ಗದಗ

ಮಳೆ ಹಾನಿ: ಪುರಸಭೆ ನೂತನ ಅಧ್ಯಕ್ಷರ ಭೇಟಿ

Published On :

ಲಕ್ಷ್ಮೇಶ್ವರ: ಪಟ್ಟಣದ ಅನೇಕ ಕಡೆ 2-3 ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಗಂಗಮ್ಮ ಫಕ್ಕಿರಸ್ವಾಮಿಮಠ ಹಾಗೂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಅವರು ಹಾನಿಗೊಳಗಾದ  ಪ್ರದೇಶಗಳಿಗೆ ಶುಕ್ರವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾರಿ ಮಳೆಗೆ ಮಣ್ಣಿನ ಭಾಗಶಃ ಮನೆಗಳು ಕುಸಿದಿದ್ದರೆ, ಪಟ್ಟಣದ ಹಳ್ಳದಕೇರಿ, ಬಸ್ತಿಬಣ, ದೇಸಾಯಿಬಣ, ಹುಗೇರಿಬಣ ಹಾಗೂ ನೂತನ ಬಡಾವಣೆಗಳಾದ ವಿನಾಯಕ ನಗರ, ರಂಭಾಪುರಿ ನಗರ, ಗಂಗಾಧರ ನಗರ, ಇಂದಿರಾನಗರ ಮುಂತಾದ ಪ್ರದೇಶಗಳಲ್ಲಿ ಮಳೆಯ ನೀರು ಮನೆಯೊಳಗಡೆ ನುಗ್ಗಿದ್ದರಿಂದ ಮನೆ ಮಂದಿಯೆಲ್ಲಾ ಅಹೋರಾತ್ರಿ ನೀರನ್ನು ಹೊರ ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆ ನೂತನ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್. ಪಾಟೀಲ, ಸದಸ್ಯ ಗುರುರಾಜ ಮೆಡ್ಲೇರಿ, ಅನಿಲ ಮುಳಗುಂದ, ಲೆಂಕೆಪ್ಪ ಶರಸೂರಿ, ಶಂಕ್ರಮ್ಮ ಕರಡಿ, ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ, ಪುರಸಭೆಯ ಅಭಿಯಂತರ ಹಾಗೂ ಇತರೇ ಅಧಿಕಾರಿ ವರ್ಗದವರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅಲ್ಲಿರುವ ಅವ್ಯವಸ್ಥೆಗೆ ಮತ್ತು ಅವಶ್ಯಕವಿರುವ ಮೂಲ ಸೌಕರ್ಯಕ್ಕೆ ಸಂಬಂಧಪಟ್ಟಂತೆ ಕೂಡಲೇ ತ್ವರಿತಗತಿ ಕ್ರಮಕೈಗೊಳ್ಳಲು ಸ್ಥಳದಲ್ಲಿಯೇ ಆದೇಶ ನೀಡಿದರು.  
ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ
ಗದಗ: ದೀನ ದಲಿತರಿಗೆ, ಅಂಧರಿಗೆ ಬಾಳು ಕೊಟ್ಟು ಅವರ ಜೀವನ ನಡೆಸಿ ನಡೆದಾಡುವ ದೇವರೆಂದೆ ಹೆಸರಾದವರು ಡಾ. ಪುಟರಾಜ ಕವಿ ಗವಾಯಿಗಳು ಎಂದು ಗದಗ-ಬೆಟಗೇರಿ ನಗರಸಭೆ ಸದಸ್ಯೆ ಕಮಲಾ ಹಾದಿಮನಿ ಹೇಳಿದರು. ಅವರು ಈಚೆಗೆ ಸ್ಥಳೀಯ ಗಂಗಾಪುರ ಪೇಟೆಯ ಮಾರುತಿ ಯುವಕ ಮಂಡಳದ ಆಶ್ರಯದಲ್ಲಿ ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಎಲ್ಲ ದಾನಕ್ಕಿಂತ ಶ್ರೇಷ್ಠವಾದ ಜ್ಞಾನವೇ ವಿದ್ಯಾದಾನ. ಅಂಗವಿಕಲರಿಗೆ ಜ್ಞಾನದ ಸಂಗೀತದ ಲೋಕವನ್ನು ಹರಿಸಿದ ಶ್ರೇಷ್ಠ ಪುಟ್ಟರಾಜ ಗವಾಯಿಗಳು ಕಣ್ಣಿಲ್ಲದವರಿಗೆ ಕಣ್ಣು ಕೊಟ್ಟ ದೇವರು. ಸಮಾಜಕ್ಕೆ ನಾವು ಋಣ ತೀರಿಸಬೇಕೆಂದರೆ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರು ಹಾಕಿಕೊಟ್ಟ ಹಾದಿಯಲ್ಲಿ ನಡೆದುಕೊಳ್ಳಬೇಕು ಎಂದರು. ಬಾಬು ಬಾಕಳೆ, ಗಿರೀಶ ಕರ್ನೆ, ಮಂಜುನಾಥ ಅರಸಿದ್ದಿ, ರಾಜು ಬಾಕಳೆ, ರತ್ನಾ ನಾಕೊಡ, ಮಂಜುಳಾ ಕಲಬುರ್ಗಿ, ಶ್ರೀದೇವಿ ಕಬಾಡಿ, ವಿಮಲಾಬಾಯಿ ಕಲಬುರ್ಗಿ ಮುಂತಾದವರು ಇದ್ದರು.

