ಗದಗ

ಬಾಂಬ್ ಸ್ಫೋಟ: ಬಿಜೆಪಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಗದಗ, ಅ. 29
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪಟನಾ ಸಾರ್ವಜನಿಕ ಸಮಾವೇಶದ ಸಂದರ್ಭದಲ್ಲಿ ಬಾಂಬ್ ಸ್ಫೋಟ್ ನಡೆದಿರುವುದು ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬಿಹಾರ ರಾಜ್ಯದ ಪಟನಾದಲ್ಲಿ ಬಿಜೆಪಿಯ ಪ್ರಧಾನಿಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರ ಹೊಂಕಾರ್ ರ್ಯಾಲಿಯಲ್ಲಿ ವಿಧ್ವಂಸಕ ಕೃತ್ಯ ನಡೆದಿರುವುದು ನಮ್ಮ ರಾಷ್ಟ್ರದ ಭದ್ರತೆಯ ವೈಫಲ್ಯತೆವನ್ನು ಎತ್ತಿ ತೋರಿಸುತ್ತದೆ. ಕೇಂದ್ರ ಗುಪ್ತಚರ ಇಲಾಖೆ ಅಕ್ಟೋಬರ್ 23ರಂದು ಬಿಹಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರೂ ಬಿಹಾರ ಸರ್ಕಾರ ಕಣ್ಮುಚ್ಚಿ ಕುಳಿತಿದ್ದೇಕೆ? ಈ ಘಟನೆ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂದೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಘಟನೆಯಲ್ಲದೆ, ಕೇಂದ್ರ ಸರ್ಕಾರ ತನ್ನ ಮಹಾತ್ವಾಕಾಂಕ್ಷಿ ಯೋಜನೆ ಎಂದು ಹೇಳಿಕೊಳ್ಳುತ್ತಿರುವ ಆಧಾರ್ ಯೋಜನೆಯಿಂದ ಜನ ರೋಸಿಹೋಗಿದ್ದಾರೆ. ಸಿಲಿಂಡರ್ ಗ್ರಾಹಕರ ಸಬ್ಸಿಡಿ ಹಣ ಸಂದಾಯಕ್ಕೆ ಆಧಾರ್ ಕಾರ್ಡ್ ಕಡ್ಡಾಯ ಎಂದು ಹೇಳುತ್ತಿದ್ದಾರೆ. ಈ ಕುರಿತು ಸುಪ್ರೀಂಕೋರ್ಟ್ ಕೇಂದ್ರಕ್ಕೆ ಛೀಮಾರಿ ಹಾಕಿದೆ. ಕೂಡಲೇ ಆಧಾರ್ ಕಾರ್ಡ್ ಇಲ್ಲದಿದ್ದರೂ ಸಬ್ಸಿಡಿ ಹಣ ಸಂದಾಯ ಮಾಡುವಂತೆ ಒತ್ತಾಯಿಸಿದ್ದಾರೆ.
ಕಾಲುಬಾಯಿ ರೋಗದಿಂದ ರಾಜ್ಯದಲ್ಲಿ ಸಾವಿರಾರು ದನಕರಗಳು ಸತ್ತಿವೆ. ಇದಕ್ಕೆ ನಿಧಾನಗತಿಯಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಕಾರಣ. ಹೀಗಾಗಿ, ರೈತರಿಗೆ ಪರಿಹಾರ ಕಲ್ಪಿಸಬೇಕು. ರಾಜ್ಯದಲ್ಲಿ ಕಳಪೆ ಬೀಜ ರೈತರನ್ನು ಕಂಗೆಡಸಿದ್ದು, ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಂಡು ರೈತರಿಗಾದ ಹಾನಿಯನ್ನು ಭರಿಸಬೇಕು. ಗಣಿ ಹಗರಣದಲ್ಲಿ ಸಿಲುಕಿರುವ ಸಚಿವ ಸಂತೋಷ ಲಾಡ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ಡಿಸಿ ಮೂಲಕ ರಾಜ್ಯಪಾಲಗೆ ಮನವಿ ಸಲ್ಲಿಸಿದರು.
ಒಂದು ಗಂಟೆ ನಗರದ ಗಾಂಧೀ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಾತ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಜಿಪಂ ಪ್ರಭಾರಿ ಅಧ್ಯಕ್ಷ ರಮೇಶ ಮುಂದಿನಮನಿ, ಜಿಪಂ ಸದಸ್ಯ ಬೀರಪ್ಪ ಬಂಡಿ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ನಗರಸಭೆ ಸದಸ್ಯ ಪ್ರವೀಣ ಬನ್ಸಾಲಿ, ಛಗನ್‌ರಾಜ್ ಪುರೋಹಿತ್, ಕಾಂತಿಲಾಲ್ ಬನ್ಸಾಲಿ, ಬಾಬು ಸುಂಕದ, ಬಸವಣ್ಣೆಪ್ಪ ಚಿಂಚಲಿ, ತೋಟೋಸಾ ಭಾಂಡಗೆ, ಜಗನ್ನಾಥಸಾ ಭಾಂಡಗೆ, ಕಮಲಾಬಾಯಿ ಪೂಜಾರ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.