ಗದಗ

ಟಿವಿ ದಾಸ್ಯದಿಂದ ಯುವಕರು ಕ್ರೀಡೆಗಳಿಂದ ವಿಮುಖ

Published On :

ಕನ್ನಡಪ್ರಭ ವಾರ್ತೆ, ಗದಗ, ಸೆ. 12
ಬದಲಾಗುತ್ತಿರುವ ಸಾರ್ವಜನಿಕ ವ್ಯವಸ್ಥೆಯಲ್ಲಿ ದೂರದರ್ಶನದ ಪ್ರಭಾವ ಅತ್ಯಂತ ಹೆಚ್ಚಾಗಿದ್ದು, ಯುವಕರು ಇದರ ಪ್ರಭಾವದಿಂದ ಇಂದು ಕ್ರೀಡಾ ಚಟುವಟಿಕೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಕೆ. ಹಬೀಬ ಹೇಳಿದರು.
ಅವರು ಗುರುವಾರ ಗದಗ ನಗರದ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ಕವಿವಿ ಏಕ ವಲಯದ ಸೈಕ್ಲಿಂಗ್ ಸ್ಪರ್ಧೆ ಹಾಗೂ ವಿಶ್ವವಿದ್ಯಾಲಯ ತಂಡದ ಆಯ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೈಹಿಕ ದಂಡನೆಯಿಂದ ಮಾನಸಿಕ ನೆಮ್ಮದಿ ಸಾಧ್ಯವಾಗಲಿದ್ದು, ವಿದ್ಯಾರ್ಥಿ ಜೀವನದಲ್ಲಿ ಕ್ರೀಡಾ ಚಟುವಟಿಕೆ ಹಾಗೂ ಕ್ರೀಡಾ ಮನೋಭಾವನೆಯಿಂದ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ಆದರೆ, ಇದಕ್ಕೆಲ್ಲಾ ಗಮನ ನೀಡಬೇಕಾದ       ಯುವಕರು ದುಶ್ಚಟಗಳಿಗೆ ದಾಸರಾಗಿ    ತಮ್ಮ ಆರೋಗ್ಯ ಸಂಪತ್ತನ್ನು ಹಾಳು    ಮಾಡಿಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ರಾಷ್ಟ್ರೀಯ ಸೈಕ್ಲಿಂಗ್ ಪಟು, ಕವಿವಿ ಸೈಕ್ಲಿಂಗ್ ಆಯ್ಕೆ ಸಮಿತಿ ಸದಸ್ಯೆ ಶಾರದಾ ನಿಂಬರಗಿ ಮಾತನಾಡಿ, ಮಾನಸಿಕ ನೆಮ್ಮದಿ ಕಾಯ್ದುಕೊಳ್ಳಲು ಕ್ರೀಡಾ ಚಟುವಟಿಕೆ ಅವಶ್ಯಕವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಮಾನಸಿಕ ಮತ್ತು ದೈಹಿಕ ಸಮತೋಲನ ಕಾಪಾಡಿಕೊಳ್ಳುವ ಮೂಲಕ, ಭಾವೀ ಜೀವನ ಉಜ್ವಲ ಗುರಿಯೊಂದಿಗೆ ಸಾಗಿಸಬೇಕು ಎಂದರು.
ಶಿಕ್ಷಣ ಸಂಸ್ಥೆಯ ಸದಸ್ಯ ಯು.ಡಿ. ಅಂಗಡಿ ಮಾತನಾಡಿ, ಕ್ರೀಡೆಗಳಲ್ಲಿ ಗೆಲುವು ಶಾಶ್ವತವಲ್ಲ, ಸೋಲು ಅಂತಿಮವಲ್ಲ ಅದಕ್ಕಾಗಿ ಪ್ರತಿಯೊಬ್ಬ ಕ್ರೀಡಾಪಟು ಉತ್ಸಾಹದಿಂದ ಪ್ರತಿಯೊಂದು ಸ್ಪರ್ಧೆಯಲ್ಲಿ ಹೊಸ ಹುಮ್ಮಸ್ಸಿನಿಂದ ಪಾಲ್ಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ ಜರುಗಿತು. ಆಯ್ಕೆ ಸಮಿತಿ ಸದಸ್ಯ ಎಫ್.ಬಿ. ಅಂಗಡಿ ಹಾಗೂ ಅನಂತ ದೇಸಾಯಿ ಪಾಲ್ಗೊಂಡಿದ್ದರು. ಉಪನ್ಯಾಸಕಿ ಎಸ್.ಡಿ. ಕುಲಕರ್ಣಿ ಸ್ವಾಗತಿಸಿದರು. ಜಿ.ಆರ್. ಕಾಯಕರ ನಿರೂಪಿಸಿದರು. ಶಶಿಕಾಂತ ಕೊರ್ಲಹಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.