ಮಳೆ: ಕಳೆಗುಂದಿದ ಪುಷ್ಪ ಬೆಳೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಅ. 30
ಗಜೇಂದ್ರಗಡ ಹೋಬಳಿ ಫಲವತ್ತಾದ ಕೆಂಪು ಮಿಶ್ರಿತ ಮಣ್ಣು ಹೊಂದಿದ್ದು, ಅಂತರ್ಜಲ ಮಟ್ಟ ಉತ್ತಮವಾಗಿರುವುದರಿಂದ ಇಲ್ಲಿನ ರೈತರು ಅಲ್ಪ ಭೂಮಿಯಲ್ಲಿಯೇ ಹೆಚ್ಚಿನ ಲಾಭಾಂಶವನ್ನು ನೀಡುವ ಪುಷ್ಪೋದ್ಯಮಕ್ಕೆ ಒತ್ತು ನೀಡುತ್ತಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ಸುರಿದ ಅತಿಯಾದ ಮಳೆಯಿಂದ ಕಟಾವಿಗೆ ಬಂದ ಬೆಳೆಯಲ್ಲ ಸಂಪೂರ್ಣ ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಉತ್ತಮ ಬೆಲೆ ನಿರೀಕ್ಷೆ: ಪುಷ್ಪೋದ್ಯಮವನ್ನು ನಂಬಿದ ರೈತರಿಗೆ ಹೆಚ್ಚಿನ ಲಾಭ ಸಿಗುವುದೇ ದೀಪಾವಳಿ ಸಂದರ್ಭದಲ್ಲಿ. ಇದು ನಾಡಿನ ದೊಡ್ಡ ಹಬ್ಬವಾಗಿದ್ದು, ಮುಖ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಕರ್ನಾಟಕದ ಹೂವಿಗೆ ಪಕ್ಕದ ಮಹಾರಾಷ್ಟ್ರದಲ್ಲಿ ಭಾರಿ ಬೇಡಿಕೆ ಇರುತ್ತದೆ. ಇನ್ನೇನು ದೀಪಾವಳಿ ಬಂತು, ಹೊಲದಲ್ಲಿ ಬೆಳೆದ ಹೂವನ್ನು ಕಟಾವು ಮಾಡಿ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಸುರಿದ ಅತಿಯಾದ ಮಳೆ ರೈತರನ್ನು ಘಾಸಿಗೊಳಿಸಿದೆ. ಬೆಳೆದಿದ್ದ ಬೆಳೆಯಲ್ಲಿ ಶೇ 45ರಷ್ಟು ಈಗಾಗಲೇ ಹಾನಿಯಾಗಿದೆ.
ಚೆಂಡು ಹೂವು ಪ್ರಮುಖ: ದೀಪಾವಳಿ ಆಚರಣೆಗೆ ದಿನಗಣಣೆ ಪ್ರಾರಂಭವಾಗಿದೆ. ಝಗಮಗಿಸುವ ಬೆಳಕಿನ ಹಬ್ಬದ ಚೆಲುವನ್ನು ಚೆಂಡು ಹೂವು ಇಮ್ಮಡಿಗೊಳಿಸುತ್ತದೆ. ಜತೆಗೆ ಲಕ್ಷ್ಮೀ ಪೂಜೆಗೆ ಅಗತ್ಯವಾಗಿ ಚೆಂಡು ಹೂ ಬೇಕು. ಆದರೆ, ಅದೇ ಹೂವಿಗೆ ವರುಣನ ಅವಕೃಪೆ ತೋರಿದ ಹಿನ್ನೆಲೆಯಲ್ಲಿ ಇಳುವರಿಯಲ್ಲಿ ಕುಂಠಿತವಾಗಿ ರೈತರು ಪರದಾಡುವಂತಾಗಿದೆ.
