ಗದಗ

ಸರ್ಕಾರಿ ಆಸ್ಪತ್ರೆ ಉದ್ಘಾಟನೆ ಯಾವಾಗ?

Published On :

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಸೆ. 13
ಸಮೀಪದ ಬಾಲೆಹೊಸೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಪೂರ್ಣಗೊಂಡು 6 ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಮಾತ್ರ ಕೂಡಿ ಬಂದಿಲ್ಲ.
ಇದರಿಂದಾಗಿ ಒಂದೆಡೆ ಬಡವರು ಸರ್ಕಾರಿ ಆಸ್ಪತ್ರೆಗಳಿಲ್ಲದೇ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದರೆ, ಇಲ್ಲಿ ಆಸ್ಪತ್ರೆ ಇದ್ದರೂ ಉದ್ಘಾಟನೆಗೊಳ್ಳದೇ ಸಾರ್ವಜನಿಕರು ಚಿಕಿತ್ಸೆಯಿಂದ ವಂಚಿತರಾಗುವಂತಾಗಿದ್ದು, ಇದು ಜಿಲ್ಲಾ ವೈದ್ಯಕೀಯ ಇಲಾಖೆಯ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತಿದೆ.
ಬಾಲೆಹೊಸೂರ ಗ್ರಾಮದ ನಿವೃತ್ತ ನೌಕರ ಫಕ್ಕೀರಪ್ಪ ಸಾಲಿ ಎಂಬುವವರು ತಮ್ಮ ಊರಿನ ಜನರು ಅನಾರೋಗಕ್ಕೆ ತುತ್ತಾಗಿ ಬಳಲಬಾರದು ಎನ್ನುವ ಉದ್ದೇಶದಿಂದ ಊರಿನ ಪಕ್ಕದಲ್ಲಿಯೇ ಇರುವ ಲಕ್ಷಾಂತರ ಮೌಲ್ಯದ ಅಮೂಲ್ಯ 2 ಎಕರೆ ಜಮೀನನ್ನು ಹಾಗೂ ರು. 1 ಲಕ್ಷ ಸರ್ಕಾರಿ ಆಸ್ಪತ್ರೆಯ ನಿರ್ಮಾಣಕ್ಕೆ ನೀಡಿದ್ದಾರೆ ಹಾಗೂ ತಮ್ಮ ಹೆಸರನ್ನು ಆ ಸರ್ಕಾರಿ ಆಸ್ಪತ್ರೆಯ ಕಟ್ಟಡಕ್ಕೆ ಇಡಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಾರೆ. ಅದರಂತೆ ಸರ್ಕಾರ ರು. 85 ಲಕ್ಷ ವೆಚ್ಚದಲ್ಲಿ ಸುಂದರವಾದ ಆಸ್ಪತ್ರೆ ನಿರ್ಮಾಣವಾಗಿದೆ. ಅಲ್ಲದೇ ಸರ್ಕಾರ ಇಲ್ಲಿನ ಆಸ್ಪತ್ರೆಗೆ ಓರ್ವ ವೈದ್ಯರನ್ನು ಹಾಗೂ ಇಬ್ಬರು ದಾದಿಯರನ್ನು ನಿಯೋಜನೆ ಮಾಡಿ ಆದೇಶ ನೀಡಿದೆ. ಆದರೆ ಈ ವೈದ್ಯರು ಪಕ್ಕದಲ್ಲಿನ ಸೂರಣಗಿಯಲ್ಲಿ ಸದ್ಯ ತಮ್ಮ ವೃತ್ತಿಯನ್ನು ಮಾಡುತ್ತಿದ್ದಾರೆ. ಈ ಆಸ್ಪತ್ರಗೆ ಹಲವಾರು ಬಾರಿ ಔಷಧಿಗಳು ಬಂದು ಹೋಗುತ್ತಿವೆ. ಆದರೆ, ಅವುಗಳು ಜನರಿಗೆ ಮಾತ್ರ ದೊರಕದಿರುವುದು ನೋವಿನ ಸಂಗತಿಯಾಗಿದೆ. ಆದರೆ, ಜಿಲ್ಲಾ ಆರೋಗ್ಯ ಇಲಾಖೆ ಫಕ್ಕೀರಪ್ಪ ಸಾಲಿ ಅವರ ಹೆಸರನ್ನು ಇಡಲು ಹಿಂದೆ ಮುಂದೆ ನೋಡುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಫಕ್ಕೀರಪ್ಪ ಸಾಲಿ ಅವರ ಹೆಸರನ್ನು ಆಸ್ಪತ್ರೆಗೆ ಇಡಲು ಗ್ರಾಮ ಪಂಚಾಯಿತಿ ಎಲ್ಲ ಅನುಮತಿಯನ್ನು ನೀಡಿದೆ. ಗ್ರಾಮಸ್ಥರು ಇದಕ್ಕೆ ಸಹಕಾರ ನೀಡಿದ್ದಾರೆ. ಆದರೆ ಆರೋಗ್ಯ ಇಲಾಖೆ ಮಾತ್ರ ಸುಮ್ಮನೆ ಕುಳಿತಿದೆ.