ರಸ್ತೆಯಲ್ಲಿ ಸಿಲುಕಿಕೊಂಡ ಟ್ರಕ್: ಪರದಾಡಿದ ಜನತೆ
ಲಕ್ಷ್ಮೇಶ್ವರ: ಪಟ್ಟಣದ ಹೊರವಲಯದಲ್ಲಿನ ಮಂಜಲಾಪುರ-ದೇವಿಹಾಳ ರಸ್ತೆಯಲ್ಲಿ ಮರಳು ತುಂಬಿದ ಟ್ರಕ್‌ವೊಂದು ಸಿಲುಕಿಕೊಂಡು ಜನರ ಸಂಚಾರಕ್ಕೆ ತೊಂದರೆ ಉಂಟಾಗಿ ಸಾರ್ವಜನಿಕರು ಪರದಾಡಿದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಸಮೀಪದ ಮಂಜಲಾಪುರ (ಪಟ್ಟಣದ 23ನೇ ವಾರ್ಡ್) ಹತ್ತಿರ ಭಾನುವಾರ ಸಂಜೆ ಮರಳು ತುಂಬಿದ ಟ್ರಕ್‌ವೊಂದು ತಾಂತ್ರಿಕ ದೋಷದಿಂದ ನಡು ದಾರಿಯಲ್ಲಿ ನಿಂತುಕೊಂಡಿದೆ. ಇದು ಸೋಮವಾರ ಮಧ್ಯಾಹ್ನದವರೆಗೆ ದುರಸ್ತಿಯಾಗದೆ ಹಾಗೆ ನಿಂತಿದೆ. ಈ ಸಂದರ್ಭದಲ್ಲಿ ಮರಳು ಸಾಗಿಸುವ ಇನ್ನೊಂದು ಟ್ರಕ್ ಕೆಟ್ಟು ನಿಂತ ಟ್ರಕ್ ಪಕ್ಕದಲ್ಲಿ ಹೋಗುವಾಗ ರಸ್ತೆ ಕುಸಿದ ಪರಿಣಾಮ ಎರಡು ಟ್ರಕ್‌ಗಳು ಅಕ್ಕಪಕ್ಕ ಸಿಲುಕಿಕೊಂಡಿವೆ. ಹೀಗಾಗಿ ಸೋಮವಾರ ಮಧ್ಯಾಹ್ನದ ನಂತರ ಲಕ್ಷ್ಮೇಶ್ವರ ದೇವಿಹಾಳ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಯಾವುದೇ ಬಸ್ ಸಂಚಾರವಿರದೆ ಪ್ರಯಾಣಿಕರು ಪರದಾಡಿದ್ದಾರೆ. ಪು,ಬಡ್ನಿ, ಅಡರಕಟ್ಟಿ, ಬಟ್ಟೂರ, ಕುಂದ್ರಳ್ಳಿ, ಆದರಳ್ಳಿ, ಶೆಟ್ಟಿಕೇರಿ, ಬೆಳ್ಳಟ್ಟಿಗೆ ಹೋಗುವ ವಾಹನಗಳ ಸಂಚಾರ ಸ್ಥಗಿತಗೊಂಡು ಸಮಸ್ಯೆಯಾಗಿತ್ತು. ಈ ಹಿಂದೆ ಸುರಿದ ಮಳೆಯಿಂದ ರಸ್ತೆಗಳೆಲ್ಲ ಹೊಂಡಗಳಾಗಿವೆ. ಇದಕ್ಕೆ ಕಳಪೆ ಕಾಮಗಾರಿ ಕಾರಣವಿದೆ. ಇದರಿಂದ ತಾಲೂಕಿನ ರಸ್ತೆಗಳೆಲ್ಲ ಕಿತ್ತುಹೋಗಿವೆ. ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ಈ ರಸ್ತೆಗಳ ಸುಧಾರಣೆಗೆ ಕ್ರಮಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.