ಗಜೇಂದ್ರಗಡ ಹೋಬಳಿ ವ್ಯಾಪ್ತಿಯ ಬಹುತೇಕ ತೋಟಗಳಲ್ಲಿ ರೈತರು ಈ ಬಾರಿ ಹೂವಿನ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಅದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ಈಗ ಮಾಡಿದ ಖರ್ಚು ಮರಳಿ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ಇಳುವರಿ ಕುಂಠಿತ: ಬೆಳಕಿನ ಹಬ್ಬ ದೀಪಾವಳಿಯಲ್ಲಿ ಅಲಂಕಾರಕ್ಕೆ ಬಳಸುವ ಚೆಂಡು ಹೂವು ಎಕರೆಗೆ ಸುಮಾರು 8 ಕ್ವಿಂಟಲ್ಗೂ ಅಧಿಕ ಇಳುವರಿ ಬರುವ ನಿರೀಕ್ಷೆ ಇತ್ತು. ಆದರೆ, ಆರಂಭದಲ್ಲಿ ಮಳೆ ಕೊರತೆ ಮತ್ತು ಹೂವು ಬಿಡುವ ಸಂದರ್ಭದಲ್ಲಿ ಸುರಿದ ಭಾರಿ ಮಳೆ, ಗಾಳಿಗೆ ಗಿಡಗಳು ನೆಲಕ್ಕುರುಳಿವೆ. ಪರಿಣಾಮ ಈ ಬಾರಿ ಎಕರೆಗೆ 2ರಿಂದ 3 ಕ್ವಿಂಟಲ್ ಚೆಂಡು ಹೂವು ಬಂದರೆ ಅದೇ ಜಾಸ್ತಿ ಎನ್ನುತ್ತಾರೆ ರೈತರು.
ತೀವ್ರ ನಷ್ಟ: ಕಳೆದ ವರ್ಷ ದೀಪಾವಳಿಯಲ್ಲಿ 1 ಕೆಜಿ ಚೆಂಡು ಹೂವು ರು. 40- 50ಗೆ ಮಾರಾಟವಾಗಿತ್ತು. ಕಳೆದ ಬಾರಿ ಉತ್ತಮ ಇಳುವರಿ ಬಂದಿದ್ದರಿಂದ ರೈತರಿಗೆ ಲಾಭವಾಗಿತ್ತು. ಈ ವರ್ಷ ಮಳೆ ಕೈಕೊಟ್ಟ ಪರಿಣಾಮ ಹೆಚ್ಚಿನ ಬೆಲೆಗೆ ಮಾರಾಟವಾದರೂ ನಷ್ಟ ತಪ್ಪುವುದಿಲ್ಲ ಎನ್ನುತ್ತಾರೆ ರೈತರು.
ಮಳೆಯಿಂದ ಇಷ್ಟೆಲ್ಲ ಹಾನಿಯಾಗಿದ್ದರೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಇತ್ತ ಸುಳಿದಿಲ್ಲ. ಅಲ್ಲದೆ, ರೈತರಿಗೆ ಬೆಳೆ ಉಪಚಾರಕ್ಕೆ ಅಗತ್ಯ ಮಾಹಿತಿಯನ್ನೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ರೈತರು.
ಎರಡು ಎಕರೆ ಭೂಮಿಯಲ್ಲಿ ಚೆಂಡ ಹೂವಾನ ಬೆಳಸಿನ್ರಿ... ಈ ಚೆಂಡ ಹೂವಾನಾ ನನ್ ಮಕ್ಕಳ್ನ ಬೆಳಸಿದಂಗ ಬೆಳಸಿದ್ದೀವ್ರಿ... ಮೊನ್ನೆ ಅದ್ಯಾವ್ದೋ ಚಂಡಮಾರುತದ ಮಳಿ ಏಕ ಸುರಿದಿದ್ರಿಂದ ಬೆಳದನಿಂತ ಚಂಡು ಹೂವಿನ ಗಿಡ ನಡಾ ಮುರುದು ಬಿದ್ದಾವರ್ರೀ. ಈ ಸಲ ಲಾಭಕ್ಕಿಂತಾನೂ ಲುಕ್ಸಾನಿನೇ ಬಾಳರಿ....
- ಮಹಾಂತೇಶ ಸೊಪ್ಪಿಮಠ,
ಚೆಂಡು ಹೂವು ಬೆಳೆದ ರೈತ
-ಡಿ.ಜಿ. ಮೋಮಿನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

