ಪ್ಲಾಸ್ಟರ್ ಗಣಪತಿಗೆ ಹೆಚ್ಚಿದ ಒಲವು
ಗದಗ: ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಿಂತ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಓಪಿ) ಗಣಪತಿ ಮೂರ್ತಿಗಳಿಗೆ ಭಾರಿ ಬೇಡಿಕೆ ಕಂಡು ಬರುತ್ತಿದೆ.
ಇವುಗಳ ನಿರ್ಮಾಣ ಮತ್ತು ಮಾರಾಟವನ್ನು ನಿಷೇಧಿಸುವಂತೆ ಗಣೇಶ ಮೂರ್ತಿ ವಿತರಕರ ಸಂಘದ ವತಿಯಿಂದ ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಆದರೂ ಜನತೆ ಮಾತ್ರ ಮಣ್ಣಿನ ಗಣಪತಿ ಮೂರ್ತಿಗಿಂತ ಪಿಓಪಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸುವತ್ತ ಒಲವು ತೋರುತ್ತಿದ್ದಾರೆ. ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಗದಗ ನಗರಕ್ಕೆ ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಪ್ರಮುಖ ಹೆಸರಿತ್ತು. ಮಾತ್ರವಲ್ಲ ಎಲ್ಲಿಲ್ಲದ ಬೇಡಿಕೆಯಿತ್ತು. ನೆರೆಯ ಬಾಗಲಕೋಟೆ, ಬಿಜಾಪುರ, ಹಾವೇರಿ, ಶಿವಮೊಗ್ಗ, ಕೊಪ್ಪಳ, ಕುಷ್ಟಗಿ ಸೇರಿದಂತೆ ಹಲವು ನಗರ ಪ್ರದೇಶಗಳಿಗೆ ಗದಗನಲ್ಲಿ ನಿರ್ಮಾಣ ಮಾಡುತ್ತಿದ್ದ ಪಿಓಪಿ ಗಣಪತಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಈಗ ಗದಗ ಜಿಲ್ಲೆಯ ಜನರಿಗೇ ಪಿಓಪಿ ಗಣಪತಿಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೈಗೆಟುಕುವ ಬೆಲೆಯಲ್ಲಿ: ಪಿಓಪಿ ಗಣೇಶ ವಿಗ್ರಹಗಳು ಪರಿಸರ ಸ್ನೇಹಿ ಅಲ್ಲ ಎನ್ನುವುದನ್ನು ಹೊರತುಪಡಿಸಿದಲ್ಲಿ ಇನ್ನುಳಿದಂತೆ ಸಾರ್ವಜನಿಕರಿಗೆ ಅನುಕೂಲಕಾರಿಯಾಗಿವೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಇನ್ನು ಮಣ್ಣಿನ ಗಣಪತಿಗಳಿಗೆ ಹಾಗೂ ಪಿಓಪಿ ಗಣಪತಿಗಳಿಗೆ ಹೋಲಿಸಿದಲ್ಲಿ ಪಿಓಪಿ ಗಣಪತಿಯು ಕಡಿಮೆ ಬೆಲೆಯಲ್ಲಿ ಹಾಗೂ ಕಡಿಮೆ ಭಾರವಿರುವುದರಿಂದ ಸಾರ್ವಜನಿಕರು ಪಿಓಪಿ ಗಣಪತಿಗೆ ಮಾರು ಹೋಗಿದ್ದಾರೆ. ಆದರೆ, ಈ ಬಾರಿ ಈ ಪಿಓಪಿ ಗಣಪತಿಗಳು ಅಗತ್ಯಕ್ಕೆ ತಕ್ಕಂತೆ ದೊರಕದೇ ಹಾಗೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವುದರಿಂದ ಸಾರ್ವಜನಿಕರು ಅನಿವಾರ್ಯವಾಗಿ ಮಣ್ಣಿನ ಗಣಪತಿಗಳಿಗೆ ಮಾರುಹೋದರೆ, ಇನ್ನು ಕೆಲವರು ಹೆಚ್ಚಿನ ಬೆಲೆತೆತ್ತು ಪಿಓಪಿ ಗಣಪತಿಗಳನ್ನು ಖರೀದಿಸುವಂತಾಗಿದೆ. ಇದಕ್ಕೆ ಮುಖ್ಯ ಕಾರಣ ಗದಗ ಜಿಲ್ಲೆಯಲ್ಲಿ ಪಿಓಪಿ ಗಣಪತಿಗಳ ತಯಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಸಾರ್ವಜನಿಕರ ಒತ್ತಾಸೆಯ ಮೇರೆಗೆ ಕೊಲ್ಲಾಪುರ, ಸೊಲ್ಲಾಪುರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಪಿಓಪಿ ಗಣಪತಿಗಳನ್ನು ತಂದು ಮಾರಾಟ ಮಾಡುತ್ತಿದ್ದು, ಇದರಿಂದ ಪಿಓಪಿ ಗಣಪತಿಗಳ ಬೆಲೆ ದುಪ್ಪಟ್ಟಾಗಿದೆ.
