ಗದಗ

ನಿವೇಶನಕ್ಕೆ ಹಣ ಕಟ್ಟಿದವರು ಕಂಗಾಲು

Published On :

ಕನ್ನಡಪ್ರಭ ವಾರ್ತೆ, ಗದಗ, ಸೆ. 10
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಹಲವು ಅಧ್ವಾನಗಳ ಆಗರವಾಗಿದ್ದು, ಈಗ ಸಾರ್ವಜನಿಕರಿಗೆ ನಿವೇಶನ ನೀಡುವುದಾಗಿ ಹಣ ತುಂಬಿಸಿಕೊಂಡು ಈಗ ನಿವೇಶನವೂ ಇಲ್ಲ, ಮರಳಿ ಅವರಿಗೆ ಹಣವನ್ನೂ ನೀಡಿಲ್ಲ. ಈ ಬಗ್ಗೆ ಹಣ ಕಟ್ಟಿದವರು ಮರಳಿ ನಮ್ಮ ಹಣವನ್ನಾದರೂ ನೀಡಿರಿ ಎಂದು ಕೇಳಲು ಹೋದರೆ ಅಲ್ಲಿ ಅಧಿಕಾರಿಗಳೇ ಸಿಗುತ್ತಿಲ್ಲ.
ಹೌದು.. ಗದಗ ನಗರಾಭಿವೃದ್ಧಿ ಪ್ರಾಧಿಕಾರ 14 ವರ್ಷಗಳ ಹಿಂದೆ, ಅಂದರೆ 1999ರಲ್ಲಿ ಸಾರ್ವಜನಿಕರಿಗೆ ವಿವಿಧ ಮಾದರಿಯ ನಿವೇಶನಗಳನ್ನು ನೀಡಲಾಗುವುದು ಎಂದು ಜಾಹೀರಾತನ್ನು ನೀಡಿತ್ತು. ಅಂದು ಸಾರ್ವಜನಿಕರು ಗದಗ ನಗರದಲ್ಲಿ ನಮಗೂ ನಿವೇಶನ ಸಿಗುತ್ತದೆ ಎನ್ನುವ ಆಶಾಭಾವನೆಯಿಂದ ಪ್ರಾಧಿಕಾರ ಸೂಚಿಸಿದ ಖಾತೆಗೆ ಹಣವನ್ನು ಭರ್ತಿ ಮಾಡಿದ್ದಾರೆ. ಆಗ ಸಾರ್ವಜನಿಕರಿಗೆ ಹಣ ಭರಿಸಿದ ಬಗ್ಗೆ ರಸೀದಿ ನೀಡಿದ್ದು ಹೊರತು ಪಡಿಸಿದಲ್ಲಿ ಇಂದಿಗೂ ಆ ಕಾರ್ಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ.
4500 ಜನ ಹಣ ಕಟ್ಟಿದ್ದಾರೆ: ಅವಳಿ ನಗರದಲ್ಲಿ ನಿವೇಶನ ಸಿಗುತ್ತದೆ ಎನ್ನುವ ಉದ್ದೇಶದಿಂದ 1999ರಲ್ಲಿ 4500 ಜನರು (ಬೇರೆ ಬೇರೆ ಊರಿನವರೂ ಇದ್ದಾರೆ) ರು. 200ರಿಂದ 2000 ದವರೆಗೆ ಸೈಟಿನ ಅಳತೆಗನುಗುಣವಾಗಿ ಶುಲ್ಕದ ರೂಪದಲ್ಲಿ ರು. 28 ಲಕ್ಷಕ್ಕೂ ಹೆಚ್ಚಿನ ಹಣ ಕಟ್ಟಿದ್ದಾರೆ.
