ಧಾರಾಕಾರ ಮಳೆ: ಅಪಾರ ಬೆಳೆ ಹಾನಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಅ. 26
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕಳೆದ ರಾತ್ರಿ (ಶುಕ್ರವಾರ) ಸತತ ಸುರಿದ ಮಳೆಗೆ ಅಪಾರ ಪ್ರಮಾಣದ ಆಸ್ತಿ, ಬೆಳೆಹಾನಿ ಸಂಭವಿಸಿದೆ.
ಸತತ ಬರಗಾಲದಿಂದ ತತ್ತರಿಸಿದ್ದ ಜನತೆಗೆ ಈ ವರ್ಷದ ಮುಂಗಾರು ಹಂಗಾಮಿನ ಮಳೆಯು ಕೈಕೊಟ್ಟ ಹಿನ್ನೆಲೆಯಲ್ಲಿ ನಿರಾಶೆಯಿಂದ ಇದ್ದ ಜನತೆಗೆ ವರುಣ ಕೃಪೆ ತೋರಿದ್ದಾನೆ. ಆದರೆ ಬಿಟ್ಟು ಬಿಡದೇ ಸುರಿದ ಭಾರಿ ಮಳೆಯಿಂದಾಗಿ ಮುಂಗಾರಿ ಹಂಗಾಮಿನಲ್ಲಿ ಬಿತ್ತಿದ್ದ ಸಜ್ಜಿ, ಗೋವಿನಜೋಳ, ಸೂರ್ಯಕಾಂತಿ ಬೆಳೆ ಇನ್ನೇನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಫಸಲು ನೆಲಕ್ಕುರುಳಿದ ಪರಿಣಾಮ ರೈತರಿಗೆ ಅಪಾರ ನಷ್ಟ ಸಂಭವಿಸಿದೆ.
ಧಾರಾಕಾರ ಮಳೆಗೆ ಸಮೀಪದ ಕೊಡಗಾನೂರ ಗ್ರಾಮದ ಮಲ್ಲಯ್ಯ ಬಣ್ಣದಮಠ, ಚಂದ್ರಶೇಖರಯ್ಯ ಹಿರೇಮಠ, ಮಂಜುನಾಥ ಹೂಗಾರ, ಮೂರ್ತೆಪ್ಪ ಕುಲಕರ್ಣಿ, ನಾಗಯ್ಯ ಹಿರೇಮಠ, ನಾಗವ್ವ ನಡಕಟ್ಟಿನ, ಯಲ್ಲಪ್ಪ ರಾಮಜಿ, ಕಲ್ಲೂರಪ್ಪ ರಾಮಜಿ ಸೇರಿದಂತೆ ಹಲವಾರು ಜನರ ಮನೆಗಳು ಕುಸಿದಿವೆ. ಜತೆಗೆ ಗ್ರಾಮದ ವೀರಭದ್ರೇಶ್ವರ ದೇಗುಲ ಕಟ್ಟಡ ಕುಸಿದಿದೆ. ನೂರಾರು ಎಕರೆ ಜಮೀನು ಸಂಪೂರ್ಣ ನೀರಿನಿಂದ ಜಲಾವೃತಗೊಂಡಿದೆ. ಇದರಿಂದ ಜನತೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ, ಯಾವೊಬ್ಬ ಜನಪ್ರತಿನಿಧಿಯು ನಮ್ಮ ನೆರವಿಗೆ ಬಂದಿಲ್ಲ ಎಂದು ಗ್ರಾಮಸ್ಥರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಯಿಂದ ತೀವ್ರ ತೊಂದರೆಗೀಡಾದ ಕೊಡಗಾನೂರ ಗ್ರಾಮಕ್ಕೆ ಶನಿವಾರ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಮಳೆಗೆ ಹಾನಿಯಾದ ಮನೆಗಳ ಹಾಗೂ ಬೆಳೆಗಳ ಸಮೀಕ್ಷೆ ನಡೆಸಿದರು. ಇನ್ನೊಂದೆಡೆ ಮನೆ ಕುಸಿತದಿಂದ ಕಂಗಾಲಾದ ಕುಟುಂಬಗಳು ರಸ್ತೆಯಲ್ಲೇ ಅಡುಗೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

