ಗಟಾರ ಸ್ವಚ್ಛಗೊಳಿಸಿ: ಪ್ರತಿಭಟನೆ
ರೋಣ: ತಾಲೂಕಿನ ಸವಡಿ ಗ್ರಾಮದಲ್ಲಿ ಹರಿಜನಕೇರಿ ಮತ್ತು ಮಲ್ಲಯ್ಯಜ್ಜನ ಗುಡಿ ಹತ್ತಿರದ ಹರನಶಿಕಾರಿ ಓಣಿಯಲ್ಲಿ ಗಟಾರ ಸ್ವಚ್ಛಗೊಳಿಸಬೇಕು ಎಂದು ಆಗ್ರಹಿಸಿ ಓಣಿಯ ನಿವಾಸಿಗಳು ಶನಿವಾರ ಪ್ರತಿಭಟನೆ ನಡೆಸಿದರು. ಸ್ಥಳೀಯ ನಿವಾಸಿ ಸಿದ್ದಪ್ಪ ಹುಣಸಿಮರದ ಮಾತನಾಡಿ, ಸವಡಿ ಗ್ರಾಮದಲ್ಲಿ ಸುವರ್ಣ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಇಲ್ಲಿ ಮಾತ್ರ ಯಾವುದೇ ಕಾಮಗಾರಿಯನ್ನು ಕೈಗೊಳ್ಳದೆ ಕಡೆಗಣಿಸಲಾಗಿದೆ. ಈ ಭಾಗದಲ್ಲಿ ಸಮರ್ಪಕ ಚರಂಡಿ ಇಲ್ಲದ ಕಾರಣ ನೀರು ಹರಿದು ಹೋಗುತ್ತಿಲ್ಲ. ಸುತ್ತಮುತ್ತಲಿನ ಪ್ರದೇಶದಲ್ಲೆಲ್ಲ ದುರ್ನಾತ ಬೀರುತ್ತಿದೆ. ಗಲೀಜು ನೀರು ನಿಲ್ಲುವ ಜಾಗದಲ್ಲೇ ಕುಡಿಯುವ ನೀರಿನ ನಳ ಅಳವಡಿಸಲಾಗಿದೆ. ಅಲ್ಲಿಂದಲೇ ನಿತ್ಯ ನೀರು ಸಂಗ್ರಹಿಸಿ ಕುಡಿಯುವದರಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಈ ಕುರಿತು ಗ್ರಾಪಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿಕೊಂಡಿದ್ದರೂ ಈ ವರೆಗೂ ಸಮಸ್ಯೆಗೆ ಸ್ಪಂದಿಸುವಲ್ಲಿ ಮುಂದಾಗಿಲ್ಲ ಎಂದು ಆರೋಪಿಸಿದರು.
ಗ್ರಾಪಂ ನಿಷ್ಕಾಳಜಿ: ನಮ್ಮ ಓಣಿ ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ. ಸಮರ್ಪಕ ರಸ್ತೆ, ಚರಂಡಿ ಮತ್ತು ಶುದ್ಧ ಕುಡಿವ ನೀರಿನ ವ್ಯವಸ್ಥೆ ಒದಗಿಸುವಲ್ಲಿ ಅಧಿಕಾರಿಗಳು ಮತ್ತು ಗ್ರಾಪಂ ನಿಷ್ಕಾಳಜಿ ತೋರುತ್ತಿದೆ. ಇದರಿಂದ ಇಲ್ಲಿ ವಾಸಿಸುವ ಕೂಲಿ ಕಾರ್ಮಿಕರ ಬದುಕು ನರಕಯಾತನೆಯಾಗಿದೆ. ಈ ಕುರಿತು ಗ್ರಾಪಂನಲ್ಲಿ ಒಮ್ಮೆಯೂ ಚರ್ಚೆಗೆ ಅವಕಾಶ ನೀಡಿಲ್ಲ. ಆದ್ದರಿಂದ ಸಂಬಂಧಪಟ್ಟ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಬಂದು ಪರಿಶೀಲಿಸಿ ಇಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು ಎಂದು ಮರಿಯಪ್ಪ ನಡುವಿನಮನಿ, ಮಳಸಿದ್ದಪ್ಪ ಹುನಸಿಮರದ, ರಾಘು ಹುನಸಿಮರದ, ಹರಿಜನ ಕೇರಿಯ ಮಹಿಳೆಯರು ಒತ್ತಾಯಿಸಿದರು.
ಪ್ರತಿಭಟನೆ ಎಚ್ಚರಿಕೆ: ಹರಿಜನ, ಬಡಜನ ಮತ್ತು ರೈತ ಕೂಲಿ ಕಾರ್ಮಿಕರು ಇಲ್ಲಿ ನಿತ್ಯ ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಹರಿಸದಿದ್ದಲ್ಲಿ ಮುಂಬರುವ ದಿನದಲ್ಲಿ ಸ್ಥಳೀಯ ಗ್ರಾಪಂಗೆ ಮುತ್ತಿಗೆ ಹಾಕಿ ಉಗ್ರ ಸ್ವರೂಪದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

