ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯಬೇಡಿ
ಗದಗ: ರಾಜಕೀಯ ಪಕ್ಷಗಳು ಮನುಷ್ಯರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಸುವುದಕ್ಕಿಂತ ಅವರ ಮನಸ್ಸಿನ ಮಧ್ಯೆ ಗೋಡೆ ಕಟ್ಟುವ ಕೆಲಸವನ್ನು ಮಾಡುತ್ತಿವೆ. ಹಾಗಾಗಿ ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಜನರನ್ನು ಜನರು ಧಿಕ್ಕರಿಸಬೇಕು ಎಂದು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.
ಭಾನುವಾರ ಬೆಟಗೇರಿಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕನ್ನಡ ಜನಾಭಿವೃದ್ಧಿ ವೇದಿಕೆ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೆಸರಿಗೆ ಮಾತ್ರ ಜಾತ್ಯತೀತ ಪಕ್ಷ ಎಂದು ಹೇಳಿಕೊಂಡು ಜಾತಿ ರಾಜಕಾರಣ ಮಾಡುತ್ತಿರುವ ಪಕ್ಷಗಳು ದೇಶದಲ್ಲಿ ತುಂಬಿಕೊಂಡಿವೆ. ದೇಶದಲ್ಲಿ ಯಾರು ಮೇಲು-ಕೀಳು ಎಂಬ ಭಾವನೆ ತಾಳಬಾರದು. ಇಲ್ಲಿ ಎಲ್ಲರೂ ಭಾರತೀಯರೆಂಬ ಭಾವನೆಯಿಂದ ಒಂದಾಗಿ ಬದುಕಬೇಕು.
ಎಲ್ಲರಿಗೂ ದೇಶದ ಮೇಲೆ ಸಮಾನ ಹಕ್ಕಿದೆ. ಇಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ ಯಾರೇ ಇರಲಿ ಸಾಮಾನ್ಯ ಪ್ರಜೆಯಷ್ಟೆ ಅವರಿಗೂ ಸ್ಥಾನ-ಮಾನವಿದೆ. ಇತರೆ ದೇಶಗಳಿಗೆ ಭಾರತವನ್ನು ಹೋಲಿಸಿದರೆ ನಾವು ಈತನಕ ಅಂದುಕೊಂಡಷ್ಟು ಸಾಧನೆ ಮಾಡಲು ಸಾಧ್ಯವಾಗಿಲ್ಲ.
ಅಮೆರಿಕ, ಕೋರಿಯಾ, ಶ್ರೀಲಂಕಾ ದೇಶಗಳ ವಾರ್ಷಿಕ ಆದಾಯವನ್ನು ನಮ್ಮ ರಾಷ್ಟ್ರಕ್ಕೆ ಹೋಲಿಸಿದರೆ ಸಾವಿರಾರು ಡಾಲರ್ ವ್ಯತ್ಯಾಸವಾಗುತ್ತದೆ. ಈ ವ್ಯವಸ್ಥೆಗೆ ದೇಶದ ಪ್ರತಿಯೊಬ್ಬ ಪ್ರಜೆಗಳು ಹೊಣೆ ಹೊರಬೇಕಿದೆ. ನಮ್ಮಲ್ಲಿರುವ ಸ್ವಾರ್ಥ ಭಾವನೆಯೇ ಇದಕ್ಕೆ ಕಾರಣವಾಗಿದೆ. ಎಲ್ಲರೂ ಪರಸ್ಪರ ಸೌಹಾರ್ದತೆಯಿಂದ ಬದುಕುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಜನಸಾಮಾನ್ಯರು, ಸರ್ಕಾರ ಹೇಳಿದರೂ ಪರಿಣಾಮ ಬೀರದ ವಿಷಯಗಳು ಶಿಕ್ಷಕರು ಹೇಳಿದರೆ ಪರಿಣಾಮ ಬೀರುತ್ತವೆ. ಹಾಗಾಗಿ ಶಿಕ್ಷಕರ ಪಾತ್ರ ಸಮಾಜದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ದೇಶದ ಅಖಂಡತೆ, ಸ್ವಾತಂತ್ರ್ಯತೆ, ಶಾಶ್ವತವಾಗಿರಿಸುವಲ್ಲಿ ಶಿಕ್ಷಕರ ಪಾತ್ರ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಹಾಗಾಗಿ ಶಿಕ್ಷಕರು ಸಮಾಜ ಬದಲಾವಣೆ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರೊ ಎಂ.ಕೆ. ಲಮಾಣಿ ಉಪನ್ಯಾಸ ನೀಡಿದರು. ಕನ್ನಡ ಜನಾಭಿವೃದ್ಧಿ ವೇದಿಕೆ ಅಧ್ಯಕ್ಷ ಹುಲ್ಲೇಶ ಭಜಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಜಿಲ್ಲೆಯ ವಿವಿಧ ತಾಲೂಕುಗಳ 31 ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸುಮತಿ ಹುಯಿಲಗೋಳ, ಮುತ್ತಣ್ಣ ಗದಗಿನ, ರಾಮಣ್ಣ ರಾಂಪುರ, ಮಂಜುನಾಥ ಮುಳಗುಂದ, ಎಸ್.ಎಂ. ಕೊಟಗಿ, ಮಾರುತಿ ಕವಲೂರ, ರಾಘವೇಂದ್ರ ಯಳವತ್ತಿ, ಸತೀಶ ಕುರಡಕೇರಿ, ಡಿ.ಎಸ್. ತಳವಾರ, ದೇವಪ್ಪ ಇಟಗಿ, ಅರವಿಂದ ಉಪಸ್ಥಿತರಿದ್ದರು. ಎಸ್.ಎಸ್. ಗುಜಮಾಗಡಿ ನಿರೂಪಿಸಿದರು. ಡಿ.ಎಸ್. ನಾಯ್ಕರ ವಂದಿಸಿದರು.
ಧಾರ್ಮಿಕ ಕಾರ್ಯಗಳಿಂದ ನೆಮ್ಮದಿ
ಗದಗ: ದೇವಸ್ಥಾನಗಳಲ್ಲಿ ನಡೆಯುವ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಗಳು ಇಂದಿನ ಆಧುನಿಕ ಒತ್ತಡದ ಜೀವನದಲ್ಲಿ ಶಾಂತಿ ನೆಮ್ಮದಿ ನೀಡುವ ಮಹಾನ್ ಕಾರ್ಯ ಮಾಡುತ್ತವೆ. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕೆಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ. ಶಂಕರ ಬಿದರಿ ಹೇಳಿದರು. ಅವರು ಭಾನುವಾರ ಬೆಟಗೇರಿ ಧೂಳಿಕಟ್ಟಿ ಮಾರುತಿ ದೇವಸ್ಥಾನದ ಗೋಪುರ ನಿರ್ಮಾಣ ಕಾರ್ಯ ವೀಕ್ಷಿಸಿ ನಂತರ ದೇವಸ್ಥಾನದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರಾಮಣ್ಣ ರಾಂಪುರ, ನಾರಾಯಣ ಚೂರಿ, ಶ್ರೀಶೈಲಪ್ಪ ಮುಳ್ಳಾಳ, ವಿಠ್ಠಲ ಮೇರವಾಡೆ, ಮುತ್ತಣ್ಣ ಗೋನಾಳ, ರವಿ ಗೆಜ್ಜಿ, ಚನ್ನಪ್ಪ ಗೆಜ್ಜಿ, ಮಲ್ಲೇಶಪ್ಪ ಕೊಪ್ಪಳದ ಮುಂತಾದವರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