ಅಂದು ಹಣ ತುಂಬಿದವರಿಗೆ ಇಂದಿಗೂ ನಿವೇಶನವಾಗಲಿ, ಆ ವಿಷಯವಾಗಿ ಮುಂದುವರೆದಿರುವ ಪ್ರಕ್ರಿಯೆಯಾಗಲಿ ಯಾವೂದು ನಡೆಯುತ್ತಿಲ್ಲ. ಶುಲ್ಕ ಪಾವತಿಸಿದವರಿಗೆ ರಸೀದಿ ನೀಡಿದ್ದೇ ನಗರಾಭಿವೃದ್ಧಿ ಪ್ರಾಧಿಕಾರ ಮಾಡಿದ ದೊಡ್ಡ ಸಾಧನೆಯಾಗಿದೆ. ಹಣ ಕಟ್ಟಿ 14 ವರ್ಷವಾದ್ರೂ ಇದುವರೆಗೂ ಜನರಿಗೆ ತಾವು ಕಟ್ಟಿದ ಹಣವೂ ಇಲ್ಲ, ಇತ್ತ ನಿವೇಶನವೂ ಇಲ್ಲದೇ ಕಂಗಾಲಾಗಿದ್ದಾರೆ.
ಅವ್ಯವಸ್ಥೆ ಆಗರ: ಗದಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯಾವುದೂ ಸುಸೂತ್ರವಾಗಿಲ್ಲ. ಆಯುಕ್ತರು ಬರುತ್ತಾರೆ, ಹೋಗುತ್ತಾರೆ. ಯಾರೂ ಕಾಯಂ ಆಗಿ ನಿಲ್ಲುತ್ತಿಲ್ಲ. ಸಿಬ್ಬಂದಿಯೂ ಇಲ್ಲ. ಇದರಿಂದಾಗಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಇನ್ನು ಪ್ರಾಧಿಕಾರ ಇರೋದ್ರಲ್ಲೇ ಕೆಲಸವನ್ನು ಸರಿಯಾಗಿ ನಡೆಸುತ್ತಿದೆಯೇ ಎಂದರೆ ಅದೂ ಸರಿಯಾಗಿ ನಡೆಯುತ್ತಿಲ್ಲ. ಪ್ರಾಧಿಕಾರದ ಬಳಿ ಹಣವೇ ಇಲ್ಲ ಎಂದ ಮೇಲೆ ನಮಗೆಲ್ಲಿ ಸೈಟು ಸಿಗುತ್ತದೆ ಎನ್ನುವ ಅನುಮಾನ ಜನರಲ್ಲಿ ಕಾಡುತ್ತಿದೆ. ಈ ಕುರಿತು ಪ್ರಾಧಿಕಾರದ ಕಚೇರಿಗೆ ಅಲೆದು ಜನರಿಗೆ ಸಾಕಾಗಿದೆ. ಕಾನೂನಿನ ಪ್ರಕಾರ ಒಂದು ಬಾರಿ ಹಣ ಕಟ್ಟಿಸಿಕೊಂಡ ನಂತರ ಪ್ರಾಧಿಕಾರ ಹಣ ವಾಪಸ್ ನೀಡಲು ಸಾಧ್ಯವಿಲ್ಲ. ಹಣ ಕಟ್ಟಿದವರಿಗೆ ನಿವೇಶನವನ್ನೇ ನೀಡಬೇಕು. ಮೊದಲೇ ಅವ್ಯವಸ್ಥೆಯ ಆಗರವಾಗಿರುವ ಪ್ರಾಧಿಕಾರ ಹೇಗೆ ಆಕಾಂಕ್ಷಿಗಳಿಗೆ ನಿವೇಶನ ನೀಡುತ್ತದೆಯೋ ಕಾದು ನೋಡಬೇಕು.