ಲಕ್ಷ್ಮೇಶ್ವರದಿಂದ ದೂರ: ಲಕ್ಷ್ಮೇಶ್ವರ ಪಟ್ಟಣದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಬಾಲೆಹೊಸೂರ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ಬಡವರು ಹಾಗೂ ಹಿಂದುಳಿದ ಪರಿಶಿಷ್ಟ ಜನಾಂಗದ ಜನರು ಸಾಕಷ್ಟು ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ನಿತ್ಯದ ದುಡಿಮೆಯಿಂದ ಜೀವನ ಸಾಗಿಸುತ್ತಾರೆ. ಇಂತಹ ಜನರು ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದು ಕಷ್ಟಸಾಧ್ಯ. ಅಲ್ಲದೆ ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ರೋಗಿಗಳು ಸಕಾಲದಲ್ಲಿ ವೈದ್ಯರು ಸಿಗದ ಕಾರಣ ಪ್ರಾಣ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಈ ಎಲ್ಲ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ನಿರ್ಮಾಣ ಮಾಡಿರುವ ಆಸ್ಪತ್ರೆಯು ಶೀಘ್ರ ಉದ್ಘಾಟನೆಯಾಗುವುದು ಅವಶ್ಯವಿದೆ.  
ಕಟ್ಟಡಕ್ಕೆ ಹಾನಿ ಸಾಧ್ಯತೆ: ಸರ್ಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆಯ ಉದ್ದೇಶ ಸಫಲವಾಗಬೇಕಾದಲ್ಲಿ ಕೂಡಲೇ ಅದನ್ನು ಉದ್ಘಾಟನೆಗೊಳಿಸಬೇಕಿದೆ. ಇಲ್ಲವಾದಲ್ಲಿ ನಿರ್ಮಾಣವಾಗಿರುವ ಕಟ್ಟಡಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ದೇವರು ವರ ಕೊಟ್ಟರೂ, ಪೂಜಾರಿ ವರ ಕೊಡಲಿಲ್ಲ ಎನ್ನುವಂತೆ ಚುನಾಯಿತ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಕಟ್ಟಡ ಕಾಮಗಾರಿ ಉದ್ಘಾಟನೆಯಿಂದ ದೂರ ಉಳಿದಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ. ಈ ವಿಷಯದಲ್ಲಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸುವರೇ ಎನ್ನುವುದನ್ನು ಕಾದು ನೋಡಬೇಕಿದೆ.
ಈಗಾಗಲೇ ಕಟ್ಟಡ ಕಾಮಗಾರಿ ಪೂರ್ಣ ಮುಗಿದಿರುವುದರಿಂದ ಕೂಡಲೇ ಅದನ್ನು ಉದ್ಘಾಟನೆಗೊಳಿಸಿ, ಸಾರ್ವಜನಿಕರ ಸೇವೆಗೆ ಅಣಿಗೊಳಿಸಬೇಕಿದೆ. ದಿನ ಕಳೆದಂತೆ ಕಟ್ಟಡದ ಸುತ್ತ ಮುತ್ತ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿ ಆಸ್ಪತ್ರೆಯ ಆವರಣ ಹಾಳಾಗುತ್ತಿದೆ. ಸಾರ್ವಜನಿಕರ ಸೇವೆಗೆ ಲಭ್ಯವಾಗಬೇಕಾದ ಆಸ್ಪತ್ರೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಘಾಟನೆಯಾಗದೇ ಹಾಗೆ ಉಳಿದುಕೊಂಡಿದೆ. ಈ ಕೂಡಲೇ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇತ್ತ ಗಮನ ನೀಡಿ ಗ್ರಾಮಸ್ಥರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಗಮನ ನೀಡಬೇಕು.
ಟ ಶಿವು ಕಬ್ಬೇರ, ನ್ಯಾಯವಾದಿ ಅನಂತ ಕಟ್ಟಿಮನಿ, ಫಕ್ಕೀರೇಶ ಮ್ಯಾಟಣ್ಣವರ
ಗ್ರಾಮಸ್ಥರು
ಈ ಕುರಿತು ಈಗಾಗಲೇ ಕ್ಷೇತ್ರದ ಶಾಸಕರ ಜತೆಯಲ್ಲಿ ಚರ್ಚಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಆರೋಗ್ಯ ಸಚಿವರ ವೇಳೆಯನ್ನು ತೆಗೆದುಕೊಂಡು ಬಾಲೆಹೊಸೂರ ಗ್ರಾಮದ ಸರ್ಕಾರಿ ಆಸ್ಪತ್ರೆಯನ್ನು ಸಾಧ್ಯವಾದಷ್ಟು ಬೇಗನೇ ಸಾರ್ವಜನಿಕರ ಸೇವೆಗೆ ಅಣಿಗೊಳಿಸಲಾಗುವುದು.
-ಡಾ. ಡಿ.ಬಿ. ಚೆನ್ನಶೆಟ್ಟಿ
ಜಿಲ್ಲಾ ವೈದ್ಯಾಧಿಕಾರಿ, ಗದಗ

-ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.