ಗದಗ

ಕ್ರೀಡಾ ಪೂರಕ ಕಾಮಗಾರಿಗೆ ಶೀಘ್ರ ಚಾಲನೆ

Published On :

ಗದಗ: ಯುವ ಪೀಳಿಗೆಯಲ್ಲಿ ಕ್ರೀಡಾ ಚಟುವಟಿಕೆ ಉತ್ತೇಜಿಸಲು ಗದಗ, ಬೆಟಗೇರಿ ಅವಳಿ ನಗರದಲ್ಲಿ ಹಲವಾರು ಕ್ರೀಡಾ ಪೂರಕ ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶನಿವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಹಂತದಲ್ಲಿ ಹಾಕಲಾಗಿದ್ದ ಯೋಜನೆ ಹಲವಾರು ವರ್ಷ ಕಳೆದರೂ ಅಪೂರ್ಣಗೊಂಡಿದ್ದು, ಅವುಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆಯ ಸಚಿವರೊಂದಿಗೆ ಚರ್ಚಿಸಿದ್ದು, ಶೀಘ್ರದಲ್ಲಿಯೇ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅದರಲ್ಲಿ ಮುಖ್ಯವಾಗಿ ಕ್ರೀಡಾಂಗಣ ಸುತ್ತಲೂ ನಿರ್ಮಿಸಿರುವ ಪ್ರೇಕ್ಷಕರ ಗ್ಯಾಲರಿಗೆ ರೂಪಿಂಗ್ ವ್ಯವಸ್ಥೆ ಕಲ್ಪಿಸಿ, ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು.
ಅವಳಿ ನಗರದ ಯುವ ಜನತೆಯ ಬಹು ದಿನದ ಬೇಡಿಕೆಯಾದ ಈಜುಗೊಳ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸುವ ಕಾರ್ಯ ಪ್ರಗತಿಯಲ್ಲಿದ್ದು, ಪ್ರಸ್ತುತ ವರ್ಷದಲ್ಲಿಯೇ ಈ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಬೆಟಗೇರಿ ಭಾಗದ ಗಾಂಧಿ ನಗರದಲ್ಲಿನ ಹಾಕಿ ಮೈದಾನದಲ್ಲಿ ಸುಸಜ್ಜಿತವಾದ ಹಾಕಿ ಕ್ರೀಡಾಂಗಣ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಈ ಕುರಿತು ಇರುವ ಸಣ್ಣ ಪುಟ್ಟ ತೊಡಕಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನಿಸಲು ಸೂಚಿಸಿದ್ದೇನೆ.
ಅವಳಿ ನಗರದ 5 ಪ್ರಮುಖ ಸ್ಥಳಗಳಾದ ಹುಡ್ಕೋ ಕಾಲೋನಿ, ಕರಿಯಮ್ಮನಕಲ್ಲು ಬಡಾವಣೆ, ಗಂಗಾಪುರ ಪೇಟೆ, ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಬಳಿ ಸುಸಜ್ಜಿತವಾದ ಜಿಮ್‌ಗಳನ್ನು ಸ್ಥಾಪಿಸಲಾಗುವುದು. ಅದರಲ್ಲಿ ಒಂದು ಜಿಮ್ ಮಹಿಳೆಯರಿಗಾಗಿಯೇ ಮೀಸಲಿಡಲಾಗುವುದು. ಗ್ರಾಮೀಣ ಕ್ರೀಡೆ ಕುಸ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಗರದ ಹನುಮನ ಗರಡಿ, ಗಂಗಾಪುರಪೇಟೆ, ಕುರಟ್ಟಿ ಪೇಟೆ, ಕುಂಬಾರ ಓಣಿಯಲ್ಲಿರುವ ಗರಡಿ ಮನೆಗಳನ್ನು ಅಭಿವೃದ್ಧಿ ಪಡಿಸಲಾಗುವುದು.
ಜಿಲ್ಲಾ ಕ್ರೀಡಾಂಗಣದಲ್ಲಿ ದೇಶಿ ಕ್ರೀಡೆಗಳಾದ ಖೋಖೋ, ಮಲ್ಲಕಂಬ, ಕಬಡ್ಡಿ, ಅಟ್ಯಾಪಟ್ಯಾ ಉತೇಜನಗೊಳಿಸುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ, ಇದಕ್ಕಾಗಿಯೇ ಓರ್ವ ತರಬೇತಿದಾರರನ್ನು ನೇಮಕ ಮಾಡಲು ಚಿಂತನೆ ನಡೆಸಲಾಗಿದೆ. ಅವಳಿ ನಗರದ ಕ್ರಿಕೆಟ್ ಪ್ರತಿಭೆ ಸುನೀಲ್ ಜೋಶಿ ಅವರ ಬೇಡಿಕೆಯಂತೆ ಗದಗ ನಗರದಲ್ಲಿ ಉತ್ತಮ ಕ್ರಿಕೆಟ್ ಮೈದಾನ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಅದಕ್ಕಾಗಿ ಸ್ಥಳ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಗುರಣ್ಣ ಬಳಗಾನೂರ, ಸಿ.ಎಂ. ಹುಲಗೂರ, ಅಕ್ಬರ್‌ಸಾಬ ಬಬರ್ಚಿ, ಸಿದ್ದು ಪಾಟೀಲ, ಸತೀಶ ಪಾಟೀಲ, ಲಿಂಗರಾಜ, ಉಮರ್‌ಫಾರೂಕ್ ಹುಬ್ಬಳ್ಳಿ, ಅಶೋಕ ಮಂದಾಲಿ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.