ಗದಗ

ಇಂದಿನಿಂದ ಶಾಂತಿಗಾಗಿ ಸಾಹಿತ್ಯ ಅಭಿಯಾನ

Published On :

ಗದಗ: ಮಂಗಳೂರಿನ ಶಾಂತಿ ಪ್ರಕಾಶನದ ರಜತ ಮಹೋತ್ಸವದ ಅಂಗವಾಗಿ ರಾಜ್ಯವ್ಯಾಪಿ ಶಾಂತಿಗಾಗಿ ಸಾಹಿತ್ಯ ಅಭಿಯಾನವನ್ನು ನ. 1 ರಿಂದ 30ರವರೆಗೆ ಕೈಗೊಂಡಿದ್ದು, ಗದಗ ಜಿಲ್ಲೆಯಲ್ಲೂ ಅಭಿಯಾನ ನಡೆಯಲಿದೆ ಎಂದು ಅಭಿಯಾನದ ಸ್ವಾಗತ ಸಮಿತಿಯ ಗದಗ ಜಿಲ್ಲಾ ಸಂಚಾಲಕ ಜನಾಬ ಕೆ.ಐ. ಶೇಖ ಹೇಳಿದರು.  ಅವರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಂತಿ ಪ್ರಕಾಶನವು 25 ವರ್ಷಗಳಿಂದ ಕನ್ನಡ ಸಾಹಿತ್ಯ ರಂಗಕ್ಕೆ ತನ್ನ ಅಮೂಲ್ಯ ಕೊಡುಗೆ ನೀಡುತ್ತ ಬಂದಿರುವ ಮೌಲ್ಯಾಧಾರಿತ ಪ್ರಕಾಶನವಾಗಿದೆ. ಬಹುಧರ್ಮೀಯ ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಕೋಮು ಸೌಹಾರ್ದ ನೆಲೆಸಬೇಕಾದರೆ ಧರ್ಮಗಳ ಕುರಿತಂತೆ ಅತ್ಯಂತ ಸ್ಪಷ್ಟ ಮತ್ತು ಖಚಿತವಾದ ತಿಳಿವಳಿಕೆ ಇರಬೇಕಾದುದು ಅತ್ಯಗತ್ಯ. ಈ ಕಾರ್ಯವನ್ನು ಪ್ರಕಾಶನವು ತನ್ನ ಇತಿಮಿತಿಯಲ್ಲಿ ಮಾಡುತ್ತಿದೆ. 25 ವರ್ಷಗಳಲ್ಲಿ ಪ್ರಕಾಶನವು 250 ಕೃತಿಗಳನ್ನು ಪ್ರಕಟಿಸಿದೆ. ಅಭಿಯಾನದಲ್ಲಿ ಶಾಂತಿ ಪ್ರಕಾಶನದ ಸಾಹಿತ್ಯ ಕೃತಿಗಳ ಪರಿಚಯ ಹಾಗೂ ತನ್ಮೂಲಕ ಶಾಂತಿಯುತ ಸಮಾಜ ನಿರ್ಮಾಣದ ಉದ್ದೇಶದೊಂದಿಗೆ ಶಾಂತಿಗಾಗಿ ಸಾಹಿತ್ಯ ಎಂಬ ಅಭಿಯಾನವನ್ನು ಕೈಗೊಂಡಿದ್ದು, ಅಭಿಯಾನದ ರಾಜ್ಯಮಟ್ಟದ ಸ್ವಾಗತ ಸಮಿತಿಯಲ್ಲಿ ಹಾಗೂ ಜಿಲ್ಲಾಮಟ್ಟದ ಸಮಿತಿಯಲ್ಲಿ ಪ್ರಮುಖ ಸಾಹಿತಿಗಳು, ಪತ್ರಕರ್ತರು ಹಾಗೂ ಬುದ್ದಿಜೀವಿಗಳು ಒಳಗೊಂಡಿದ್ದಾರೆ. ರಾಜ್ಯಾದ್ಯಂತ ನಡೆಯುವ ಈ ಅಭಿಯಾನವು ಪ್ರತಿ ಜಿಲ್ಲೆಯಲ್ಲಿ ರಚನೆಗೊಂಡಿರುವ ಸಮಿತಿಯಿಂದ ಬೃಹತ್ ಪುಸ್ತಕ ಮೇಳ, ವಸ್ತು ಪ್ರದರ್ಶನ, ಸಾಹಿತ್ಯ-ಸಂವಾದ, ವಿಚಾರಗೋಷ್ಠಿ, ಮಹಿಳಾ ಮತ್ತು ಮಕ್ಕಳ ಕಾರ್ಯಕ್ರಮಗಳು, ಬಹುಭಾಷಾ ಕವಿಗೋಷ್ಠಿ, ಪ್ರಕಾಶಕರ ಸಮ್ಮಿಲನ ಮುಂತಾದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜತೆಗೆ ಅಭಿಯಾನದ ಪ್ರಯುಕ್ತ ವಿವಿಧ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು. ಜುನೇದ ಉಮಚಗಿ, ಮುನ್ನಾ ಕಲ್ಮನಿ, ಫಕ್ರುದ್ದೀನ್ ಢಾಲಾಯತ್, ರಾಜಮಹ್ಮದ ಇರಕಲ್, ಎ.ಎಸ್. ಖವಾಸ ಮುಂತಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಸಂಕಲ್ಪ ದಿನಾಚರಣೆ
ಹಾವೇರಿ: ರಾಷ್ಟ್ರೀಯ ಸಂಕಲ್ಪ ದಿನಾಚರಣೆ ಅಂಗವಾಗಿ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅಧ್ಯಕ್ಷತೆಯಲ್ಲಿ ಸಂಕಲ್ಪ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು ಸಿಬ್ಬಂದಿ ಉಪಸ್ಥಿತರಿದ್ದರು.
ಇಂದು ಸಚಿವ ಎಚ್ಕೆ ಭೇಟಿ
ಹಾವೇರಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ನ. 1ರಂದು ಬೆಳಗ್ಗೆ 11.30ಕ್ಕೆ ಗದಗನಿಂದ ಹೊರಟು, ಮಧ್ಯಾಹ್ನ 2 ಗಂಟೆಗೆ ರಾಣಿಬೆನ್ನೂರಿಗೆ ಆಗಮಿಸಿ, ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಗದುಗಿಗೆ ಮರಳಿ, ವಾಸ್ತವ್ಯ ಮಾಡುವರು.

