ಗದಗ

ಜಿಲ್ಲೆಯಲ್ಲಿ ಕಾಲು-ಬಾಯಿ ಬೇನೆ ಉಲ್ಬಣ

Published On :

ಕನ್ನಡಪ್ರಭ ವಾರ್ತೆ, ಗದಗ, ಅ. 29
ಕೆಲ ದಿನಗಳ ಹಿಂದೆ ದಕ್ಷಿಣ ಕರ್ನಾಟಕದಲ್ಲಿ ಜಾನುವಾರಿಗೆ ಬಂದೊದಗಿದ್ದ ಕಾಲು-ಬಾಯಿ ಬೇನೆ ಈಗ ಉತ್ತರ ಕರ್ನಾಟಕ ಸೇರಿದಂತೆ ಜಿಲ್ಲೆಯಲ್ಲೂ ನೂರಾರು ರಾಸುಗಳಿಗೆ ಕಾಣಿಸಿಕೊಂಡಿದ್ದು, ಇದರಿಂದ ರೈತ, ಪಶುಪಾಲಕರು ಕಂಗಾಲಾಗಿದ್ದು, ಹತೋಟಿಗೆ ಬೇಕಾದ ಕ್ರಮಗಳಿಗಾಗಿ ಹಾತೊರೆಯುತ್ತಿದ್ದಾರೆ.
ಗದಗ ಜಿಲ್ಲೆಯು ಹೈನುಗಾರಿಕೆ, ಕೃಷಿ ಚಟುವಟಿಕೆಗೆ ಹೆಸರು ಮಾಡಿದ ಜಿಲ್ಲೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದವರ ಸಂಖ್ಯೆಯೇ ಹೆಚ್ಚು. ಆದರೀಗ ಜಿಲ್ಲೆಯಲ್ಲಿಯೂ ಕೂಡ ಜಾನುವಾರುಗಳಿಗೆ ಕಾಲು-ಬಾಯಿ ಬೇನೆ ಕಂಡುಬರುತ್ತಿದ್ದು, ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಇಲಾಖೆ ಮಾಹಿತಿ ಪ್ರಕಾರ 80ಕ್ಕೂ ಹೆಚ್ಚು ಜಾನುವಾರು ಕಾಲು-ಬಾಯಿ ಬೇನೆಯಿಂದ ನರಳುತ್ತಿದ್ದು, ಇದರಲ್ಲಿ 5 ರಾಸುಗಳು ಮೃತಪಟ್ಟಿವೆ. ರೋಣ ತಾಲೂಕಿನಲ್ಲಿ 32, ನರಗುಂದ ತಾಲೂಕಿನಲ್ಲಿ 5, ಶಿರಹಟ್ಟಿ ತಾಲೂಕಿನಲ್ಲಿ 29 ಜಾನುವಾರು ಕಾಲು-ಬಾಯಿ ಬೇನೆಗೆ ತುತ್ತಾಗಿದ್ದು, ಮುಂಡರಗಿಯಲ್ಲಿ ಈ ರೋಗವು ಕಂಡುಬಂಡಿಲ್ಲ.
ಎಲ್ಲೆಲ್ಲಿ ರೋಗ: ಜಿಲ್ಲೆಯ ಹುಲಕೋಟಿ, ಗಜೇಂದ್ರಗಡ, ಬೆಳದಡಿ, ಕಳಸಾಪುರ, ಹರ್ತಿ, ಹೊಸೂರ, ಗಾಡಗೋಳಿ, ಕಳಸಾಪುರ, ಶಿರೋಳ, ಹುಲಕೋಟಿ, ಕೊಣ್ಣೂರ, ಶಿರಹಟ್ಟಿ ತಾಲೂಕಿನ ಮಜ್ಜೂರ ಗ್ರಾಮಗಳಲ್ಲಿನ ಜಾನುವಾರಿಗೆ ಹೆಚ್ಚಾಗಿ ಈ ಕಾಯಿಲೆ ಕಂಡು ಬಂದಿದೆ. ಹೆಚ್ಚಾಗಿ ಕಾಲು-ಬಾಯಿ ಬೇನೆಗೆ ಜಾನುವಾರು ಸಾಯಲ್ಲ. ಆದರೆ ಇದರಿಂದ ಉಂಟಾದ ಗಾಯಕ್ಕೆಅನ್ಯ ಬ್ಯಾಕ್ಟೀರಿಯಾ ತಗಲುವುದರಿಂದ ಜಾನುವಾರು ಸಾವನ್ನಪ್ಪುತ್ತಿವೆ.
ಇನ್ನು ಕೆಲವು ರೈತರು ತಮ್ಮ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಹಾಕಿಸದಿರುವುದರಿಂದಲೂ ಈ ರೋಗವು ಉಲ್ಬಣಕ್ಕೆ ಕಾರಣವಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

