ಸತತ ಮಳೆಗೆ ಕೊಳೆಯುತ್ತಿದೆ ಬೆಳೆ
ಕನ್ನಡಪ್ರಭ ವಾರ್ತೆ, ಗದಗ, ಅ. 25
3 ದಿನಗಳಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಹಿಂಗಾರು ಬಿತ್ತನೆ ದೃಷ್ಟಿಯಿಂದ ಅನುಕೂಲಕರವಾಗಿದ್ದರೆ, ಸದ್ಯ ಕಟಾವಿಗೆ ಬಂದಿರುವ ಈರುಳ್ಳಿ, ಶೇಂಗಾ, ಹೂ ಬಿಡುವ ಹಂತದಲ್ಲಿರುವ ಸೂರ್ಯಕಾಂತಿ, ಕಾಯಿ ಬಿಡುವ ಹಂತದಲ್ಲಿರುವ ಮೆಣಸಿನಕಾಯಿ ಬೆಳೆಗೆ ಸಾಕಷ್ಟು ತೊಂದರೆದಾಯಕವಾಗಿ ಪರಿಣಮಿಸಿದೆ.
ಒಮ್ಮಿಲೇ ಸುರಿಯುತ್ತಿರುವ ಮಳೆಯಿಂದ ಉಂಟಾದ ಅತಿಯಾದ ತೇವಾಂಶದಿಂದ ಬೆಳೆಗಳು ಕೊಳೆಯುತ್ತಿವೆ. ಜಿಲ್ಲೆಯ ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾದ ಕಡಲೆ ಹಾಗೂ ಮುಖ್ಯ ಆಹಾರ ಧಾನ್ಯದ ಬೆಳೆಗಳಾದ ಜೋಳ, ಗೋದಿಯನ್ನು ಬಿತ್ತನೆ ಮಾಡಲು ಇದು ಸಕಾಲ. ಆದರೆ, ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ರೈತರು ಬಿತ್ತನೆ ಮಾಡುವುದಿರಲಿ, ಹೊಲದಲ್ಲಿ ನಡೆದಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಈಗಾಗಲೇ ಬಿತ್ತನೆಯಾಗಿರುವ ಕಡಲೆ ಹಾಗೂ ಸೂರ್ಯಕಾಂತಿ ಬೆಳೆಗಳಿಗೂ ಅತಿಯಾದ ತೇವಾಂಶ ಕಂಟಕವಾಗಲಿದೆ.
2 ಲಕ್ಷ ಹೆಕ್ಟೇರ್ಗೂ ಅಧಿಕ ಬಿತ್ತನೆ: ಜಿಲ್ಲಾ ಕೃಷಿ ಇಲಾಖೆಯ ಮಾಹಿತಿ ಆಧಾರದಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ 2 ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷಿಸಲಾಗಿದೆ. ಈಗಾಗಲೇ 1 ಲಕ್ಷ 79 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ಬಿತ್ತನೆಯಾಗಿದ್ದು, ಇನ್ನುಳಿದ ಪ್ರದೇಶದಲ್ಲಿನ ಬಿತ್ತನೆ ಕಾರ್ಯಕ್ಕೆ ರೈತರು ತುದಿಗಾಲಲ್ಲಿ ನಿಂತಿದ್ದು, ಮಳೆ ಮಾತ್ರ ಇದಕ್ಕೆ ಅವಕಾಶ ಕೊಡದೇ ಇರುವುದರಿಂದ ರೈತರಲ್ಲಿ ಕೊಂಚ ಮಟ್ಟಿಗೆ ಬೇಸರಕ್ಕೆ ಕಾರಣವಾಗಿದೆ.
ಯರಿಭೂಮಿ ಹೊಂದಿದ ರೈತರಿಗೆ ಹೆಚ್ಚಿನ ಸಮಸ್ಯೆ: ನಿರೀಕ್ಷಿತ ಪ್ರಮಾಣಕ್ಕಿಂತಲೂ ಹೆಚ್ಚಿನ ಮಳೆ ಯರಿಭೂಮಿ ಹೊಂದಿರುವ ರೈತರಿಗೆ ಸಾಕಷ್ಟು ತೊಂದರೆದಾಯಕವಾಗಿದೆ. ಜಿಲ್ಲೆಯ ಒಟ್ಟು ಕೃಷಿ ಭೂಮಿಯ ಶೇ. 58ರಷ್ಟು ಪ್ರದೇಶ ಯರಿಮಣ್ಣಿನಿಂದಲೇ ಕೂಡಿದ್ದು, ಹೀಗಾಗಿಯೇ ಜಿಲ್ಲೆಯಲ್ಲಿ ಈರುಳ್ಳಿ ಬಿತ್ತನೆಯ ಪ್ರಮಾಣ ಹೆಚ್ಚಾಗುತ್ತದೆ. ಇದರೊಟ್ಟಿಗೆ ಮಾರುಕಟ್ಟೆಯಲ್ಲಿ ಸದ್ಯ ಈರುಳ್ಳಿಗೆ ಉತ್ತಮ ಬೆಲೆ ಇರುವುದರಿಂದ ರೈತರು ಅವುಗಳನ್ನು ಕಿತ್ತು ಮಾರಾಟ ಮಾಡಬೇಕು ಎನ್ನುವ ತವಕದಲ್ಲಿದ್ದಾರೆ. ಆದರೆ, ಮಳೆರಾಯ ಮಾತ್ರ ಅದಕ್ಕೆ ಅವಕಾಶವನ್ನೇ ನೀಡುತ್ತಿಲ್ಲ. ಮಳೆ ಸಂಪೂರ್ಣ ನಿಂತ ಒಂದು ವಾರದ ನಂತರ ಈರುಳ್ಳಿ ಕೀಳಲು ಬರುವುದರಿಂದ, ಉತ್ತಮ ಬೆಲೆ ಪಡೆಯಬೇಕೆನ್ನುವ ತವಕದಲ್ಲಿದ್ದ ರೈತರಲ್ಲಿ ಆತಂಕ ಶುರುವಾಗಿದೆ.
ಎಲ್ಲ ಬೆಳೆಗೂ ತೊಂದರೆ: ಕೇವಲ ಈರುಳ್ಳಿ ಮಾತ್ರವಲ್ಲ, ಸೂರ್ಯಕಾಂತಿ, ಮೆಣಸಿನಕಾಯಿ, ಹತ್ತಿ, ತೊಗರಿ ಸೇರಿದಂತೆ ಈಗಾಗಲೇ ಬಿತ್ತನೆಯಾಗಿರುವ ಪ್ರತಿಯೊಂದು ಬೆಳೆಗಳು ಇಂದು ಅತಿಯಾದ ತೇವಾಂಶದ ತೊಂದರೆ ಅನುಭವಿಸುತ್ತಿದ್ದು, ಸೂರ್ಯಕಾಂತಿ ಹಾಗೂ ಮೆಣಸಿನಕಾಯಿ ಬೆಳೆಗಳಿಗೂ ಹೆಚ್ಚಿನ ಹಾನಿಯಾಗಲಿದೆ. ಇನ್ನು ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯ ಕೊಳವೆಬಾವಿ ಆಧಾರಿತವಾಗಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಬಿತ್ತನೆಯಾಗಿದ್ದು, ಅವುಗಳಿಗೂ ಮಳೆರಾಯ ಸಮಸ್ಯೆಯ ಮೇಲೆ ಸಮಸ್ಯೆ ಸೃಷ್ಟಿಸುತ್ತಿದ್ದಾನೆ.
- ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

