ಮಹಿಳೆ ಸುಶಿಕ್ಷಿತಳಾದರೆ ದೇಶಾಭಿವೃದ್ಧಿ
ಕನ್ನಡಪ್ರಭ ವಾರ್ತೆ, ರೋಣ, ಅ. 26
ಮಹಿಳೆಯರಿಗೆ ಯೋಗ್ಯ ಶಿಕ್ಷಣ ದೊರಕಿದಲ್ಲಿ ಕುಟುಂಬ ಮತ್ತು ಸಮಾಜದ ಏಳ್ಗೆಯಾಗುವುದರೊಂದಿಗೆ ದೇಶದ ಆರ್ಥಿಕ ಪ್ರಗತಿಯಾಗುತ್ತಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಜಣ್ಣ ಹೂಲಿ ಹೇಳಿದರು.
ಅವರು ಗುರುವಾರ ಪಟ್ಟಣದ ಪ್ರಿಯದರ್ಶಿನಿ ಸಂಸ್ಥೆಯ ಕಾರ್ಯಾಲಯದಲ್ಲಿ ಪ್ರಿಯದರ್ಶಿನಿ ಸ್ವಯಂ ಉದ್ಯೋಗ ತರಬೇತಿ ಹಾಗೂ ಗ್ರಾಮೀಣ ಸೇವಾ ಸಂಸ್ಥೆ ರೋಣ, ನಬಾರ್ಡ್ ಹಾಗೂ ಶರಣಬಸವೇಶ್ವರ ಜಲಾನಯನ ಸಮಿತಿ ಕುರಹಟ್ಟಿ ಸಂಯುಕ್ತವಾಗಿ ಕುರಹಟ್ಟಿ ಜಲಾನಯನ ವ್ಯಾಪ್ತಿಯಲ್ಲಿನ ಸ್ವ-ಸಹಾಯ ಗುಂಪುಗಳ ಫಲಾನುಭವಿಗಳಿಗೆ ಏರ್ಪಡಿಸಿದ್ದ ಹೊಲಿಗೆ ಮತ್ತು ಸಿದ್ಧ ಉಡುಪುಗಳ ತಯಾರಿಕೆಯ ಉಚಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಬಾರ್ಡ್ದಿಂದ ದೊರೆಯತಕ್ಕಂತಹ ವಿವಿಧ ತರಬೇತಿ ಸೌಲಭ್ಯಗಳನ್ನು ಪಡೆದುಕೊಂಡು, ಸ್ವಯಂ ಉದ್ಯೋಗ ಹೊಂದುವುದರ ಮೂಲಕ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಲ್ಲಿ ಶ್ರಮಿಸಬೇಕು. ಸರ್ಕಾರ ಸ್ವಯಂ ಸೇವಾ ಸಂಘಗಳು ಹಾಗೂ ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಸ್ವಾವಲಂಬನೆ ಉದ್ಯೋಗಕ್ಕಾಗಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಅವುಗಳ ಬಗ್ಗೆ ಸರಿಯಾದ ತಿಳಿವಳಿಕೆ ಹೊಂದಿ, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳನ್ನು ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ಕಳಿಸುತ್ತಿರುವುದು ವಿಷಾದನೀಯ. ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡುವ ಸಂಪ್ರದಾಯ ಈಗಲೂ ಹಳ್ಳಿಗಳಲ್ಲಿ ಪ್ರಚಲಿತದಲ್ಲಿದೆ. ಬಾಲ್ಯ ವಿವಾಹವನ್ನು ನಿಲ್ಲಿಸಿ ಹೆಣ್ಣು ಮಗುವಿಗೆ ಸೂಕ್ತ ಶಿಕ್ಷಣ ದೊರಕಿಸಿಕೊಡುವಲ್ಲಿ ಪಾಲಕರ ಕರ್ತವ್ಯ ಪ್ರಮುಖವಾಗಿದೆ. ಅದರಂತೆಯೇ ವಿವಿಧ ಸಂಸ್ಥೆ ಮತ್ತು ಸಂಘಟನೆಗಳು ಮಹಿಳಾ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು ಎಂದರು. ಜಲಾನಯನ ಸಮಿತಿ ಕಾರ್ಯದರ್ಶಿ ಮಹಾಂತಪ್ಪ ಗಂಡೂಡಿ ಮಾತನಾಡಿದರು. ಮಲ್ಲಪ್ಪ ಮಂಗಳಗುಡ್ಡ, ಜಗದೀಶ ಅಂಗಡಿ, ಅಕ್ಕಮ್ಮ ಸಕ್ಕರಗೌಡ್ರ, ನಿರ್ಮಲ ಈಟಿ ಮುಂತಾದವರು ಉಪಸ್ಥಿತರಿದ್ದರು. ಯೋಜನೆಯ ವ್ಯವಸ್ಥಾಪಕ ವಿಜಯ ಕುರಡಗಿ ಸ್ವಾಗತಿಸಿದರು. ಶಿವಪ್ಪ ಮಲ್ಲಾಪುರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

