ಗದಗ

ವಿರೂಪಾಕ್ಷಪ್ಪನವರ ಮರೆತ ಸರ್ಕಾರ

Published On :

ಡಿ.ಜಿ. ಮೋಮಿನ್
ಗಜೇಂದ್ರಗಡ: ನಾಡ ಹಬ್ಬ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ನಾಡಿನ ಎಲ್ಲ ಜನತೆ ತುದಿಗಾಲಲ್ಲೇ ನಿಂತಿದ್ದಾರೆ. ಆದರೆ, ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಹಗಲಿರಳು ಶ್ರಮಿಸಿ ಮಡಿದ ಸೂಡಿ ಗ್ರಾಮದ ಅಬ್ಬಿಗೇರಿ ವಿರೂಪಾಕ್ಷಪ್ಪರಂತಹ ಮಹನೀಯರ ಸಮಾಧಿ ಸ್ಥಳದಲ್ಲಿ ಸ್ಮಾರಕ ಜತೆಗೆ ಮೂರ್ತಿ ಸ್ಥಾಪನೆ ಕಾರ್ಯವಾಗದಿರುವುದು ಇಲ್ಲಿನ ಜನತೆಗೆ ಬೇಸರ ಮೂಡಿಸಿದೆ.
ವಿರೂಪಾಕ್ಷಪ್ಪ ಅಬ್ಬಿಗೇರಿಯವರು 1924 ಆಗಸ್ಟ್ 20ರಂದು ಸೂಡಿ ಗ್ರಾಮದಲ್ಲಿ ಜನಿಸಿದರು. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಸೂಡಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿರುವಾಗ ಅವರಲ್ಲಿ ರಾಷ್ಟ್ರೀಯ ಮನೋಭಾವ ಜಾಗ್ರತಗೊಂಡು ರಂಗರಾವ್ ದಿವಾಕರರ ಪ್ರಭಾವದಿಂದ ವಿದ್ಯಾರ್ಥಿ ದಿಸೆಯಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಧುಮುಕಿದರು. ಗಾಂಧೀಜಿಯವರ ಕರೆಯ ಮೇರೆಗೆ ರಂಗರಾವ್ ದಿವಾಕರ್ ವೈಯಕ್ತಿಕ ಸತ್ಯಾಗ್ರಹ ಆರಂಭಿಸಿದರು. 2ನೇ ಮಹಾಯುದ್ದ ವೇಳೆ ಗಾಂಧೀಜಿ ಹೇಳಿದ ಸಂಗತಿಗಳನ್ನು ಅಬ್ಬಿಗೇರಿಯವರು ಜನತೆಗೆ ತಮ್ಮ ಭಾಷಣ ಮೂಲಕ ತಿಳಿಸಿ ಸತ್ಯಾಗ್ರಹಕ್ಕೆ ಜನರನ್ನು ಅಣಿಗೊಳಿಸಿದರು. ಅದೇ ಸಮಯದಲ್ಲಿ ಕೊಲ್ಲಾಪುರ ರಾಜಾರಾಮ್ ಅವರನ್ನು ರೋಣಕ್ಕೆ ಕರೆಯಿಸಿ ತಾಲೂಕಿನಲ್ಲಿ ಸ್ವಾತಂತ್ರ್ಯ ಕಹಳೆ ಊದಿದರು.
1942 ಕ್ವಿಟ್ ಇಂಡಿಯಾ ಚಳವಳಿಯಲ್ಲಿ ರಾಷ್ಟ್ರಮುಖಂಡರಾದ ರಾಮಮನೋಹರ್ ಲೋಹಿಯಾ, ರಮಾನಂದ ರತ್, ಆಸಿಫ್ ಅಲಿ, ಆಫಾಖಾನ್ ಬಂಧಿಸಲ್ಪಟ್ಟ ಸುದ್ದಿ ಹರಡಿ ದೇಶಾದ್ಯಂತ ಚಳವಳಿ ಮತ್ತಷ್ಟು ತೀವ್ರಗೊಂಡಿತು. ಆಗ ನವಲಗುಂದ ತಾಲೂಕಿನ ಮೊರಬದಲ್ಲಿ ವಿರೂಪಾಕ್ಷಪ್ಪ ಅಬ್ಬಿಗೇರಿಯವರು ಮಾರುವೇಷ ಧರಿಸಿ ಕಜ್ಜಾಯ ಎತ್ತಿದ್ದರು ಎಂದು ಇತಿಹಾಸದಿಂದ ತಿಳಿಯುತ್ತದೆ.
ಚಳವಳಿಯಲ್ಲಿ ಪ್ರಮುಖ ಪಾತ್ರ: ವಿರೂಪಾಕ್ಷಪ್ಪ ಅಬ್ಬಿಗೇರಿ ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ ಚಳವಳಿ, ಗೋಕಾಕ ಚಳವಳಿ, ಸಮಾಜವಾದಿ ಚಳವಳಿಯಂತಹ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು 2010 ಆಗಸ್ಟ್ 20 ರಂದು ಸೂಡಿ ಸ್ವ-ಗ್ರಾಮದಲ್ಲಿ ನಿಧನ ಹೊಂದಿದ ಬಳಿಕ ಗ್ರಾಮದ ಬಸ್ ನಿಲ್ದಾಣ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಿತು. ಸರ್ಕಾರದ ಪರವಾಗಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಅಂದಿನ ರೋಣ ತಹಸೀಲ್ದಾರ್ ಜೆ.ಎಚ್. ನಾಗಹನುಮಯ್ಯಾ ಮತ್ತು ಗ್ರಾಪಂ ಆಡಳಿತ ವಿರೂಪಾಕ್ಷಪ್ಪನವರ ಸ್ಮಾರಕ ನಿರ್ಮಾಣ ಜತೆಗೆ ಮೂರ್ತಿ ಸ್ಥಾಪನೆ ಹಾಗೂ ಸ್ವಾತಂತ್ರ್ಯ ಯೋಧರ ಕಟ್ಟೆ ನಿರ್ಮಾಣದ ಭರವಸೆ ನೀಡಿದ್ದರು. ಆದರೆ ಯಾವುದೇ ಕಾರ್ಯವಾಗಿಲ್ಲ. ಅಗಲಿದ ನಾಯಕನಿಗೆ ಗೌರವಾದರಗಳು ಲಭಿಸದ ಪರಿಣಾಮ ಅವರ ಸಮಾಧಿ ಪಕ್ಕದಲ್ಲಿ ಚರಂಡಿ ನೀರು ಹರಿದು ಅವ್ಯವಸ್ಥೆಯ ಆಗರವಾಗಿರುವುದನ್ನು ಕಂಡು ಗ್ರಾಮದ ಯುವಕರು ಸೇರಿ ಸಮಾಧಿ ಕಟ್ಟೆ ನಿರ್ಮಿಸಿರುವುದನ್ನು ಹೊರತು ಪಡಿಸಿದರೆ ಯಾವುದೇ ಪ್ರಗತಿಯ ಕೆಲಸವಾಗಿಲ್ಲ. ಸರ್ಕಾರದಿಂದ ದೊರೆಯಬೇಕಾದ ಗೌರವಾದರ ಲಭಿಸದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.