195668 ಜಾನುವಾರಿಗೆ ಲಸಿಕೆ
ರೋಗವನ್ನು ನಿಯಂತ್ರಿಸಲು ಪಶು ಸಂಗೋಪನಾ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ಈಗಾಗಲೇ ಗದಗ ತಾಲೂಕಿನಲ್ಲಿ 44671 ಜಾನುವಾರುಗಳಲ್ಲಿ 39577, ಮುಂಡರಗಿ ತಾಲೂಕಿನ 36577 ಜಾನುವಾರುಗಳಲ್ಲಿ 33093, ನರಗುಂದ ತಾಲೂಕಿನ 29264 ಜಾನುವಾರುಗಳಲ್ಲಿ 26900, ರೋಣ ತಾಲೂಕಿನ 59561 ಜಾನುವಾರುಗಳಲ್ಲಿ 57842 ಹಾಗೂ ಶಿರಹಟ್ಟಿ ತಾಲೂಕಿನಲ್ಲಿ 42184 ಜಾನುವಾರುಗಳಲ್ಲಿ 38257 ಜಾನುವಾರುಗಳಂತೆ ಒಟ್ಟು 212273 ಜಾನುವಾರು ಪೈಕಿ 195668 ಜಾನುವಾರುಗಳಿಗೆ ಈಗಾಗಲೇ ಲಸಿಕೆ ಹಾಕಲಾಗಿದೆ ಎಂದು ಪಶು ಸಂಗೋಪನಾ ಇಲಾಖೆಯ ಕಡತಗಳು ಹೇಳುತ್ತಿವೆ, ಆದರೆ ವಾಸ್ತವದಲ್ಲಿ ಸ್ಥಿತಿಯೇ ಬೇರೆಯಾಗಿದೆ.  

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಂಡುಬರುತ್ತಿರುವ ಈ ಕಾಲು-ಬಾಯಿ ಬೇನೆ ನಿಯಂತ್ರಣಕ್ಕೆ ಜಿಲ್ಲಾಡಳಿತವು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ 195668 (ಶೇ. 90) ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಅಲ್ಲದೇ ಕಾಯಿಲೆ ಹತೋಟಿಗೆ ಬರುವ ವರೆಗೂ ಜಿಲ್ಲೆಯಲ್ಲಿ ನಡೆಯುವ ದನದ ಸಂತೆಗಳನ್ನು ನಿಷೇಧಿಸುವಂತೆ ಸೂಚಿಸಲಾಗಿದೆ.
- ಎನ್.ಎಸ್. ಪ್ರಸನ್ನಕುಮಾರ, ಗದಗ ಜಿಲ್ಲಾಧಿಕಾರಿ
ಕಾಯಿಲೆ ಕಂಡು ಬಂದ ಗ್ರಾಮದ ಸುತ್ತಲಿನ ಗ್ರಾಮಗಳಲ್ಲಿನ ಜಾನುವಾರುಗಳಿಗೆ ಲಸಿಕೆ ಹಾಕಿ ಈ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಕಾಯಿಲೆ ಕಂಡು ಬಂದ ಬಳಿಕ ಲಸಿಕೆ ಹಾಕುವ ಪೂರ್ವದಲ್ಲಿ ತಪಾಸಿಸಿದ 318 ಜಾನುವಾರುಗಳ ಹಾಗೂ ಲಸಿಕೆ ನೀಡಿದ ನಂತರ ಜಾನುವಾರುಗಳ ಆರೋಗ್ಯದಲ್ಲಿ ಕಂಡು ಬಂದ ಬದಲಾವಣೆ ಕುರಿತು ಸಹ 284 ಜಾನುವಾರುಗಳ ಮಾದರಿಯನ್ನು ತಪಾಸಣೆಗೆ ಬೆಂಗಳೂರಿನ ಪಶು ಆರೋಗ್ಯ ಹಾಗೂ ಪಶು ಜೀವಶಾಸ್ತ್ರ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.
- ವಿ.ಜಿ. ಬಂಡಿ, ಗದಗ ಪಶುಸಂಗೋಪನೆ ಇಲಾಖೆ ಪ್ರಭಾರಿ ಉಪನಿರ್ದೇಶಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.