2 ರಾಜ್ಯೋತ್ಸವ ಪ್ರಶಸ್ತಿ ಗರಿ
ಕನ್ನಡಪ್ರಭ ವಾರ್ತೆ, ಗದಗ, ಅ. 31
58ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರವು ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಗದಗ ನಗರದಲ್ಲಿರುವ ರಂಗಭೂಮಿ ಕಲಾವಿದೆ ಪ್ಲೋರಿನಾಬಾಯಿ ಹಾಗೂ ಬೆಟಗೇರಿ ಭಾಗದಲ್ಲಿರುವ ಬಿ.ಬಿ. ಬಣ್ಣದ ಕಲಾ ತಂಡಕ್ಕೆ ಲಭಿಸಿದ್ದು, ಅವಳಿ ನಗರದ ಜನರಿಗೆ, ಅಭಿಮಾನಿಗಳಿಗೆ ಸಂತಸ ತಂದಿದೆ.
ಬಿ.ಬಿ. ಬಣ್ಣದ ಜಾನಪದ ಕಲಾಮೇಳ: ಬೆನಕಪ್ಪ ಬಿ. ಬಣ್ಣದ ಅವರು ದೊಡ್ಡಾಟ ಕಲಾವಿದರು. ಈ ದೊಡ್ಡಾಟ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಬಂದವರಲ್ಲಿ ಪ್ರಮುಖರು. ಇವರ ನಿಧನದ ನಂತರ ಬೆನಕಪ್ಪ ಬಣ್ಣದ ಅವರ ಮಗ ಅಶೋಕ ಬಣ್ಣದ 21-8-2000 ದಿಂದ ತಂದೆಯ ಸ್ಮರಣಾರ್ಥ ಬಿ.ಬಿ. ಬಣ್ಣದ ಜಾನಪದ ಕಲಾಮೇಳ ಎಂಬ ಸಂಘವನ್ನು ಸ್ಥಾಪಿಸಿ, ಚದುರಿ ಹೋಗಿದ್ದ ಎಲ್ಲ ಕಲಾವಿದರನ್ನು ಒಂದುಗೂಡಿಸಿ ಮತ್ತೆ ಈ ಕಲೆಗೆ ಜೀವ ತುಂಬಲಾರಂಭಿಸಿದರು.
ರಾಜ್ಯದ ಹಲವು ಜಿಲ್ಲೆ, ಅನ್ಯ ರಾಜ್ಯಗಳಲ್ಲಿಯೂ ತಮ್ಮ ಕಲಾಮೇಳದ ಪ್ರದರ್ಶನ, ಜಾನಪದ ಕಲಾವಿದರಿಗಾಗಿ ತರಬೇತಿ ಶಿಬಿರ ಹಮ್ಮಿಕೊಂಡು ಜಾನಪದ ಕಲೆಯನ್ನು ಬೆಳೆಸುತ್ತಾ ಬಂದಿದ್ದಾರೆ.
15-09-2002 ರಂದು 2 ದಿನಗಳ ವಿಚಾರ ಸಂಕಿರಣ ಹಾಗೂ ದೊಡ್ಡಾಟ ಪ್ರದರ್ಶನ, 2002ರಲ್ಲಿ ಲಕ್ಕುಂಡಿ ಉತ್ಸವದಲ್ಲಿ, 2005ರಲ್ಲಿ ಹಂಪಿ ಉತ್ಸವದಲ್ಲಿ, ಧರ್ಮಸ್ಥಳ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ, ಮೈಸೂರು ದಸರಾದಲ್ಲಿ 2 ಬಾರಿ, 2006ರಲ್ಲಿ ದೆಹಲಿಯಲ್ಲಿ, ಪೂನಾದ ಕನ್ನಡ ಸಂಘದ ಆಶ್ರಯದಲ್ಲಿ, ಆಂಧ್ರಪ್ರದೇಶದ ಹೈದ್ರಾಬಾದ್ ನಗರದಲ್ಲಿಯೂ ತಮ್ಮ ಕಲಾತಂಡದ ಮೂಲಕ ದೊಡ್ಡಾಟ ಪ್ರದರ್ಶನ ನೀಡಿದ ಕೀರ್ತಿ ಬಿ.ಬಿ. ಬಣ್ಣದ ಜಾನಪದ ಕಲಾ ತಂಡಕ್ಕೆ ಲಭಿಸುತ್ತದೆ.