ಸದ್ಯದಲ್ಲೆ ಪರಿಶೀಲನೆ
ನಾನು ಈದೀಗ ತಾನೇ ಅಧಿಕಾರ ವಹಿಸಿಕೊಂಡಿದ್ದೇನೆ. ನಿವೇಶನ ನೀಡುವ ಕುರಿತು ಹಣ ಕಟ್ಟಿಸಿಕೊಂಡಿರುವ ಕುರಿತಾಗಲೀ, ನಿವೇಶನ ನೀಡದಿರುವ ಬಗ್ಗೆಯಾಗಲಿ ನನಗೆ ಯಾವುದೇ ಮಾಹಿತಿ ಇಲ್ಲ. ಆದ್ದರಿಂದ ಶೀಘ್ರವೇ ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತೇನೆ. ಜನತೆ ಆತಂಕ ಪಡುವ ಅಗತ್ಯವಿಲ್ಲ.
- ಎನ್.ಎಸ್. ಪ್ರಸನ್ನಕುಮಾರ
ಜಿಲ್ಲಾಧಿಕಾರಿ

ಖಾತೆಯಲ್ಲಿ ಹಣ ಇಲ್ವಂತೆ
ಈ ವಿಷಯವಾಗಿ ಹಣವನ್ನು ಭರ್ತಿ ಮಾಡಿದ ಕೆಲವರು ಮಾಹಿತಿ ಹಕ್ಕಿನಡಿ ಪ್ರಾಧಿಕಾರದಿಂದ ಮಾಹಿತಿ ಪಡೆದುಕೊಂಡಿದ್ದು, ಅವರಿಗೆ ಲಭ್ಯವಾದ ಮಾಹಿತಿ ಆಧಾರದಲ್ಲಿ ಪ್ರಾಧಿಕಾರದ ಬ್ಯಾಂಕಿನ ಖಾತೆಯಲ್ಲಿ ಹಣವೇ ಇಲ್ಲವಂತೆ. (ನಿವೇಶನಕ್ಕಾಗಿ ಪಡೆದದ್ದು) ಹಾಗಾದರೆ ಆಕಾಂಕ್ಷಿಗಳಿಂದ ಸಂಗ್ರಹವಾದ ಲಕ್ಷಾಂತರ ಹಣ ಎಲ್ಲಿ ಹೋಯಿತು..? ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೇ ಇರುವುದು ನಿಜವೇ ? ಹಣ ದುರುಪಯೋಗವಾಗಿದಲ್ಲಿ ಅದಕ್ಕೆ ತಪ್ಪಿತಸ್ಥರು ಯಾರು? ಇಷ್ಟೊಂದು ವರ್ಷಗಳು ಕಳೆದರೂ ಈ ಪ್ರಕ್ರಿಯೆಗೆ ಯಾಕೆ ಚಾಲನೆ ನೀಡಿಲ್ಲ? ಎನ್ನುವ ಈ ಎಲ್ಲ ಪ್ರಶ್ನೆಗಳು ಅವಳಿ ನಗರದ ಸಾರ್ವಜನಿಕರನ್ನು ಕಾಡುತ್ತಿವೆ.
ಸಹನೆಗೂ ಮಿತಿಯಿದೆ
1999ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಗದಗ-ಬೆಟಗೇರಿ ಅವಳಿ ನಗರದ ವಸತಿ ರಹಿತರಿಗೆ ನಿವೇಶನ ನೀಡುವ ಯೋಜನೆಯನ್ನು ರೂಪಿಸಿ, ನಮ್ಮಿಂದ ಹಣವನ್ನು ಕಾಯ್ದಿರಿಸುವ ನಿಟ್ಟಿನಲ್ಲಿ ಪಡೆದುಕೊಂಡಿದ್ದಾರೆ. ನಮಗೆ ಇಂದು ನಿವೇಶನ ಸಿಗುತ್ತದೆ, ನಾಳೆ ಸಿಗುತ್ತದೆ ಎಂದು ಕಾದು ಹೈರಾಣಾಗಿದ್ದೇವೆ. ನಮ್ಮ ಸಹನೆಗೂ ಒಂದು ಮಿತಿ ಇದೆ. ಕೂಡಲೇ ಮೇಲಧಿಕಾರಿಗಳು ಗಮನಿಸಿ ಈ ಸಮಸ್ಯೆ ಬಗೆ ಹರಿಸದೇ ಇದ್ದಲ್ಲಿ ಅನಿವಾರ್ಯವಾಗಿ ನಾವು ಕಾನೂನು ಹೋರಾಟ ಮಾಡುತ್ತೇವೆ.
- ಮುಶ್ತಾಕ್ ಅಲಿ, ಶಾಂತೇಶ್,
ನಿವೇಶನದ ಆಕಾಂಕ್ಷಿಗಳು
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.