ದರ ಹೆಚ್ಚಳ: ಮಣ್ಣಿನ ಗಣಪತಿಗಿಂತ ಪಿಓಪಿ ಗಣಪತಿಗಳು ಕಡಿಮೆ ಭಾರವಿರುವುದರಿಂದ ಸಾರ್ವಜನಿಕ ಗಣಪತಿಯನ್ನಿಡುವಲ್ಲಿ ಹೆಚ್ಚಾಗಿ ಪಿಓಪಿ ಗಣಪತಿಗಳಿಗೆ ಮಾರು ಹೋಗಿದ್ದಾರೆ. ಆದರೆ, ಈ ಬಾರಿ ಇವುಗಳ ಬೆಲೆ ದುಪ್ಪಟ್ಟಾಗಿದೆ. ಕಳೆದ ಬಾರಿಗೂ ಈ ಬಾರಿಗೂ ಗಣೇಶ ಮೂರ್ತಿ ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯುಂಟಾಗಿದೆ. ಕಳೆದ ಬಾರಿ ರು. 100ಕ್ಕೆ ಸಿಗುತ್ತಿದ್ದ ಗಣಪತಿ ಈ ಬಾರಿ 170 ರಿಂದ 200, ರು. 1 ಸಾವಿರದ ಗಣಪತಿಗಳು ಇಂದು 1800-1850, ರು. 5 ಸಾವಿರದ ಗಣಪತಿಗಳು 7 ಸಾವಿರ, ರು. 6 ಸಾವಿರದ ಗಣಪತಿಗಳು ರು. 8400 ಹೀಗೆ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿದೆ.
ಕಳೆದ ಬಾರಿಗಿಂತ ಈ ಬಾರಿ ಮಣ್ಣಿನ ಗಣಪತಿಗಳ ಮಾರಾಟ ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ಮಣ್ಣಿನ ಗಣಪತಿ ನಿರ್ಮಿಸುವವರ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಈ ಕುರಿತು ಸರ್ಕಾರ ಗಮನಿಸಿ ಮಣ್ಣಿನ ಗಣಪತಿ ನಿರ್ಮಿಸುವ ಕಲೆಗಾರರ ಜೀವನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಪಿಓಪಿ ಗಣಪತಿಗಳ ಅಬ್ಬರಕ್ಕೆ ಮಣ್ಣಿನ ಗಣಪತಿಗಳು ಸಿಕ್ಕು ನಲುಗುತ್ತಿವೆ. ಪರಿಸರಕ್ಕೆ ಹಾನಿಯಾಗುವ ಪಿಓಪಿ ಗಣಪತಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
ಟ ನಾಗಪ್ಪ ಬಡಿಗೇರ, ಮಲ್ಲಪ್ಪ ಬಡಿಗೇರ, ಶಕುಂತಲಾ ಬಡಿಗೇರ
ಮಣ್ಣಿನ ಗಣಪತಿ ಮೂರ್ತಿ ನಿರ್ಮಿಸುವವರು
ಈ ಬಾರಿ ನಾವು ಗಣಪತಿಗಳನ್ನು ತಯಾರಿಸಿಲ್ಲ. ಆದರೂ ಕಳೆದ ಸಾಲಿಗಿಂತಲೂ ಈ ಬಾರಿ ಪಿಓಪಿ ಗಣಪತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಾರ್ವಜನಿಕರು ಪಿಓಪಿ ಗಣಪತಿಗಳೇ ಬೇಕು ಎಂಬ ಬೇಡಿಕೆಯಿಟ್ಟಿದ್ದರಿಂದ ಬೇರೆ ಜಿಲ್ಲೆಗಳಿಂದ ಪಿಓಪಿ ಗಣಪತಿಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ.
ಶಿವಕುಮಾರ ಕುಷ್ಟಗಿ/ಅಜೀಜಅಹ್ಮದ ಬಳಗಾನೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