ಹೋರಾಟಗಾರ ದಿ. ವಿರೂಪಾಕ್ಷಪ್ಪ ಅಬ್ಬಿಗೇರಿ ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ ಚಳವಳಿ, ಗೋಕಾಕ ಚಳವಳಿ ಹಾಗೂ ಸಮಾಜವಾದಿ ಚಳವಳಿಯಂತ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಾಡು, ನುಡಿ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಸಮಾಧಿ ಸ್ಥಳದಲ್ಲಿ ಸ್ಮಾರಕ ಜತೆಗೆ ಅವರ ಪುತ್ಥಳಿ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದ ತಾಲೂಕಾಡಳಿತ ಸ್ಮಾರಕ ನಿರ್ಮಾಣಕ್ಕೆ ಮುಂದಾಗದಿರುವುದು ಬೇಸರ ಸಂಗತಿ. ಈ ಕೂಡಲೇ ಎಚ್ಚೆತ್ತು ಅಗಲಿದ ಹೋರಾಟಗಾರರ ಸ್ಮಾರಕ ನಿರ್ಮಿಸಲು ಮುಂದಾಗದಿದ್ದರೆ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆಗೆ ಮುಂದಾಗುತ್ತೇವೆ.
ಟ ಕೆ.ಎಸ್. ಕೊಡತಗೇರಿ
ಕರವೇ ಜಿಲ್ಲಾ ಕಾರ್ಯಾಧ್ಯಕ್ಷ (ಶಿವರಾಮೇಗೌಡ್ರ ಬಣ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.