ಗದಗ

ಕಾಂಗ್ರೆಸ್, ಬಿಜೆಪಿ ತಂತ್ರ-ಪ್ರತಿತಂತ್ರ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಸೆ. 12
ನರಗುಂದದಲ್ಲೀಗ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ರಾಜಕೀಯ ಚಟುವಟಿಕೆ ಅತ್ಯಂತ ಜೋರಾಗಿ ಶುರುವಾಗಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಹಾಗೂ ಉಪಾಧ್ಯಕ್ಷ ಸ್ಥಾನ 'ಅ' ವರ್ಗಕ್ಕೆ ಮೀಸಲಾಗಿದೆ. ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇದೇ ವಿಷಯವೇ ಗಂಭೀರ ಚರ್ಚೆ ನಡೆಯುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರುಗಳ ತಂತ್ರ ಪ್ರತಿತಂತ್ರಕ್ಕೆ ಪುರಸಭೆ ವೇದಿಕೆಯಾಗಿ ಮಾರ್ಪಟ್ಟಿದೆ.
ಮಾಜಿ ಸಚಿವ ಸಿ.ಸಿ. ಪಾಟೀಲ ಈ ಭಾಗದಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿರುವ ಹಿನ್ನೆಲೆಯಲ್ಲಿ ಈಗಾಗಲೇ 2 ಅವಧಿಗೆ ಬಿಜೆಪಿ ಪುರಸಭೆಯ ಅಧಿಕಾರವನ್ನು ಹಿಡಿದಿತ್ತು. ಅದರಂತೆ ಕಳೆದ ಮಾರ್ಚ್‌ನಲ್ಲಿ ಜರುಗಿದ ಪುರಸಭೆ ಚುನಾವಣೆಯಲ್ಲಿಯೂ ಬಿಜೆಪಿಯೇ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರದ ಸನಿಹದಲ್ಲಿದೆ. ಆದರೆ, ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಆರ್. ಯಾವಗಲ್ಲ ಆಯ್ಕೆಯಾಗುವ ಮೂಲಕ ಬಿಜೆಪಿಗೆ ಅಲ್ಪ ಮಟ್ಟಿನ ಹಿನ್ನಡೆಯುಂಟಾಗಿದೆ. ಕಳೆದ ಒಂದು ವಾರದಿಂದ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದಲ್ಲಿ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಪುರಸಭೆಯಲ್ಲಿ ಅಧಿಕಾರ ಸ್ಥಾಪಿಸಲು ಹೆಣಗಾಡುತ್ತಿವೆ.
ಬಲಾಬಲ: ಒಟ್ಟು 23 ಸದಸ್ಯ ಬಲದ ಈ ಪುರಸಭೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದ ಹತ್ತಿರದಲ್ಲಿದೆ. ಕಾಂಗ್ರೆಸ್ ಪಕ್ಷವು 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಇನ್ನುಳಿದಂತೆ ಒಬ್ಬರು ಪಕ್ಷೇತರ ಹಾಗೂ ಇನ್ನೊಬ್ಬರು ಬಿಎಸ್‌ಆರ್ ಕಾಂಗ್ರೆಸ್‌ನಿಂದ ಗೆಲವು ಸಾಧಿಸಿದ್ದು ಇವರೇ ನಿರ್ಣಾಯಕವಾಗಲಿದ್ದಾರೆ. ಆದರೆ ಕಾಂಗ್ರೆಸ್ ಇನ್ನಿತರರು ಹಾಗೂ ಹಾಲಿ ಶಾಸಕರ ಒಂದು ಮತವನ್ನು ಪಡೆದು ಪುರಸಭೆ ಅಧಿಕಾರವನ್ನು ಪಡೆಯುವ ತವಕದಲ್ಲಿದೆ. ಇನ್ನು ಬಿಜೆಪಿಗೆ ಈಗಾಗಲೇ 12 ಸದಸ್ಯರಿದ್ದು ಸಂಸದರ ಮತವೊಂದನ್ನು ಪಡೆದು ಅಧಿಕಾರದ ಗದ್ದುಗೆ ಏರಲು    ತವಕದಲ್ಲಿದೆ.
ಸದಸ್ಯರು ಗೊಂದಲದಲ್ಲಿ: ಶತಾಯಗತಾಯ ಅಧಿಕಾರ ಹಿಡಿಯಬೇಕು ಎಂದು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದ್ದರೆ, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಪ್ರತಿ ತಂತ್ರ ರೂಪಿಸುತ್ತಿದೆ. ಇದರ ಮಧ್ಯೆ ಚುನಾಯಿತರಾಗಿರುವ ಸದಸ್ಯರಿಗೆ ಸಾಕಷ್ಟು ಗೊಂದಲ ಉಂಟಾಗುತ್ತಿದ್ದು, ಈ ಗೊಂದಲಗಳಿಂದ ಬೇಸತ್ತು ಹೋಗಿರುವ ಕೆಲ ಸದಸ್ಯರು, ನರಗುಂದದಲ್ಲಿರುವ ತಮ್ಮ ಮನೆ ಬಿಟ್ಟು ದೂರದಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸವಾಗುವಂತಹ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ಬಿಜೆಪಿಯ ಓರ್ವ ಸದಸ್ಯೆಯ ವಿಷಯವಾಗಿ ಕಾಂಗ್ರೆಸ್ ಹಾಗೂ        ಬಿಜೆಪಿ ಪಕ್ಷಗಳ ನಡುವೆ ಮಾತಿನ ಸಮರ ಪ್ರಾರಂಭವಾಗಿದೆ.
-ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.