ನಾಳೆಯಿಂದ ಜಕ್ಕಲಿ ಗ್ರಾಮದಿಂದ ಜಿಲ್ಲಾ ನುಡಿಹಬ್ಬಕ್ಕೆ ಚಾಲನೆ 
ನರೇಗಲ್ಲ: ಜಕ್ಕಲಿ ಗ್ರಾಮದ ಕರ್ನಾಟಕ ಏಕೀಕರಣ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರ ಸ್ಮರಣೆಯ ನಿಮಿತ್ತ ನುಡಿಹಬ್ಬ ಕಾರ್ಯಕ್ರಮವನ್ನು ನ. 2ರಂದು ಜಕ್ಕಲಿ ಗ್ರಾಮದಿಂದ ಪ್ರಾರಂಭಿಸಲಾಗುತ್ತಿದೆ. ಇದರಲ್ಲಿ ನಾಡಿನ ಗಣ್ಯಮಾನ್ಯರು ಭಾಗವಹಿಸಲಿದ್ದಾರೆಂದು ರೋಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶಿವರಾಜ ಗುರಿಕಾರ ಹೇಳಿದರು. ಅವರು ಗುರುವಾರ ಸಂಜೆ ಸ್ಥಳೀಯ ಹಿರೇಮಠದಲ್ಲಿ ರಾಜ್ಯೋತ್ಸವದ ಹಾಗೂ ಕನ್ನಡ ನುಡಿ ಹಬ್ಬದ ಪ್ರಯುಕ್ತ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಂದಾನಪ್ಪ ದೊಡ್ಡಮೇಟಿ ಅವರಿಗೆ ಗೌರವಾರ್ಪಣೆ ಸಲ್ಲಿಸುವ ನಿಮಿತ್ತ ನ. 2ರಂದು ಮಧ್ಯಾಹ್ನ 3ಗಂಟೆಗೆ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಸ್ಥಳೀಯ ಅನ್ನದಾನೇಶ್ವರ ಮಠದ ಮುಂಭಾಗದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಗೌರವಾರ್ಪಣೆಯನ್ನು ಜಕ್ಕಲಿ ಗ್ರಾಮದ ನ್ಯಾಯವಾದಿ ರವೀಂದ್ರನಾಥ ದೊಡ್ಡಮೇಟಿ ನೆರವೇರಿಸಿದರೆ, ಶಾಸಕ ರಾಮಕೃಷ್ಣ ದೊಡ್ಡಮನಿ ಮೆರವಣಿಗೆಗೆ ಚಾಲನೆ ನೀಡುವರು. ಮೆರವಣಿಗೆಯು ಅನ್ನದಾನೇಶ್ವರ ಮಠದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭುವನೇಶ್ವರಿ ರಂಗ ಮಂಟಪದವೆರೆಗೆ ಚಲಿಸುವುದು. ಮೆರವಣಿಗೆಯಲ್ಲಿ ಕುಂಭಮೇಳ, ಡೊಳ್ಳು ಹೆಜ್ಜೆಮೇಳ ಮುಂತಾದವುಗಳು ಭಾಗವಹಿಸಲಿವೆ ಎಂದರು.  ಸಿ.ಜಿ. ಹುಡೇದಗಡ್ಡಿ ಮಾತನಾಡಿ, ಜಿಲ್ಲಾ ನುಡಿ ಹಬ್ಬದ ಉದ್ಘಾಟನಾ ಸಮಾರಂಭವು ಜಕ್ಕಲಿ ಗ್ರಾಮದಲ್ಲಿ ಸಂಜೆ 4.30 ಗಂಟೆಗೆ ಶ್ರೀಭುವನೇಶ್ವರಿ ರಂಗಮಂಟಪದಲ್ಲಿ ನೆರವೇರಲಿದ್ದು, ಸಾನ್ನಿಧ್ಯವನ್ನು ಹಾಲಕೇರೆಯ ಅನ್ನದಾನ ಶ್ರೀಗಳು, ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ವಹಿಸುವರು. ರೋಣ ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು. ಆಶಯ ನುಡಿಯನ್ನು ಸಾಹಿತಿ ಹಾಗೂ ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ನೀಡುವರು. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ವಹಿಸಲಿದ್ದು, ಕರ್ನಾಟಕ ಏಕೀಕರಣಕ್ಕೆ ಅಂದಾನಪ್ಪ ದೊಡ್ಡಮೇಟಿಯವರ ಕೊಡುಗೆ ಕುರಿತು ಉಪನ್ಯಾಸವನ್ನು ಲಕ್ಷೇಶ್ವರದ ವಿಶ್ರಾಂತ ಪ್ರಾಧ್ಯಾಪಕ ಆರ್.ಬಿ. ಬನ್ನೂರ ನೀಡಲಿದ್ದಾರೆ. ಗಣ್ಯರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.