್ಲಿ ಈಚೆಗೆ ಜರುಗಿದ ಗದಗ ತಾಲೂಕು ಕದಳಿ ಮಹಿಳಾ ವೇದಿಕೆಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರೊ. ಬಿ.ಎನ್. ತಾರಾ ಅವರ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಲ್ಯಾಣದ ಶರಣ, ಶರಣೆಯರು ಕಾಯಕವೇ ಕೈಲಾಸ ಎಂಬುವುದನ್ನು ಅರಿತು ಕಾಯಕದಲ್ಲೇ ದೇವರನ್ನು ಕಂಡ ಮಹಾನುಭಾವರು. ಕದಳಿ ವೇದಿಕೆ ಕ್ರಿಯಾಶೀಲತೆಯೊಂದಿಗೆ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದ ಅವರು, ಶರಣ-ಶರಣೆಯರ ವಿಚಾರಗಳನ್ನು ಮನೆ ಮನಕ್ಕೆ ತಲುಪಿಸುವ ಕೆಲಸವನ್ನು ವೇದಿಕೆ ನಿರಂತರವಾಗಿ ಮಾಡಲಿ. ಶ್ರೀಮಂತ ಮತ್ತು ಸಮೃದ್ಧವಾಗಿರುವ ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರೇಮಾ ಬಿಂಕದಕಟ್ಟಿ, ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅ.ಓಂ. ಪಾಟೀಲರು ಮಾತನಾಡಿದರು. ಗದುಗಿನ ಕೆ.ಎಲ್.ಇ ಮಹಿಳಾ ಮಹಾವಿದ್ಯಾಲಯದ ಉಪನ್ಯಾಸಕಿ ಪ್ರೊ. ಬಿ.ಎನ್. ತಾರಾ ಅವರು ಬರೆದ ವಿಚಾರ ತರಂಗ ಹಾಗೂ ಮೌನಗೀತೆ ಪುಸ್ತಕಗಳನ್ನು ಸಾಹಿತಿ ಕೆ.ಎ. ಬಳಿಗೇರ ಬಿಡುಗಡೆಗೊಳಿಸಿದರು. ನಂತರ ಕಾವ್ಯ ಪ್ರಕಾಶನ ಪರವಾಗಿ ಪ್ರೊ. ತಾರಾ ಅವರನ್ನು ಸನ್ಮಾನಿಸಲಾಯಿತು.  ಸಾನ್ನಿಧ್ಯವಹಿಸಿದ್ದ ಮಹೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಫಕ್ಕೀರೇಶ ಅಕ್ಕಿ, ಶಿಲ್ಪಾ ಪಾಟೀಲ, ಶ್ರೀದೇವಿ ಪಾಟೀಲ, ಅನ್ನಪೂರ್ಣಮ್ಮ ವರವಿ, ಡಾ. ಕೆ. ಯೋಗೇಶನ್, ಡಾ. ಶರಣಬಸವ ವೆಂಕಟಾಪುರ, ಎಂ.ಎಸ್. ನರೇಗಲ್, ಡಾ. ಜಯಶ್ರೀ ಪಾಟೀಲ, ಪ್ರೊ. ಕೆ.ಎಚ್.ಬೇಲೂರ, ಕೆ.ಐ. ಶೇಖ, ಬಿ.ಎಂ. ಬಿಳೆಯಲಿ, ಉಳವಪ್ಪ ಹೊಂಬಳ, ವಿ.ಕೆ. ಮಟ್ಟಿ, ಅ.ದ. ಕಟ್ಟಿಮನಿ, ಎಸ್.ಎಸ್. ಪಾಟೀಲ, ವೃಷಾಂಕ, ಮಹಾನಂದ ಕೊಣ್ಣೂರ ಮುಂತಾದವರು ಉಪಸ್ಥಿತರಿದ್ದರು. ಗದಗ ತಾಲೂಕ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಕವಿತಾ ದಂಡಿನ ಸ್ವಾಗತಿಸಿದರು. ಶಿವಲಿಂಗಯ್ಯಶಾಸ್ತ್ರೀ ಸಿದ್ದಾಪುರ ನಿರೂಪಿಸಿದರು. ಆಶಾ ಪಟ್ಟಣಶೆಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.