2007ರಲ್ಲಿ ಜಾನಪದ ಕಲಾಜಾತ್ರೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು, 125 ಕಲಾವಿದರನ್ನು ಒಂದೇ ವೇದಿಕೆಯಲ್ಲಿ ತಂದು ತಮ್ಮ ವಿವಿಧ ಕಲೆಗಳ ಪ್ರದರ್ಶನ, 2009ರಲ್ಲಿ ಜಾನಪದ ಕಲಾ ಉತ್ಸವ ಎಂಬ ಕಾರ್ಯಕ್ರಮ ಹಮ್ಮಿಕೊಂಡು 150ಕ್ಕೂ ಅಧಿಕ ಕಲಾವಿದರು ತಮ್ಮ ಕಲೆಗಳಾದ ಜೋಗತಿ ನೃತ್ಯ, ಜಾನಪದ ಗೀತೆ, ಕೋಲಾಟ, ಸೋಬಾನ ಪದ, ವೀರಗಾಸೆ, ಪುರವಂತಿಕೆ ಮುಂತಾದ ಕಲೆಗಳನ್ನು ಪ್ರದರ್ಶಿಸಿ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದು, ಈ ಕಲಾತಂಡಕ್ಕೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅಭಿನಂದನಾರ್ಹವಾಗಿದೆ.
ರಂಗಭೂಮಿ ಕಲಾವಿದೆ ಪ್ಲೋರಿನಾಬಾಯಿ: ಗದಗ ನಗರದಲ್ಲಿರುವ ಹಿರಿಯ ರಂಗಭೂಮಿ ಕಲಾವಿದೆ ಪ್ಲೋರಿನಾ ಬಾಯಿ ರಂಗಭೂಮಿಯಲ್ಲಿ ನಿರಂತರ 60 ವರ್ಷಗಳಿಂದ 500ಕ್ಕೂ ಹೆಚ್ಚು ನಾಟಕಗಳಲ್ಲಿ ಹಾಸ್ಯ ಪಾತ್ರಗಳ ಮೂಲಕವೇ ನಾಟಕ ರಂಗವನ್ನೇ ಜೀವನವನ್ನಾಗಿಸಿಕೊಂಡು ಬದುಕಿದವರು.
1940ರಲ್ಲಿ ಜನಿಸಿರುವ ಪ್ಲೋರಿನಾಬಾಯಿ ತಮ್ಮ 11ನೇ ವಯಸ್ಸಿನಲ್ಲಿಯೇ ವೃತ್ತಿ ರಂಗಭೂಮಿಯನ್ನು ಪ್ರವೇಶಿಸಿದ್ದು ಅಲ್ಲಿಂದ ನಿರಂತರವಾಗಿ 500 ಹೆಚ್ಚು ನಾಟಕಗಳು, 2 ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿ, ಅಂದಿನ ಪ್ರಮುಖ ನಾಟಕ ಕಂಪನಿಗಳಲ್ಲಿ ಅಭಿನಯಿಸಿದ್ದಾಳೆ. ಬಂಜೆತೊಟ್ಟಿಲು, ಕೊರವಂಜಿ, ಸೇರಿದಂತೆ ಹಲವಾರು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕೊಟ್ಟೂರೇಶ್ವರ ನಾಟ್ಯ ಸಂಘದಲ್ಲಿಯೇ ನಿರಂತರ 25 ವರ್ಷ ಸೇವೆ ಸಲ್ಲಿಸಿದ್ದಾರೆ. ಇಂತಹ ರಂಗಭೂಮಿ ಕಲಾವಿದೆಗೆ 58ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
-ಅಜೀಜಅಹ್ಮದ ಬಳಗಾನೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

